ಕಾವೇರಿ | ಸಿಡಬ್ಲ್ಯುಆರ್‌ಸಿ ಆದೇಶ ಎತ್ತಿ ಹಿಡಿದ ಸಿಡಬ್ಲ್ಯುಎಂಎ

ತಮಿಳುನಾಡಿಗೆ 12 ಸಾವಿರ ಕ್ಯೂಸೆಕ್ ನೀರು ಹರಿಸಲು ಸೂಚನೆ

Update: 2026-08-11 20:10 IST

ಬೆಂಗಳೂರು : ರಾಜ್ಯದಲ್ಲಿ ಕಾವೇರಿ ಸಂಕಷ್ಟ ಎದುರಾಗಿದ್ದು, ತಮಿಳುನಾಡಿಗೆ 15 ದಿನಗಳ ಕಾಲ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಕಾವೇರಿ ನೀರು ನಿಯಂತ್ರಣ ಸಮಿತಿ(ಸಿಡಬ್ಲ್ಯುಆರ್‌ ಸಿ) ಮಾಡಿದ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿಡಬ್ಲ್ಯುಎಂಎ) ಎತ್ತಿ ಹಿಡಿದಿದೆ.

ಮಂಗಳವಾರ ಹೊಸದಿಲ್ಲಿಯಲ್ಲಿ ನಡೆದ ಕಾವೇರಿ ನೀರು ನಿಯಂತ್ರನ ಸಮಿತಿಯ ಸಭೆಯಲ್ಲಿ ತಮಿಳುನಾಡಿಗೆ ಆ.12ರ ಬೆಳಗ್ಗೆ 8 ಗಂಟೆಯಿಂದ 15 ದಿನಗಳ ಕಾಲ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ ನೀರನ್ನು ಬಿಳಿಗುಂಡ್ಲುವಿನಿಂದ ಹರಿಸುವಂತೆ ಸೂಚಿಸಲಾಯಿತು. ಆನಂತರ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ವಾದ ಆಲಿಸಿದ ಬಳಿಕ ತಮಿಳುನಾಡಿಗೆ ನೀರುಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಲಾಯಿತು.

ಕರ್ನಾಟಕದ ವಾದವೇನು?: ಕಾವೇರಿ ಜಲಾನಯನ ಪ್ರದೇಶದಲ್ಲಿರುವ ರಾಜ್ಯದ ನಾಲ್ಕು ಪ್ರಮುಖ ಜಲಾಶಯಗಳಿಗೆ ಪ್ರಸಕ್ತ ಸಾಲಿನಲ್ಲಿ ಕೇವಲ 77.746 ಟಿಎಂಸಿ ನೀರು ಹರಿದು ಬಂದಿದ್ದು, 30 ವರ್ಷಗಳ ಸರಾಸರಿಗೆ ಹೋಲಿಸಿದರೆ ಶೇ.47ರಷ್ಟು ಕೊರತೆ ಇದೆ. ಒಳಹರಿವು ಕೂಡ ತೀವ್ರವಾಗಿ ಕುಸಿಯುತ್ತಿದೆ ಎಂದು ಕರ್ನಾಟಕ ಸಭೆಯಲ್ಲಿ ತಿಳಿಸಿತು.

ಈಗಾಗಲೇ ಬಿಳಿಗುಂಡ್ಲುವಿನಲ್ಲಿ ನಿಗದಿತ 52,500 ಕ್ಯೂಸೆಕ್‍ಗೆ ಬದಲಾಗಿ 86,942 ಕ್ಯೂಸೆಕ್ ನೀರು ಹರಿಸಲಾಗಿದೆ. ಇನ್ನೂ ಹೆಚ್ಚಿನ ಪ್ರಮಾಣದ ನೀರು ಹರಿವಿನಲ್ಲಿದ್ದು, ಹೆಚ್ಚುವರಿ ನೀರು ಬಿಳಿಗುಂಡ್ಲುವಿಗೆ ತಲುಪುವ ನಿರೀಕ್ಷೆಯಿದೆ ಎಂದು ಕರ್ನಾಟಕ ತಿಳಿಸಿತು.

ಮಳೆ ಕೊರತೆ, ಒಳಹರಿವಿನ ಇಳಿಕೆ ಹಾಗೂ ಜಲಾಶಯಗಳಲ್ಲಿನ ಸೀಮಿತ ಸಂಗ್ರಹದ ಹಿನ್ನೆಲೆಯಲ್ಲಿ ಕುಡಿಯುವ ನೀರು, ಅಗತ್ಯ ಬಳಕೆ ಹಾಗೂ ಮುಂಗಾರು ಕೃಷಿಗಾಗಿ ನೀರನ್ನು ಸಂರಕ್ಷಿಸುವ ಅನಿವಾರ್ಯತೆ ಇದೆ ಎಂದು ಕರ್ನಾಟಕ ವಾದಿಸಿತು.

ತಮಿಳುನಾಡಿಗೆ ಈಗಾಗಲೇ ಜಲಾಶಯಗಳ ಸಂಗ್ರಹ, ಅಂತರ್ಜಲ ಹಾಗೂ ಈಶಾನ್ಯ ಮುಂಗಾರಿನ ಲಾಭ ಲಭ್ಯವಾಗಲಿದೆ. ಹೀಗಾಗಿ ಸಂಕಷ್ಟದ ಸಂದರ್ಭದಲ್ಲಿ ನೀರು ಹಂಚಿಕೆಯನ್ನು ಕೇವಲ ಕರ್ನಾಟಕದ ಜಲಾಶಯಗಳ ಒಳಹರಿವಿನ ಆಧಾರದ ಮೇಲೆ ಪೂರ್ವನಿಗದಿತ ಪ್ರಮಾಣದಲ್ಲಿ ಮಾಡುವುದು ಕರ್ನಾಟಕದ ಮೇಲೆ ಹೊರೆ ಹೇರುತ್ತದೆ ಎಂದು ರಾಜ್ಯ ತಿಳಿಸಿತು.

ಜಲ ಸಂಕಷ್ಟದ ಮೌಲ್ಯಮಾಪನವನ್ನು ಕರ್ನಾಟಕದ ನಾಲ್ಕು ಜಲಾಶಯಗಳ ಒಳಹರಿವಿಗೆ ಮಾತ್ರ ಸೀಮಿತಗೊಳಿಸದೆ, ಇಡೀ ಕಾವೇರಿ ಜಲಾನಯನ ಪ್ರದೇಶದ ಪರಿಸ್ಥಿತಿಯನ್ನು ಪರಿಗಣಿಸಬೇಕು ಎಂದು ಕರ್ನಾಟಕ ಆಗ್ರಹಿಸಿತು. ಇದಲ್ಲದೆ, ಎಲ್‍ಸಿಎ ಹಾಗೂ ಟೇಲ್-ಎಂಡ್ ರೆಗ್ಯುಲೇಟರ್‍ಗಳ ದೈನಂದಿನ ಅಂಕಿಅಂಶಗಳನ್ನು ಒದಗಿಸಬೇಕು ಮತ್ತು ನಿಖರವಾದ ಜಲ ಸಮತೋಲನಕ್ಕಾಗಿ ಸ್ವತಂತ್ರ ನೀರು ಮಾಪನ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿತು.

ಅಲ್ಲದೇ, ಮುಂದಿನ ನೀರು ಬಿಡುಗಡೆ ಕುರಿತ ನಿರ್ಧಾರವನ್ನು ಮುಂದೂಡಬೇಕು. ಅದು ಸಾಧ್ಯವಾಗದಿದ್ದರೆ, ಕಾವೇರಿ ನೀರು ನಿಯಂತ್ರಣ ಸಮಿತಿ ನಿಗದಿಪಡಿಸಿರುವ 12 ಸಾವಿರ ಕ್ಯೂಸೆಕ್ ಬದಲಿಗೆ 10 ಸಾವಿರ ಕ್ಯೂಸೆಕ್‍ಗೆ ಪ್ರಮಾಣವನ್ನು ಇಳಿಸಬೇಕು ಎಂದು ಕರ್ನಾಟಕ ಮನವಿ ಮಾಡಿತು. ಮುಂದಿನ ದಿನಗಳಲ್ಲಿ ಮುಂಗಾರು, ಒಳಹರಿವು ಹಾಗೂ ಜಲಾಶಯಗಳಲ್ಲಿನ ಋತು ಅಂತ್ಯದ ಸಂಗ್ರಹವನ್ನು ಗಮನಿಸಿ ವಾಸ್ತವ ಜಲ ಪರಿಸ್ಥಿತಿಯ ಆಧಾರದಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಕೋರಿತು.

ತಮಿಳುನಾಡಿನ ವಾದವೇನು?: ಬೆಂಗಳೂರು ನಗರಕ್ಕೆ ಒಂದು ವರ್ಷದ ಕುಡಿಯುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಅಗತ್ಯವನ್ನು ‘ಅತ್ಯಂತ ಕೆಟ್ಟ ಪರಿಸ್ಥಿತಿಯ ಸಾಧ್ಯತೆ’ ಎಂಬ ಕಾರಣ ನೀಡಿ ಸಮರ್ಥಿಸಲು ಸಾಧ್ಯವಿಲ್ಲ. ಇದನ್ನು ತಮಿಳುನಾಡಿಗೆ ಸಲ್ಲಬೇಕಾದ ನೀರಿನ ಪಾಲನ್ನು ನಿರಾಕರಿಸಲು ಬಳಸಬಾರದು ಎಂದು ತಮಿಳುನಾಡು ವಾದಿಸಿತು.

ಪ್ರಸಕ್ತ ಸಾಲಿನ ಜೂ.1ರಿಂದ ಆ.10ರವರೆಗೆ ಕೆಆರ್‌ ಎಸ್ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿ ಮಳೆಯ ಕೊರತೆ ಶೇ.9 ಮಾತ್ರವಿದ್ದರೆ, ಕಬಿನಿ ಮೇಲ್ಭಾಗದಲ್ಲಿ ಶೇ.19 ಇದೆ. ಆದರೆ ಬಿಳಿಗುಂಡ್ಲುವಿನ ಕೆಳಭಾಗದ ಕಾವೇರಿ ಪ್ರದೇಶದಲ್ಲಿ ಮಳೆಯ ಕೊರತೆ ಶೇ.36ರಷ್ಟಿದೆ ಎಂದು ಐಎಂಡಿ ದತ್ತಾಂಶವನ್ನು ಉಲ್ಲೇಖಿಸಿತು. ಅಲ್ಲದೇ, ಕರ್ನಾಟಕ ಈಶಾನ್ಯ ಮುಂಗಾರಿನಿಂದ ತಮಿಳುನಾಡಿಗೆ ಹೆಚ್ಚಿನ ಪ್ರಮಾಣದ ನೀರಿನ ಲಾಭವಾಗಲಿದೆ ಎಂಬ ವಾದಕ್ಕೆ ಸಾಕಷ್ಟು ವೈಜ್ಞಾನಿಕ ಆಧಾರವಿಲ್ಲ ಎಂದು ತಮಿಳುನಾಡು ಹೇಳಿತು.

ಕಬಿನಿ ಜಲಾಶಯದಿಂದ ಹೆಚ್ಚುವರಿ ನೀರು ಹರಿದು ಬರುತ್ತಿರುವುದರಿಂದಲೇ ಬಿಳಿಗುಂಡ್ಲುವಿನಲ್ಲಿ ಪ್ರಸ್ತುತ ಹೆಚ್ಚಿನ ಹರಿವು ಕಂಡುಬರುತ್ತಿದೆ. ಕೆಆರ್‌ ಎಸ್ ಜಲಾನಯನ ಪ್ರದೇಶದಲ್ಲಿ ಒಳಹರಿವು ಸುಧಾರಿಸಿದ್ದರೂ ಕೆಆರ್‌ ಎಸ್‍ನಿಂದ ನೀರು ಬಿಡುಗಡೆ ಮಾಡಲಾಗುತ್ತಿಲ್ಲ. ಹೀಗಾಗಿ ಸಮಸ್ಯೆ ಕೇವಲ ನೀರಿನ ಲಭ್ಯತೆಯದ್ದಲ್ಲ; ಜಲಾಶಯಗಳ ನಿರ್ವಹಣೆ ಮತ್ತು ಲಭ್ಯ ನೀರಿನ ಸಮಾನ ಹಂಚಿಕೆಯ ಪ್ರಶ್ನೆಯೂ ಆಗಿದೆ ಎಂದು ತಮಿಳುನಾಡು ವಾದಿಸಿತು.

ಕೆಆರ್‌ ಎಸ್ ಮತ್ತು ಕಬಿನಿ ಎರಡೂ ಜಲಾಶಯಗಳಿಂದ ನಿಯಂತ್ರಿತ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡುವಂತೆ ಕರ್ನಾಟಕಕ್ಕೆ ನಿರ್ದೇಶಿಸಬೇಕು. ಇದರಿಂದ ಬಿಳಿಗುಂಡ್ಲುವಿನಲ್ಲಿ ತಮಿಳುನಾಡಿಗೆ ತನ್ನ ನಿಗದಿತ ಪ್ರಮಾನದ ಪಾಲು ದೊರೆಯಲಿದೆ ಎಂದು ತಮಿಳುನಾಡು ಆಗ್ರಹಿಸಿತು.

ಆಗಸ್ಟ್ ಅಂತ್ಯದೊಳಗೆ 37 ಟಿಎಂಸಿ ಬೇಡಿಕೆ: ಈವರೆಗೆ ಉಳಿದಿರುವ ನೀರಿನ ಬಾಕಿ ಹಾಗೂ ಆ.13ರಿಂದ 31ರವರೆಗೆ ಹರಿಸಬೇಕಾದ ನೀರನ್ನು ಪರಿಗಣಿಸಿ, ಆಗಸ್ಟ್ ಅಂತ್ಯದೊಳಗೆ ಬಿಳಿಗುಂಡ್ಲುವಿನಲ್ಲಿ ಒಟ್ಟು 37 ಟಿಎಂಸಿ ನೀರು ಹರಿಸುವಂತೆ ಕರ್ನಾಟಕಕ್ಕೆ ನಿರ್ದೇಶಿಸಬೇಕು ಎಂದು ತಮಿಳುನಾಡು ಆಗ್ರಹಿಸಿತು.

ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ವಾದ ಆಲಿಸಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು, ಕಾವೇರಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶದಂತೆ ತಮಿಳುನಾಡಿಗೆ 15 ದಿನಗಳ ಕಾಲ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸುವಂತೆ ಆದೇಶಿಸಿತು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News