‘ಬಸ್ ಟಿಕೆಟ್ ದರ ಏರಿಕೆ’ | ಜನರ ಹಿತದೃಷ್ಟಿಯಲ್ಲಿಟ್ಟುಕೊಂಡು ತೀರ್ಮಾನ: ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು: ಖಾಸಗಿ ಹಾಗೂ ಸರಕಾರಿ ಸಾರಿಗೆ ನಿಗಮದ ಡಿಪೋಗಳಲ್ಲಿನ ಡೀಸೆಲ್ ಬೆಲೆ ವ್ಯತ್ಯಾಸ ದರ ಸುಮಾರು 40 ರೂಪಾಯಿಯಷ್ಟಿದೆ. ಇದು ಗಾಬರಿಯಾಗುವ ಸಂಖ್ಯೆ. ಡೀಸೆಲ್ ಬೆಲೆ ಹೆಚ್ಚಾದರೆ ಟಿಕೆಟ್ ಬೆಲೆ ಹೆಚ್ಚಳ ಆಗಬೇಕು ಎಂದು ಈ ಹಿಂದೆ ತೀರ್ಮಾನ ಮಾಡಲಾಗಿತ್ತು. ಇದರ ಬಗ್ಗೆ ಮತ್ತೊಮ್ಮೆ ಪರಿಶೀಲನೆ ಮಾಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಶನಿವಾರ ವಿಧಾನಸೌಧದಲ್ಲಿ ಬಸ್ ಟಿಕೆಟ್ ದರ ಏರಿಕೆ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕೆಎಸ್ಸಾರ್ಟಿಸಿಯೂ ಉಳಿಯಬೇಕು. ಜನರಿಗೂ ಅನುಕೂಲವಾಗಬೇಕು. ಏಕೆಂದರೆ ಪ್ರಧಾನಮಂತ್ರಿಗಳೆ ಸಾರ್ವಜನಿಕ ಸಾರಿಗೆಗಳನ್ನು ಬಳಸಿ ಇಂಧನ ಉಳಿಸಿ ಎಂದು ಮಾರ್ಗದರ್ಶನ ನೀಡಿದ್ದಾರೆ. ಇದರ ಬಗ್ಗೆ ಜನರ ಹಿತ ದೃಷ್ಟಿಯಲ್ಲಿಟ್ಟುಕೊಂಡು ತೀರ್ಮಾನ ಮಾಡಲಾಗವುದು ಎಂದು ಹೇಳಿದರು.
ಖಾಸಗಿಯವರು ಡಿಪೋಗಳ ಬದಲಾಗಿ ಸಾರ್ವಜನಿಕರಿಗೆ ಇರುವ ಬಂಕ್ ಗಳಲ್ಲಿ ಡಿಸೇಲ್ ಖರೀದಿ ಮಾಡುತ್ತಿದ್ದಾರೆ. ಇದರ ಬಗ್ಗೆ ವರದಿ ಕೇಳಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.