ಸಿಎಂ ಮನೆಯಲ್ಲಿಯೇ ಜಾತಿ ಜನಗಣತಿ ವರದಿ ಇದೆ : ಆರ್.ಅಶೋಕ್
ಆರ್.ಅಶೋಕ್
ಬೆಂಗಳೂರು : ಜಾತಿ ಜನಗಣತಿಯ ಮೂಲ ಪ್ರತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿದ್ದು, ಈಗ ಸಚಿವ ಸಂಪುಟದಲ್ಲಿ ಮಂಡನೆ ಮಾಡಿರುವುದು ನಕಲಿ ಪ್ರತಿ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಆರೋಪಿಸಿದ್ದಾರೆ.
ರವಿವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2021ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದ ಜಯಪ್ರಕಾಶ್ ಹೆಗ್ಡೆ ಸರಕಾರಕ್ಕೆ ಪತ್ರ ಬರೆದು ಜಾತಿಗಣತಿ ವರದಿ ಕಾಣೆಯಾಗಿದೆ ಎಂದು ಹೇಳಿದ್ದಾರೆ. ಸೀಲ್ಡ್ ಬಾಕ್ಸ್ ತೆರೆದಾಗ ಮುದ್ರಿತ ವರದಿಯಲ್ಲಿ ಆಯೋಗದ ಸದಸ್ಯ ಕಾರ್ಯದರ್ಶಿ ಸಹಿ ಇಲ್ಲ. ಇದರ ಜೊತೆಗೆ ಮೂಲ ಹಸ್ತಪ್ರತಿ ಇರಲಿಲ್ಲ ಎಂದು ಸರಕಾರಕ್ಕೆ ಪತ್ರ ಬರೆದಿದ್ದರು. ಹೀಗಾಗಿ, ಸಮೀಕ್ಷಾ ವರದಿಯ ಮೂಲ ಹಸ್ತಪ್ರತಿ ನಾಪತ್ತೆ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಗೆ ಕೊಡಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಜಾತಿಗಣತಿ ವಿಚಾರವನ್ನು ಹೊರಗೆ ತಂದರು. ಅವರು ಯಾವಾಗ ಬೇಕೋ ಆಗ ವರದಿ ನೀಡುತ್ತಾರೆ. ಇದಕ್ಕೆ ತಮ್ಮೊಂದಿಗೆ ನಾಟಕ ಕಂಪನಿಯನ್ನು ಇಟ್ಟುಕೊಂಡಿದ್ದಾರೆ. ಇದು ಶಕುನಿ ಸರಕಾರ ಆಗಿದ್ದು, ಇವರಿಗೆ ಅಭಿವೃದ್ಧಿ ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದರು.
ಸಮೀಕ್ಷೆ ಮಾಡುವವರು ಮಠಕ್ಕೆ ಬಂದಿಲ್ಲ ಎಂದು ಸಿದ್ದಗಂಗಾ ಮಠದ ಶ್ರೀಗಳೇ ಹೇಳಿದ್ದಾರೆ. ಕಾಂಗ್ರೆಸ್‍ನ ಕೆಲ ಶಾಸಕರೂ ಸಹ ನಮ ಮನೆಗಳಿಗೆ ಬಂದಿಲ್ಲ ಎಂದು ಹೇಳಿದ್ದಾರೆ. ಹಾಗಾದರೆ ಸಮೀಕ್ಷೆಗಳಿಗೆ ಖರ್ಚು ಮಾಡಿದ್ದ 169 ಕೋಟಿ ರೂ. ದೊಡ್ಡ ಹಗರಣವಾಗಿದೆ. ಮುಂದೆ ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ ಈ ಹಗರಣದ ತನಿಖೆಗೆ ಆದೇಶ ನೀಡುತ್ತೇವೆ ಎಂದು ಉಲ್ಲೇಖಿಸಿದರು.
ಇನ್ನೊಂದೆಡೆ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಜನಿವಾರಕ್ಕೆ ಕತ್ತರಿ, ಶಿವದಾರ ಶಿವನ ಪಾದ, ಉಡುದಾರಕ್ಕೆ ಊರುಗೋಲಿಲ್ಲ, ತಾಳಿಗೆ ಭಾಗ್ಯವಿಲ್ಲ, ಹಿಜಾಬ್‍ಗೆ ಬಹುಪರಾಕ್ ನಡೆಯುತ್ತಿದೆ ಎಂದ ಅವರು, ಈ ಸಂಬಂಧ ಕೇಂದ್ರ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗ ಸರಕಾರದ ಮೇಲೆ ಕ್ರಮ ಕೈಗೊಳ್ಳಬೇಕೆಂದು ಪತ್ರ ಬರೆಯುವುದಾಗಿ ಹೇಳಿದರು.