×
Ad

ನಟಿ ರುಕ್ಮಿಣಿ ವಸಂತ್ ಡೀಪ್‍ಫೇಕ್ ಪ್ರಕರಣ: ಮೂವರು ಆರೋಪಿಗಳ ಬಂಧನ

Update: 2026-06-20 19:41 IST

ನಟಿ ರುಕ್ಮಿಣಿ ವಸಂತ್

ಬೆಂಗಳೂರು: ಕೃತಕ ಬುದ್ಧಿಮತ್ತೆ(AI) ತಂತ್ರಜ್ಞಾನ ಬಳಸಿ, ಚಿತ್ರನಟಿ ರುಕ್ಮಿಣಿ ವಸಂತ್ ಅವರ ಫೋಟೋ ಮತ್ತು ವಿಡಿಯೋಗಳನ್ನು ಡೀಪ್‍ಫೇಕ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಮೂವರು ಆರೋಪಿಗಳನ್ನು ಸೈಬರ್ ಕಮಾಂಡ್ ಪೊಲೀಸರು ಬಂಧಿಸಿದ್ದಾರೆ.

ಚಂದ್ರಕಾಂತ್ (33), ರಂಜಿತ್ (25) ಮತ್ತು ರವಿಕುಮಾರ್ (24) ಬಂಧಿತ ಆರೋಪಿಗಳು.

ಬಾಗಲಕೋಟೆ ನಿವಾಸಿ ರವಿಕುಮಾರ್ ಬಿಎಸ್‍ಸಿ ನರ್ಸಿಂಗ್ ಮುಗಿಸಿ ತನ್ನದೇ ಆದ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದನು. ಇತ್ತೀಚೆಗಷ್ಟೇ ಯೂಟ್ಯೂಬ್‍ನಿಂದ ಹಣ ಗಳಿಕೆ ಮಾಡುತ್ತಿದ್ದ ಈತನಿಗೆ ಸುಲಭವಾಗಿ ಹಣ ಸಂಪಾದಿಸುವ ಆಸೆ ಹುಟ್ಟಿತ್ತು. ಹೀಗಾಗಿ ವೀಕ್ಷಣೆ ಹೆಚ್ಚಿಸಿಕೊಳ್ಳಲು ನಟಿಯರ ಡೀಪ್‍ಫೇಕ್ ವಿಡಿಯೋಗಳನ್ನು ಮಾಡಿ ಅಪ್ಲೋಡ್ ಮಾಡಲು ಶುರು ಮಾಡಿದ್ದನು ಎಂದು ವಿಚಾರಣೆಯಲ್ಲಿ ತಿಳಿದು ಬಂದಿದೆ.

ಬೆಂಗಳೂರು ಮೂಲದ ರಂಜಿತ್ ಕುಮಾರ್ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದು, ವಾರ್ಷಿಕ 20 ಲಕ್ಷ ರೂ. ಸಂಬಳ ಪಡೆಯುತ್ತಿದ್ದ. ಆರೋಪಿ ಚಂದ್ರಕಾಂತ್ ಬೆಂಗಳೂರಿನ ಚಾರ್ಟೆಡ್ ಅಕೌಂಟೆಂಟ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ತಂತ್ರಜ್ಞಾನದ ಜ್ಞಾನವಿದ್ದ ಇವರಿಬ್ಬರು ಕೇವಲ ವಿನೋದಕ್ಕಾಗಿಯೇ ನಟಿಯರ ಡೀಪ್‍ಫೇಕ್ ವಿಡಿಯೋಗಳನ್ನು ತಯಾರಿಸುತ್ತಿದ್ದರು ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ.

ಈಗಾಗಲೇ ಪೊಲೀಸರು ಬಂಧಿತರಿಂದ ಮೊಬೈಲ್ ಫೋನ್‍ಗಳನ್ನು ಜಪ್ತಿ ಮಾಡಿದ್ದಾರೆ. ಸದ್ಯ ಮೂವರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಿರುವ ಸೈಬರ್ ಕಮಾಂಡ್ ಪೊಲೀಸರು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News