×
Ad

ಗುತ್ತಿಗೆದಾರರ ಮನೆಯಲ್ಲಿ ನಗದು ಪತ್ತೆ ಪ್ರಕರಣ: ಈಡಿ ತನಿಖೆಗೆ ಬಿಎಸ್ಸೈ ಆಗ್ರಹ

Update: 2023-10-16 19:14 IST

ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ಗುತ್ತಿಗೆದಾರರ ನಿವಾಸದಲ್ಲಿ ಭಾರೀ ಮೊತ್ತದ ನಗದು ಪ್ರಕರಣ ಗಂಭೀರವಾಗಿದ್ದು, ಇದರ ತನಿಖೆಯನ್ನು ಜಾರಿ ನಿರ್ದೇಶನಾಲಯ ಅಥವಾ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಒತ್ತಾಯಿಸಿದ್ದಾರೆ.

ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ದಾಳಿಯಲ್ಲಿ ಹಣ ಸಿಕ್ಕಿದ್ದ ಪ್ರಕರಣದಲ್ಲಿ ತನಿಖೆ ಬಳಿಕ ಹಣದ ಮೂಲ ಗೊತ್ತಾಗಲಿದೆ. ಚುನಾವಣೆಗೆ ಹಣ ಸಂಗ್ರಹ ಮಾಡಿರೋದು ನಿಜವೆಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆರೋಪಿಸಿದ್ದಾರೆ. ಕಾಂಗ್ರೆಸ್‍ನವರು ಚುನಾವಣೆಗೆ ಹಣ ಸಂಗ್ರಹ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ದೂರಿದರು.

ಈಡಿ ಮತ್ತು ಸಿಬಿಐ ತನಿಖೆ ಮಾಡಿದರೆ ವಾಸ್ತವಾಂಶ ಹೊರಗೆ ಬರಲಿದೆ. ಹಾಗಾಗಿ ನಾನೂ ಕೂಡ ಈಡಿ ತನಿಖೆಗೆ ಆಗ್ರಹ ಮಾಡುತ್ತೇನೆ ಎಂದ ಅವರು, ರಾಯಚೂರು ಜಿಲ್ಲೆ ಪ್ರವಾಸ ಮುಗಿಸಿ ಬರುತ್ತಿದ್ದೇನೆ. ಎಲ್ಲೆಡೆ ವಿದ್ಯುತ್ ಕಣ್ಣಾಮುಚ್ಚಾಲೆ ಇದೆ. ಪಂಪ್ ಸೆಟ್ ಇರುವ ರೈತರು ಸಂಕಷ್ಟದಲ್ಲಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ವಿದ್ಯುತ್ ದರ ಹೆಚ್ಚಿಸಿ ಏನು ಮಾಡುತ್ತಾರೆ. ಇಷ್ಟಾದರೂ ಸರಕಾರಕ್ಕೆ ಬುದ್ಧಿ ಬಂದಿಲ್ಲ. ಮತ್ತೆ ವಿದ್ಯುತ್ ದರ ಅಧಿಕ ಮಾಡುವ ಮೂಲಕ ರೈತರಿಗೆ, ಜನ ಸಾಮಾನ್ಯರಿಗೆ ಸಮಸ್ಯೆ ಮಾಡುತ್ತಿದ್ದಾರೆ. ಪ್ರಾರಂಭದಲ್ಲಿ ಅನೇಕ ಕಾರ್ಯಕ್ರಮ ಘೋಷಣೆ ಮಾಡಿ ಒಂದೊಂದೇ ಬರೆ ಎಳೆಯುವ ಕೆಲಸ ಮಾಡುತ್ತಿದೆ. ಪ್ರಾರಂಭದಲ್ಲಿ ಉಚಿತ ಯೋಜನೆ ಘೋಷಣೆ ಮಾಡಿ ಈಗ ಬೇರೆ ಬೇರೆ ರೀತಿ ಸುಲಿಗೆ ಮಾಡಿ ಹಣ ವಸೂಲಿ ಮಾಡುತ್ತಿದೆ ಎಂದು ದೂರಿದರು.

ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವೂ 'ಶಿವಕುಮಾರ್ ಬ್ಯಾಂಕ್ ಆಫ್ ಇಂಡಿಯಾ' ಎಂಬ ಶಾಖೆ ಆರಂಭಿಸಿದ್ದು, ರಾಜ್ಯದಲ್ಲಿ ಹಣ ವಸೂಲಿ ಮಾಡಿ ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸುತ್ತಿದ್ದಾರೆ. ಪಂಚ ರಾಜ್ಯ ಮತ್ತು ಲೋಕಸಭೆ ಚುನಾವಣೆಗೆ ಈ ರೀತಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ದೂರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News