ಬೆಂಗಳೂರು : ರಾಜ್ಯದಲ್ಲಿ ಯಾವುದೇ ಕ್ಷಣದಲ್ಲಿ ವಿಧಾನಸಭಾ ಚುನಾವಣೆ ನಡೆದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂಪುಟದ ಸದಸ್ಯರೂ ಸೇರಿ 25 ಮಂದಿ ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿಗೆ ಬರಲಿದ್ದಾರೆ. ಅಂತಹ ರಾಜಕೀಯ ವಾತಾವರಣ ಸೃಷ್ಟಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೊಸ ಬಾಂಬ್ ಸಿಡಿಸಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ಚುನಾವಣೆಯಲ್ಲಿ ಜನರ ತಲೆ ಕೆಡಿಸಿ ಒಂದಷ್ಟು ಸ್ಥಾನಗಳನ್ನು ಗಳಿಸಿದ್ದರು. ಆದರೆ, ಮುಂದಿನ ಬಾರಿ ಹಾಗಾಗಲು ಸಾಧ್ಯವೇ ಇಲ್ಲ. ಹಿಂದೆ 50ರಿಂದ 60 ಮಂದಿ ಸಂಸದರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು. ರಾಹುಲ್ ಗಾಂಧಿ ಅವರಿಂದ ಪಕ್ಷಕ್ಕೆ ಮುಂದಿನ ಬಾರಿ ಸೀಟು ಕಡಿಮೆಯಾಗಲಿದೆ ಎಂದು ಹೇಳಿದರು.

ಅರಾಜಕತೆ ಸೃಷ್ಟಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‍ರ ಭೇಟಿಗೆ ಕಾಂಗ್ರೆಸ್ ನೇತೃತ್ವದ ‘ಇಂಡಿಯಾ' ಮೈತ್ರಿಕೂಟ ಮನವಿ ಮಾಡಿದೆ. ಎಸ್‍ಐಆರ್ ವಿಷಯ ಈಗಾಗಲೇ ಸುಪ್ರೀಂ ಕೋರ್ಟ್‍ನಲ್ಲಿ ವಿಚಾರಣೆಗೆ ಇರುವಾಗ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಗೆ ಸಮಯ ಕೇಳುವುದು ಕಾಂಗ್ರೆಸ್‍ಗೆ ಶೋಭೆ ತರುವುದಿಲ್ಲ ಎಂದರು.

ದೇಶದಲ್ಲಿ ಒಟ್ಟಾರೆ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ಆ ಪಕ್ಷ ಭ್ರಮನಿರಸನಗೊಂಡಿದೆ. ಬಾಂಗ್ಲಾದೇಶ ಮತ್ತು ಶ್ರೀಲಂಕಾದಲ್ಲಿ ಹೇಗೆ ಬೇರೆ-ಬೇರೆ ರೀತಿ ಯುವಕರಿಂದ ಅರಾಜಕತೆ ಆಯಿತೋ ಅದೇ ರೀತಿ ರಾಜ್ಯದಲ್ಲೂ ಆಗಲಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಹೇಗಾದರೂ ಮಾಡಿ ಈ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಕಾಂಗ್ರೆಸ್ ಷಡ್ಯಂತ್ರ ಮಾಡುತ್ತಿದೆ. ಇದನ್ನೆಲ್ಲ ದೇಶದ ಜನ ಒಪ್ಪಲ್ಲ ಎಂದು ಅವರು ನುಡಿದರು.

ಕಾಂಗ್ರೆಸ್ ಪಕ್ಷಕ್ಕೆ ಮಾನ-ಮರ್ಯಾದೆ ಇದ್ದರೆ, ದೇಶದ ಮತದಾರರ ವಿಶ್ವಾಸ ಗೆಲ್ಲುವ ಕೆಲಸ ಮಾಡಲಿ. ಜನರ ವಿಶ್ವಾಸ ಗಳಿಸಿ ದೇಶ ಮತ್ತು ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿ. ಅರಾಜಕತೆ ಸೃಷ್ಟಿಸಿ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಗೊಂದಲದ ವಾತಾವರಣದಿಂದ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ ಎಂದು ಅವರು ತಿಳಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor