ಸಿಎಂ, ಡಿಸಿಎಂ ಭೇಟಿ ಮಾಡಿದ ಬಿಎಸ್‍ವೈ ಆಪ್ತ ಎಂ.ಪಿ. ರೇಣುಕಾಚಾರ್ಯ
ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ ಆಪ್ತ ಹಾಗೂ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು, ಮಹತ್ವದ ಬೆಳವಣಿಗೆಯೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಸಮಾಲೋಚನೆ ನಡೆಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಶನಿವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸದಾಶಿವ ನಗರದಲ್ಲಿನ ಡಿಸಿಎಂ ನಿವಾಸದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ ರೇಣುಕಾಚಾರ್ಯ, ಉಭಯ ನಾಯಕರಿಗೆ ಪುಷ್ಪಾಗುಚ್ಚವನ್ನು ನೀಡಿ ಹೊಸ ವರ್ಷದ ಶುಭಾಶಯವನ್ನು ಕೋರಿದ್ದಾರೆ.
‘ಲಕ್ಷದ ಐದು ಸಾವಿರ ಹೆಕ್ಟರ್ ಅಚ್ಚಕಟ್ಟು ಪ್ರದೇಶ ಇರುವ ಭದ್ರಾ ಜಲಾಶಯವನ್ನು ಕರ್ನಾಟಕ ನೀರಾವರಿ ನಿಗಮದಿಂದ ಬೇರ್ಪಡಿಸಿ, 2 ಲಕ್ಷಕ್ಕೂ ಅಧಿಕ ಹೆಕ್ಟರ್ ಹನಿ ನೀರಾವರಿ ಅಚ್ಚಕಟ್ಟ ಪ್ರದೇಶವಿರುವ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ ಸೇರಿಸಲು ಸರಕಾರ ತೀರ್ಮಾನಿಸಿದ್ದು, ಇದರಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ರೈತರಿಗೆ ಅನ್ಯಾಯವಾಗುವುದರಿಂದ ಕರ್ನಾಟಕ ನೀರಾವರಿ ನಿಗಮವನ್ನು ಯಾವುದೇ ಕಾರಣಕ್ಕೂ ಬೇರ್ಪಡಿಸಬಾರದು’ ಎಂದು ರೇಣುಕಾಚಾರ್ಯ, ಸಿಎಂ, ಡಿಸಿಎಂ ಅವರಿಗೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.