ಆರೆಸ್ಸೆಸ್ ಸೇರಿದಂತೆ ಇನ್ನಿತರ ಸಂಘಟನೆಗಳ ಚಟುವಟಿಕೆಗಳಿಗೆ ಕಡಿವಾಣ?

ʼಕರ್ನಾಟಕ ಸರಕಾರಿ ಆವರಣ-ಸಾರ್ವಜನಿಕ ಆಸ್ತಿ ಬಳಕೆ ನಿಯಂತ್ರಣ ವಿಧೇಯಕ’ : ಸಚಿವ ಸಂಪುಟ ಸಭೆ ಒಪ್ಪಿಗೆ

Update: 2026-08-13 21:59 IST

ಆರೆಸ್ಸೆಸ್‌ ಪಥಸಂಚಲನ(PC:PTI)/ವಿಧಾನಸೌಧ

ಬೆಂಗಳೂರು : ರಾಷ್ಟ್ರೀಯ ಸ್ವಯಂ ಸೇವಕರ ಸಂಘ(ಆರೆಸ್ಸೆಸ್) ಸೇರಿದಂತೆ ಖಾಸಗಿ ಸಂಘ-ಸಂಸ್ಥೆಗಳು, ಸಂಘಟನೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆಗಳನ್ನು ಕಾನೂನು ಬದ್ಧವಾಗಿ ನಡೆಸಲು ಪೂರ್ವಾನುಮತಿ ಪಡೆಯುವ ಕುರಿತು ಹೊರಡಿಸಲಾಗಿದ್ದ ಆದೇಶವನ್ನು ಹಿಂಪಡೆದು, ‘ಕರ್ನಾಟಕ ಸರಕಾರಿ ಆವರಣ ಮತ್ತು ಸಾರ್ವಜನಿಕ ಆಸ್ತಿ ಬಳಕೆ ನಿಯಂತ್ರಣ ವಿಧೇಯಕ-2026’ ಅನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ.

ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಗೃಹ ಇಲಾಖೆ ಮಂಡಿಸಿದ ಕರಡು ವಿಧೇಯಕದ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಸಾರ್ವಜನಿಕ ಆಸ್ತಿ ಸಂರಕ್ಷಣೆ: ಸರಕಾರಿ ಸ್ವಾಮ್ಯದ ಜಾಗಗಳು, ಕಟ್ಟಡಗಳು ಮತ್ತು ಸಾರ್ವಜನಿಕ ಆಸ್ತಿಗಳು ಅತಿಕ್ರಮಣವಾಗದಂತೆ ಅಥವಾ ಕಾನೂನುಬಾಹಿರ ಚಟುವಟಿಕೆಗಳಿಗೆ ಬಳಕೆಯಾಗದಂತೆ ತಡೆಯುವುದು ಇದರ ಮುಖ್ಯ ಗುರಿಯಾಗಿದೆ.

ಹಳೆಯ ಆದೇಶದ ಬದಲಾವಣೆ: ಖಾಸಗಿ ಸಂಘ-ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಚಟುವಟಿಕೆ ನಡೆಸಲು ಅನುಮತಿ ಪಡೆಯುವ ಕುರಿತು ಈ ಹಿಂದೆ ಹೊರಡಿಸಲಾಗಿದ್ದ ತಾತ್ಕಾಲಿಕ ಆದೇಶವನ್ನು ಹಿಂಪಡೆದು, ಅದರ ಬದಲಿಗೆ ಈ ಸಮಗ್ರ ಕಾನೂನು ಚೌಕಟ್ಟನ್ನು ತರಲಾಗುತ್ತಿದೆ.

ಶೈಕ್ಷಣಿಕ ಆವರಣಗಳ ರಕ್ಷಣೆ: ಸರಕಾರಿ ಶಾಲೆ, ಕಾಲೇಜುಗಳ ಮೈದಾನ ಮತ್ತು ಆವರಣಗಳನ್ನು ರಾಜಕೀಯ, ಧಾರ್ಮಿಕ ಅಥವಾ ಖಾಸಗಿ ಸಂಘಟನೆಗಳ ಕಾರ್ಯಕ್ರಮಗಳಿಗೆ (ಉದಾಹರಣೆಗೆ ಮೆರವಣಿಗೆಗಳು ಅಥವಾ ತರಬೇತಿ ಶಿಬಿರಗಳು) ದುರುಪಯೋಗ ಪಡಿಸಿಕೊಳ್ಳುವುದನ್ನು ನಿಯಂತ್ರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಪೂರ್ವಾನುಮತಿ ಕಡ್ಡಾಯ: ಸಾರ್ವಜನಿಕ ಉದ್ಯಾನವನಗಳು, ಮೈದಾನಗಳು ಅಥವಾ ಸರ್ಕಾರಿ ಕಚೇರಿ ಆವರಣಗಳಲ್ಲಿ ಯಾವುದೇ ಖಾಸಗಿ ಸಭೆ-ಸಮಾರಂಭಗಳನ್ನು ನಡೆಸಲು ಇನ್ನು ಮುಂದೆ ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯವಾಗಿ ಪೂರ್ವಾನುಮತಿ ಪಡೆಯಬೇಕು ಎಂಬ ಉದ್ದೇಶವಿರುವ ಈ ಮಹತ್ವದ ವಿಧೇಯಕದ ಕರಡನ್ನು ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲು ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News