×
Ad

ದ್ವೇಷ ಭಾಷಣ, ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ-2025ಕ್ಕೆ ಸಚಿವ ಸಂಪುಟ ಅನುಮೋದನೆ

Update: 2025-12-04 19:00 IST

ಬೆಂಗಳೂರು : ರಾಜ್ಯದಲ್ಲಿ ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧಗಳನ್ನು ನಿಯಂತ್ರಿಸಲು ಪ್ರತ್ಯೇಕ ಕಾಯ್ದೆ ಜಾರಿ ಮಾಡಲು ರಾಜ್ಯ ಸರಕಾರ ಮುಂದಾಗಿದ್ದು, ಈ ನಿಟ್ಟಿನಲ್ಲಿ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯು ‘ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ- 2025’ಕ್ಕೆ ಅನುಮೋದನೆ ನೀಡಿದೆ.

ದ್ವೇಷ ಭಾಷಣಗಳಿಂದ ಸಮಾಜದಲ್ಲಿ ಅಶಾಂತಿ, ಕೋಮುಗಲಭೆ, ಕಾನೂನು ಸುವ್ಯವಸ್ಥೆ ಹದಗೆಡುವುದನ್ನು ತಡೆಯಲು ಈ ವಿಧೇಯಕವನ್ನು ಜಾರಿಗೆ ತರಲು ತೀರ್ಮಾನಿಸಲಾಗಿದೆ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ವಿಧೇಯಕ ಮಂಡನೆಯಾಗಲಿದೆ.

ಜನಾಂಗೀಯ ನಿಂದನೆ, ಭಾಷೆ, ಜನ್ಮಸ್ಥಳ, ಜಾತಿ, ಧರ್ಮದ ಆಧಾರದಲ್ಲಿ ದ್ವೇಷದ ಭಾಷಣ ಮತ್ತು ಅಪರಾಧಗಳನ್ನು ಎಸಗುವುದನ್ನು ಈ ವಿಧೇಯಕದಡಿ ಶಿಕ್ಷಾರ್ಹ ಅಪರಾಧವನ್ನಾಗಿಸಲಾಗಿದೆ. ಈ ಕರಡು ಮಸೂದೆಯಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳು, ಸರ್ಚ್ ಇಂಜಿನ್‍ಗಳು, ಟೆಲಿಕಾಂ ಆಪರೇಟರ್‌ ಗಳು, ಆನ್‍ಲೈನ್ ಮಾರುಕಟ್ಟೆ ಸ್ಥಳಗಳು ಮತ್ತು ಇಂಟರ್ನೆಟ್ ಸೇವಾ ಪೂರೈಕೆದಾರರು ಸೇರಿ ಡಿಜಿಟಲ್ ಮಧ್ಯವರ್ತಿಗಳು ಪೋಸ್ಟ್ ಮಾಡುವ ವಿಷಯಕ್ಕೆ ಹೊಣೆಗಾರರನ್ನಾಗಿಸಲಾಗಿದೆ.

ಭಯ, ದ್ವೇಷವನ್ನು ಪ್ರಚೋದಿಸುವ ಯಾವುದೆ ಸಭೆ, ಮೆರವಣಿಗೆಗಳನ್ನು ಜಿಲ್ಲಾಧಿಕಾರಿಯ ಆದೇಶದ ಮೂಲಕ ನಿಷೇಧಿಸಬಹುದಾಗಿದೆ. ದ್ವೇಷ ಭಾಷಣ ಮಾಡಿದವರಿಗೆ ಮೂರು ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಪ್ರಸ್ತಾವಿಸಲಾಗಿದೆ.

ಸಾಮಾಜಿಕ ಬಹಿಷ್ಕಾರ ತಡೆಗೆ ಮಸೂದೆ:

ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ ಅಂಥವರಿಗೆ 1 ಲಕ್ಷ ರೂ. ದಂಡ ಹಾಗೂ 3 ವರ್ಷದವರೆಗೆ ಜೈಲು ಶಿಕ್ಷೆಗೆ ಗುರಿಪಡಿಸುವ ‘ಕರ್ನಾಟಕ ಸಾಮಾಜಿಕ ಬಹಿಷ್ಕಾರ(ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ವಿಧೇಯಕ-2025ಕ್ಕೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಧಾರ್ಮಿಕ, ಸಾರ್ವಜನಿಕ ಸ್ಥಳಗಳು, ಶಾಲಾ, ಕಾಲೇಜು, ಆಸ್ಪತ್ರೆ, ಉದ್ಯೋಗ, ವ್ಯವಹಾರ ನಡೆಸುವ ಸ್ಥಳಗಳಲ್ಲಿ ಸಾಮಾಜಿಕ ಬಹಿಷ್ಕಾರ ನಿರ್ಬಂಧಿಸಲು ಈ ವಿಧೇಯಕ ತರಲಾಗುತ್ತಿದೆ.

ಸಾಮಾಜಿಕ ಬಹಿಷ್ಕಾರ ಹಾಕುವ ತೀರ್ಮಾನ ತೆಗೆದುಕೊಂಡವರು, ಬಹಿಷ್ಕಾರ ಮಾಡಲು ನಡೆಸುವ ಸಭೆ, ಪಂಚಾಯ್ತಿ ನಡೆಸಿದವರನ್ನು ಈ ವಿಧೇಯಕದ ಅನ್ವಯ ಅಪರಾಧಿಗಳು ಎಂದು ಪರಿಗಣಿಸಲಾಗುವುದು. ಜೊತೆಗೆ, ಬಹಿಷ್ಕಾರ ಹಾಕಲು ಒತ್ತಡ ಹೇರಿದವರು ಹಾಗೂ ಅದಕ್ಕೆ ಸಹಕರಿಸಿದವರನ್ನು ಅಪರಾಧಿಗಳೆಂದು ಪರಿಗಣಿಸಲಾಗುವುದು ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.

ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗುವವರು ಪೊಲೀಸ್ ಠಾಣೆ ಅಥವಾ ನ್ಯಾಯಾಧೀಶರಿಗೆ ನೇರವಾಗಿ ದೂರು ಸಲ್ಲಿಸಬಹುದಾಗಿದೆ. ಸಾಮಾಜಿಕ ಬಹಿಷ್ಕಾರ ಹಾಕಲು ನಿರ್ಧರಿಸಲು ನಡೆಸುವ ಸಭೆಗಳ ಕುರಿತು ಮಾಹಿತಿ ಲಭ್ಯವಾದಲ್ಲಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಅಂತಹ ಸಭೆಗಳನ್ನು ನಿಷೇಧಿಸಲು ಆದೇಶ ಹೊರಡಿಸಬಹುದಾಗಿದೆ.

ಗೋಹತ್ಯೆ ಪ್ರತಿಬಂಧಕ ವಿಧೇಯಕ:

ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ(ತಿದ್ದುಪಡಿ) ವಿಧೇಯಕ-2020ರ ಕಾಯ್ದೆ ಅನ್ವಯ ಅನಧಿಕೃತ ಜಾನುವಾರು ಸಾಗಾಣಿಕೆ ಮಾಡುವ ಸಂದರ್ಭದಲ್ಲಿ ವಶಪಡಿಸಿಕೊಳ್ಳುವಂತಹ ವಾಹನಗಳನ್ನು ಬಿಡಿಸಿಕೊಳ್ಳಲು ಆ ವಾಹನದ ಪ್ರಸಕ್ತ ಮೌಲ್ಯದಷ್ಟು ಹಣವನ್ನು ಬ್ಯಾಂಕ್‍ನಲ್ಲಿ ಜಮೆ ಮಾಡಿ ಬ್ಯಾಂಕ್ ಗ್ಯಾರಂಟಿ ನೀಡಿದರೆ ಮಾತ್ರ ವಶಪಡಿಸಿಕೊಂಡಿರುವ ವಾಹನವನ್ನು ಬಿಡುಗಡೆ ಮಾಡಲು ಅವಕಾಶವಿದೆ. ಸರಕಾರ ಈ ನಿಯಮಕ್ಕೆ ತಿದ್ದುಪಡಿ ತರಲು ಮುಂದಾಗಿದೆ.

ಇದಲ್ಲದೆ, 2025ನೆ ಸಾಲಿನ ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ(ತಿದ್ದುಪಡಿ) ವಿಧೇಯಕ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ(ತಿದ್ದುಪಡಿ) ವಿಧೇಯಕ, ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ(ತಿದ್ದುಪಡಿ) ವಿಧೇಯಕ, ಶ್ರೀ ಚಾಮುಂಡೇಶ್ವರಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರ ಮತ್ತು ಇತರೆ ಕಾನೂನುಗಳು(ತಿದ್ದುಪಡಿ) ವಿಧೇಯಕ ಹಾಗೂ ಕರ್ನಾಟಕ ಒಳನಾಡು ನೌಕೆ ನಿಯಮಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News