‘ಸಂಧ್ಯಾ ಕಿರಣ’ ಆರೋಗ್ಯ ಯೋಜನೆಗೆ ಸಂಪುಟ ಅನುಮೋದನೆ
ಬೆಂಗಳೂರು : ಎಪ್ಪತ್ತು ವರ್ಷಕ್ಕಿಂತ ಕಡಿಮೆ ವಯಸ್ಸಿನ ರಾಜ್ಯ ಸರಕಾರಿ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು ಹಾಗೂ ಅರ್ಹ ಅವಲಂಬಿತ ದಿವ್ಯಾಂಗ ಮಕ್ಕಳಿಗಾಗಿ ‘ಸಂಧ್ಯಾ ಕಿರಣ’ ವಂತಿಕೆ ಆಧಾರಿತ ನಗದು ರಹಿತ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರಕಾರಿ ಪಿಂಚಣಿದಾರರು ಹಾಗೂ ಅವರ ಅರ್ಹ ಅವಲಂಬಿತರಿಗೆ ಸಮಗ್ರ ಆರೋಗ್ಯ ಭದ್ರತೆ ಒದಗಿಸುವ ಉದ್ದೇಶದಿಂದ, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ನಿಯಮಾವಳಿಗಳನ್ವಯ ‘ಸಂಧ್ಯಾ ಕಿರಣ’ ವಂತಿಕೆ ಆಧಾರಿತ ನಗದುರಹಿತ ಆರೋಗ್ಯ ಯೋಜನೆಯನ್ನು ಜಾರಿಗೊಳಿಸಲು ಅನುಮೋದನೆ ನೀಡಲಾಯಿತು.
ಯೋಜನೆಯ ಪ್ರಮುಖ ಅಂಶಗಳು: ಪ್ರಾರಂಭಿಕ ಹಂತದಲ್ಲಿ, 70 ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 3.11 ಲಕ್ಷ ರಾಜ್ಯ ಸರಕಾರಿ ಪಿಂಚಣಿದಾರರು ಹಾಗೂ ಅವರ ಅರ್ಹ ಅವಲಂಬಿತರನ್ನು ಒಳಗೊಂಡಂತೆ ಒಟ್ಟು ಸುಮಾರು 4.93 ಲಕ್ಷ ಫಲಾನುಭವಿಗಳು ಯೋಜನೆಯ ವ್ಯಾಪ್ತಿಗೆ ಬರಲಿದ್ದಾರೆ.
ಈ ಯೋಜನೆಯು ಸ್ವಯಂಪ್ರೇರಿತ ವಂತಿಕೆ ಆಧಾರಿತ ನಗದು ರಹಿತ ಆರೋಗ್ಯ ಯೋಜನೆಯಾಗಿದ್ದು, ಅರ್ಹ ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 5 ಲಕ್ಷ ರೂ.ಗಳವರೆಗೆ ಪ್ಲೋ ಟರ್ ಆಧಾರದ ಮೇಲೆ ದ್ವಿತೀಯ, ತೃತೀಯ ಹಾಗೂ ತುರ್ತು ಚಿಕಿತ್ಸಾ ಸೌಲಭ್ಯಗಳನ್ನು ನಗದು ರಹಿತವಾಗಿ ಪಡೆಯಲು ಅವಕಾಶ ಕಲ್ಪಿಸಲಾಗುತ್ತದೆ.
ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಅಡಿಯಲ್ಲಿ ಅನ್ವಯವಾಗುವ ಆರೋಗ್ಯ ಪ್ರಯೋಜನ ಪ್ಯಾಕೇಜ್‍ಗಳು ಮತ್ತು ಪರಿಷ್ಕೃತ ಪ್ಯಾಕೇಜ್ ದರಗಳು ಈ ಯೋಜನೆಗೆ ಅನ್ವಯವಾಗಲಿವೆ. ಫಲಾನುಭವಿಗಳು ಯೋಜನೆಯಡಿ ನೊಂದಾಯಿತ/ಅನುಮೋದಿತ ಆಸ್ಪತ್ರೆಗಳಲ್ಲಿ, ನಗದುರಹಿತ ಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ.
ನಿಯಮಿತ ಪಿಂಚಣಿದಾರರು ಮೂಲ ಪಿಂಚಣಿಯ ಶೇ.1.25 ರಷ್ಟು ಹಾಗೂ ಕುಟುಂಬ ಪಿಂಚಣಿದಾರರು ಮೂಲ ಕುಟುಂಬ ಪಿಂಚಣಿಯ ಶೇ.0.75 ರಷ್ಟು ವಂತಿಕೆಯನ್ನು ಪಾವತಿಸಬೇಕಾಗುತ್ತದೆ.