ಶಿಕ್ಷಕರು-ಪದವೀಧರ ಕ್ಷೇತ್ರಗಳ ಚುನಾವಣೆ; ಆಡಳಿತಾರೂಢ ಕಾಂಗ್ರೆಸ್, ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ನಡುವೆ ಪೈಪೋಟಿ
ಬೆಂಗಳೂರು : ವಿಧಾನ ಪರಿಷತ್‍ನ ದ್ವೈವಾರ್ಷಿಕ ಚುನಾವಣೆಯಲ್ಲಿ ಶಿಕ್ಷಕ ಮತ್ತು ಪದವೀಧರ ನಾಲ್ಕೂ ಕ್ಷೇತ್ರಗಳಿಂದ ಒಟ್ಟು 43 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಅ.23ರಂದು ನಡೆಯಲಿರುವ ಮತದಾನದ ಹಿನ್ನೆಲೆಯಲ್ಲಿ ಪ್ರಚಾರದ ಭರಾಟೆ ಬಿರುಸುಗೊಂಡಿದೆ.
ಬೆಂಗಳೂರು ಶಿಕ್ಷಕ ಕ್ಷೇತ್ರದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪುಟ್ಟಣ್ಣ, ಜೆಡಿಎಸ್ ಅಭ್ಯರ್ಥಿ ಎ.ಪಿ. ರಂಗನಾಥ ಸೇರಿದಂತೆ ಆರು ಮಂದಿ ಚುನಾವಣಾ ಸ್ಪರ್ಧೆಯಲ್ಲಿದ್ದಾರೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್‍ನ ಮೋಹನ್ ಲಿಂಬಿಕಾಯಿ, ಬಿಜೆಪಿಯ ಎಸ್.ವಿ.ಸಂಕನೂರ ಸೇರಿದಂತೆ 14 ಮಂದಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.
ಅದೇ ರೀತಿಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಶಿ, ಹುಲಿಕುಂಟೇಮಠ್, ಬಿಜೆಪಿ ಅಭ್ಯರ್ಥಿ ಕೆ.ಎಂ.ಸುರೇಶ ಸೇರಿದಂತೆ 10 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದು, ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು, ಬಿಜೆಪಿ ಅಭ್ಯರ್ಥಿ ಶಶಿಲ್ ನಮೋಶಿ ಸೇರಿದಂತೆ ಒಟ್ಟು 13 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.
ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಮೈತ್ರಿಕೂಟದ ನಡುವೆ ಈ ಚುನಾವಣೆ ತೀವ್ರ ಪ್ರತಿಷ್ಠೆ ಯಾಗಿದ್ದು, ಶಿಕ್ಷಕರ ಮತ್ತು ಪದವೀಧರ ಮತದಾರರ ಮನ ಗೆಲ್ಲಲು ಮೂರೂ ಪಕ್ಷಗಳು ಹರಸಾಹಸ ಮಾಡುತ್ತಿದ್ದು, ಚುನಾವಣಾ ಪ್ರಚಾರದಲ್ಲಿ ತೊಡಗಿವೆ. ಪ್ರತಿನಿತ್ಯ ಒಂದಲ್ಲಾ ಒಂದು ಸಭೆ, ಸಮಾವೇಶಗಳನ್ನು ನಡೆಸಿ ಮತದಾರರ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ.
ಅ.27ರಂದು ಮತ ಎಣಿಕೆ ನಡೆಯಲಿದ್ದು, ಬಹುತೇಕ ಅಂದು ಸಂಜೆ ವೇಳೆಗೆ ಫಲಿತಾಂಶ ದೊರೆಯುವ ಸಾಧ್ಯತೆಯಿದೆ. ಪ್ರಾಶಸ್ತ್ಯದ ಮತದಾನವಾಗಿರುವುದರಿಂದ ಫಲಿತಾಂಶ ವಿಳಂಬವಾದರೂ ಆಗಬಹುದು. ವಿಧಾನ ಪರಿಷತ್ ಸದಸ್ಯತ್ವದಿಂದ ಚಿದಾನಂದ ಎಂ.ಗೌಡ, ಎಸ್.ವಿ.ಸಂಕನೂರ, ಶಶಿಲ್ ನಮೋಶಿ ಹಾಗೂ ಪುಟ್ಟಣ್ಣ ಅವರು ನ.11ರಂದು ನಿವೃತ್ತಿ ಹೊಂದಲಿದ್ದಾರೆ. ಇವರ ನಿವೃತ್ತಿಯಿಂದ ತೆರವಾಗುವ ಪರಿಷತ್ ಸದಸ್ಯ ಸ್ಥಾನಗಳಿಗೆ ಚುನಾವಣಾ ಆಯೋಗ ಚುನಾವಣೆ ಪ್ರಕ್ರಿಯೆಯನ್ನು ಆರಂಭಿಸಿದೆ.
ಈ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಪಕ್ಷಗಳು ಹೊಂದಾಣಿಕೆ ಮಾಡಿಕೊಂಡಿದ್ದು, ಮೂರು ಕ್ಷೇತ್ರಗಳಲ್ಲಿ ಬಿಜೆಪಿ, ಒಂದು ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧಿಸಿದ್ದರೆ, ಆಡಳಿತಾರೂಢ ಕಾಂಗ್ರೆಸ್ ಪಕ್ಷವು ನಾಲ್ಕು ಕ್ಷೇತ್ರಗಳಲ್ಲಿಯೂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ನಾಲ್ಕು ಕ್ಷೇತ್ರಗಳಲ್ಲಿಯೂ ಗೆಲುವಿಗೆ ಪ್ರಯತ್ನ ನಡೆಸಿದೆ.