‘ಆಫ್ ರೋಡ್ ಸಾಹಸ’ ಜಲಮೂಲ, ಗ್ರಾಮೀಣ ರಸ್ತೆ ಹಾಳಾದರೆ ಕ್ರಮ : ಸಚಿವ ಈಶ್ವರ್ ಖಂಡ್ರೆ

Update: 2026-08-12 20:49 IST

ಸಾಂದರ್ಭಿಕ ಚಿತ್ರ | PC : AI

ಬೆಂಗಳೂರು : ಬೆಂಗಳೂರಿನ ಸಾಹಸಿಗರ ಸಂಸ್ಥೆಯೊಂದು ಆ.15, 16ರಂದು ಕುದುರೆಮುಖದಲ್ಲಿ ಆಫ್ ರೋಡ್ ಸಾಹಸ ಆಯೋಜಿಸಿದ್ದು, ಇದರಿಂದ ಜಲಮೂಲ ಕಲುಷಿತವಾದರೆ ಮತ್ತು ಗ್ರಾಮೀಣ ರಸ್ತೆ ನಾಶವಾದರೆ ಕಠಿಣ ಕ್ರಮ ಜರುಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಈ ಸಂಬಂಧ ಲಿಖಿತ ಸೂಚನೆ ನೀಡಿರುವ ಅವರು, ಆ.15, 16ರಂದು ಚಿಕ್ಕಮಗಳೂರು ಜಿಲ್ಲೆ ಕುದುರೆಮುಖದಲ್ಲಿ ಆಫ್ ರೋಡ್ ಸಾಹಸ ನಡೆಸುತ್ತಿರುವುದಾಗಿ ಬೆಂಗಳೂರಿನ ಒಂದು ಸಂಸ್ಥೆ ಪ್ರಚಾರ ಮಾಡಿದ್ದು, ಈ ಆಫ್ -ರೋಡ್ ನಲ್ಲಿ ನದಿಗಳನ್ನು ದಾಟುವ, ಮಣ್ಣು ದಾರಿಯಲ್ಲಿ ಸಾಗುವ, ಬೆಟ್ಟ ಗುಡ್ಡ ಹತ್ತಿ ಇಳಿಯುವ ಸಾಹಸದ ಅವಕಾಶವಿದೆ ಎಂದು ಹೇಳಿಕೊಂಡಿದೆ. ಇದರಿಂದ ರಸ್ತೆಗಳು ಹಾಳಾಗದಂತೆ ಕ್ರಮ ವಹಿಸಲು ಸೂಚಿಸಿದ್ದಾರೆ.

ಸಂವಿಧಾನ ವಿಧಿ 51ಎ(ಜಿ)ರಲ್ಲಿರುವ “ಭಾರತದ ಪ್ರಜೆಯಾಗಿ ನಾನು ಅರಣ್ಯ, ಸರೋವರ, ನದಿ, ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುತ್ತೇನೆ ಮತ್ತು ಸುಧಾರಿಸುತ್ತೇನೆ. ಭಾರತದ ಸಂವಿಧಾನದ ಆಶಯದಂತೆ ನಾನು ಜೀವಂತ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದಿರುತ್ತೇನೆ’ ಎಂಬ ಅಂಶವನ್ನು ಉಲ್ಲೇಖಿಸಿ, ನದಿ, ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಈ ಸಾಹಸದಲ್ಲಿ ಬಳಸಲಾಗುವ ವಾಹನಗಳಿಗೆ ಪರಿವರ್ತಿತ (ಮಾಡಿಫೈಡ್) ದಪ್ಪ ಟೈರ್ ಗಳನ್ನು ಹಾಕುವ ಕಾರಣ ಮತ್ತು ಆ ವಾಹನಗಳು ಮಳೆಯಿಂದ ತೊಯ್ದ ರಸ್ತೆಯಲ್ಲಿ ಅತಿ ರಭಸದಿಂದ ಸಾಗುವ ಕಾರಣ ಗ್ರಾಮೀಣ ರಸ್ತೆಗಳು ಹಾಳಾಗುವ ಅಪಾಯ ಇರುವುದಲ್ಲದೆ, ಬೆಟ್ಟ ಗುಡ್ಡಗಳ ಮೇಲಿನ ಮೇಲ್ಮೈ ಪದರ ಸವಕಳಿಯಾಗಿ ಮಳೆ ಬಂದಾಗ ಕೊಚ್ಚಿಕೊಂಡು ಬಂದು ಕೆರೆ, ಕಟ್ಟೆ, ಸರೋವರ ಇತ್ಯಾದಿ ಜಲ ಮೂಲಗಳಲ್ಲಿ ಹೂಳು ಹೆಚ್ಚಾಗಿ ನೀರಿನ ಸಂಗ್ರಹಣಾ ಸಾಮಥ್ರ್ಯ ಕಡಿಮೆಯಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಆಫ್ ರೋಡ್ ಟ್ರಯಲ್ ಗಳು ಶಬ್ದಮಾಲಿನ್ಯ, ವಾಯುಮಾಲಿನ್ಯಕ್ಕೂ ಕಾರಣವಾಗಲಿದ್ದು, ಹಲವು ಜೀವಿಜಂತುಗಳ ಸಾವಿಗೂ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಕುಡಿಯುವ ನೀರು ಪೂರೈಸುವ ಜಲ ಮೂಲಗಳಾದ ನದಿ, ತೊರೆ, ಕಾಲುವೆಗಳಲ್ಲಿ ಯಾವುದೇ ಸಾಹಸಿ ವಾಹನ ಸಂಚರಿಸಿ ನೀರು ಕಲುಷಿತಗೊಳಿಸದಂತೆ ಮತ್ತು ಗ್ರಾಮೀಣ ರಸ್ತೆಗಳು ಹಾಳಾಗದಂತೆ ಕ್ರಮ ವಹಿಸಬೇಕು, ಒಂದೊಮ್ಮೆ ರಸ್ತೆ ಹಾಳಾದರೆ, ಜಲಮೂಲ ಕಲುಷಿತವಾದರೆ ನಿರ್ದಾಕ್ಷಿಣ್ಯವಾಗಿ ನಿಯಮಾನುಸಾರ ಕಾನೂನು ಕ್ರಮ ಜರುಗಿಸುವಂತೆ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News