15 ಸಾವಿರ ಶಿಕ್ಷಕರ ನೇಮಕ: ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸಲು ಸಿಎಂ ಸಿದ್ದರಾಮಯ್ಯ ಸೂಚನೆ
ಬೆಂಗಳೂರು: ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ 800 ‘ಕರ್ನಾಟಕ ಪಬ್ಲಿಕ್ ಸ್ಕೂಲ್’ (ಕೆಪಿಎಸ್)ತೆರೆಯುವ ಸಂಬಂಧ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲಿ ಆರಂಭಿಸಬೇಕು. ಜತೆಗೆ 15 ಸಾವಿರ ಶಿಕ್ಷಕರ ನೇಮಕ ಸಂಬಂಧ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಬುಧವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮ ಅಧ್ಯಕ್ಷತೆ ನಡೆದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಭೆಯಲ್ಲಿ ಅಧಿಕಾರಿಗಳಿಗೆ ಮೇಲ್ಕಂಡ ಸೂಚನೆ ನೀಡಿದರು. ಜೂನ್ 1ಕ್ಕೆ ‘ಕರ್ನಾಟಕ ಪಬ್ಲಿಕ್ ಸ್ಕೂಲ್’ ಯೋಜನೆಗೆ ಶಿವಮೊಗ್ಗ ನಗರದಲ್ಲಿ ಚಾಲನೆ ನೀಡಲಾಗುವುದು. ಒಂದು ಕೆಪಿಎಸ್ ಶಾಲೆಯಲ್ಲಿ 1,200 ಮಂದಿ ಮಕ್ಕಳ ಪ್ರವೇಶಕ್ಕೆ ಅವಕಾಶ ಸಿಗಲಿದ್ದು, ಎಲ್‍ಕೆಜಿಯಿಂದ ಪಿಯುಸಿಯ ವರೆಗೆ ಒಂದೇ ಕಡೆ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಿಕ್ಷಣ ದೊರೆಯಲಿದೆ ಎಂದರು.
‘ಕರ್ನಾಟಕ ಪಬ್ಲಿಕ್ ಸ್ಕೂಲ್’(ಕೆಪಿಎಸ್)ಗಳಿಗೆ ಮಕ್ಕಳನ್ನು ಕರೆತರಲು ಶಾಲಾ ಬಸ್ ವ್ಯವಸ್ಥೆ ಸೌಲಭ್ಯ ಕಲ್ಪಿಸುವ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಅಲ್ಲದೆ, ಶಾಲಾ ಮಕ್ಕಳಿಗೆ ಉಚಿತವಾಗಿ ನೋಟ್ ಬುಕ್ ವಿತರಣೆ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಫಲಿತಾಂಶ ಸುಧಾರಣೆ: ಈ ಬಾರಿ ಎಸೆಸೆಲ್ಸಿಯಲ್ಲಿ ಶೇ.94.10ರಷ್ಟು ಫಲಿತಾಂಶ ದಾಖಲಾಗಿದ್ದು, ಕಳೆದ ವರ್ಷಕ್ಕಿಂತ ಶೇ.14.06 ಹೆಚ್ಚಾಗಿದೆ. ಪಿಯುಸಿಯಲ್ಲಿ ಈ ಬಾರಿ ಶೇ.86.48ರಷ್ಟು ಹೆಚ್ಚಳವಾಗಿದ್ದು, ಕಳೆದ ವರ್ಷಕ್ಕಿಂತ ಶೇ.13ರಷ್ಟು ಹೆಚ್ಚಳವಾಗಿದೆ. ಎಸೆಸೆಲ್ಸಿಯಲ್ಲಿ ಈ ವರ್ಷ ಶೇ.100ರಷ್ಟು ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆ 2,393 ಇದ್ದು ಕಳೆದ ವರ್ಷ 766 ಶಾಲೆಗಳು ಶೇ.100ರಷ್ಟು ಫಲಿತಾಂಶ ದಾಖಲಿಸಿದ್ದವು.
ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಎಸ್‍ಸಿ-ಎಸ್‍ಟಿ ವಿದ್ಯಾರ್ಥಿಗಳ ಫಲಿತಾಂಶ ಶೇ.18ರಷ್ಟು ಹೆಚ್ಚಳವಾಗಿದೆ. ಇದೇ ರೀತಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಫಲಿತಾಂಶ ಗಣನೀಯವಾಗಿ ಸುಧಾರಣೆಯಾಗಿದೆ. ಪ್ರವರ್ಗ-1 ಶೇ.16.6, 2 ‘ಎ’-ಶೇ.11.5, 2 ‘ಬಿ’- ಶೇ.18, 3ಎ-ಶೇ.8.12, 3ಬಿ- ಶೇ.10ರಷ್ಟು ಫಲಿತಾಂಶ ಸುಧಾರಣೆಯಾಗಿದೆ. ಕಲ್ಯಾಣ ಕರ್ನಾಟಕದಲ್ಲಿ ಭಾಗದಲ್ಲಿಯೂ ಫಲಿತಾಂಶ ಸುಧಾರಣೆಯಾಗಿದ್ದು, ಖಾಸಗಿ ಶಾಲೆಗಳಿಗೆ ಹೋಲಿಸಿದರೆ ಶೇ.2ರಷ್ಟು ಹೆಚ್ಚಾಗಿದೆ ಎಂದು ತಿಳಿಸಲಾಗಿದೆ.
‘ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಫಲಿತಾಂಶ ಉತ್ತಮಪಡಿಸಲು ಅತಿಥಿ ಶಿಕ್ಷಕರನ್ನು ನೇಮಕ, ಪಠ್ಯ ಆಧಾರಿತ ಅಧ್ಯಯನ ಕ್ರಮವನ್ನು ರೂಪಿಸಲಾಗಿತ್ತು. ರಾಜ್ಯ ಮಟ್ಟದಲ್ಲಿ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ಕಾಲ ಕಾಲಕ್ಕೆ ಶಿಕ್ಷಕರಿಗೆ ತರಬೇತಿ ನೀಡುವ ಮೂಲಕ ಮೇಲ್ವಿಚಾರಣೆ ಕೈಗೊಳ್ಳಲಾಗಿತ್ತು. ಕಲ್ಯಾಣ ಕರ್ನಾಟಕ ಭಾಗದಲ್ಲಿ ಫಲಿತಾಂಶ ಉತ್ತಮಗೊಳ್ಳಲು ವಿಶೇಷ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ʼ
-ಮಧು ಬಂಗಾರಪ್ಪ, ಶಿಕ್ಷಣ ಸಚಿವ