ಹಾಲಿನ ಖಾಲಿ ಪ್ಯಾಕೆಟ್‌ಗಳಿಂದ ನಿರ್ಮಾಣ ಸಾಮಗ್ರಿ: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ವಿಜ್ಞಾನಿಗಳ ಹೊಸ ಸಾಧನೆ
ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ? ಸಂಶೋಧನೆಗೆ ಹಾಲಿನ ಪ್ಯಾಕೆಟ್‌ಗಳನ್ನೇ ಆಯ್ಕೆ ಮಾಡಿದ್ದು ಯಾಕೆ?; ಇಲ್ಲಿದೆ ಮಾಹಿತಿ...
ಸಾಂದರ್ಭಿಕ ಚಿತ್ರ
ಭಾರತದ ಬಹುತೇಕ ಮನೆಗಳಲ್ಲಿ ದಿನನಿತ್ಯ ತರುವ ಅತ್ಯಂತ ಸಾಮಾನ್ಯ ದಿನಸಿ ವಸ್ತುಗಳಲ್ಲಿ ಹಾಲಿನ ಪ್ಯಾಕೆಟ್‌ಗಳು ಪ್ರಮುಖವಾದವು. ಆದರೆ, ಇವುಗಳ ವ್ಯಾಪಕ ಬಳಕೆಯಿಂದಾಗಿ ದೇಶಾದ್ಯಂತ ಸಾವಿರಾರು ಟನ್ ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಯಾಗುತ್ತಿದೆ. ಈ ಸಮಸ್ಯೆಗೆ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (IISc) ವಿಜ್ಞಾನಿಗಳು ಈಗ ಪರಿಹಾರ ಕಂಡುಕೊಂಡಿದ್ದಾರೆ.
ಸಾಮಾನ್ಯವಾಗಿ ಪಾಲಿಎಥಿಲಿನ್‌ನಿಂದ ತಯಾರಾಗುವ ಈ ಹಾಲಿನ ಪ್ಯಾಕೆಟ್‌ಗಳು ಇನ್ಮುಂದೆ ಕಸದ ರಾಶಿಗೆ ಸೇರುವ ಬದಲು, ಬೆಂಚ್‌ಗಳು ಹಾಗೂ ವಿವಿಧ ನಿರ್ಮಾಣ ಸಾಮಗ್ರಿಗಳ ತಯಾರಿಕೆಗೆ ಮರುಬಳಕೆಯಾಗಲಿವೆ.
ಐಐಎಸ್‌ಸಿಯ 'ಮೆಟೀರಿಯಲ್ಸ್ ಇಂಜಿನಿಯರಿಂಗ್' ವಿಭಾಗದ ಸಂಶೋಧಕರ ತಂಡ ಈ ಸಾಧನೆ ಮಾಡಿದ್ದು, ಮಾರ್ಚ್ ತಿಂಗಳಿನಲ್ಲಿ ಈ ಕುರಿತ ಸಂಶೋಧನಾ ಪ್ರಬಂಧವೂ ಪ್ರಕಟವಾಗಿದೆ. ದೇಶದಲ್ಲಿ ಪ್ರತಿದಿನ ಸುಮಾರು 10 ರಿಂದ 12 ಕೋಟಿ ಒಮ್ಮೆ ಬಳಸಿ ಬಿಸಾಡುವ ಹಾಲಿನ ಪ್ಯಾಕೆಟ್‌ಗಳನ್ನು ಬಳಸಲಾಗುತ್ತದೆ. ಇದು ದೇಶದ ಒಟ್ಟು ಹಾಲಿನ ಪ್ಯಾಕೇಜಿಂಗ್‌ನ ಸುಮಾರು ಅರ್ಧದಷ್ಟು ಭಾಗವಾಗಿದೆ ಎಂದು ಈ ಹಿಂದೆ ನಡೆದ ಅಧ್ಯಯನವೊಂದನ್ನು ಉಲ್ಲೇಖಿಸಿ 'The Indian Express' ವರದಿ ಮಾಡಿತ್ತು.
►ಸಂಶೋಧನೆಗೆ ಹಾಲಿನ ಪ್ಯಾಕೆಟ್‌ಗಳನ್ನೇ ಆಯ್ಕೆ ಮಾಡಿದ್ದು ಯಾಕೆ?
ಹಾಲಿನ ಪ್ಯಾಕೆಟ್‌ಗಳು ಸಾರ್ವಜನಿಕ ಕಸದ ತೊಟ್ಟಿಗಳಲ್ಲಿ ಮತ್ತು ರಸ್ತೆಬದಿಯಲ್ಲಿ ಸುಲಭವಾಗಿ ಎದ್ದು ಕಾಣುತ್ತವೆ ಹಾಗೂ ಬಹುಕಾಲ ಕಸವಾಗಿಯೇ ಬಿದ್ದಿರುತ್ತವೆ. ಇದೇ ಕಾರಣಕ್ಕೆ ಅವುಗಳನ್ನು ಈ ಸಂಶೋಧನೆಗೆ ಆಯ್ಕೆ ಮಾಡಿಕೊಳ್ಳಲಾಯಿತು ಎಂದು ಐಐಎಸ್‌ಸಿ ತಂಡದ ಪ್ರೊಫೆಸರ್ ಸೂರ್ಯಸಾರಥಿ ಬೋಸ್ ತಿಳಿಸಿದ್ದಾರೆ. ಪ್ಲಾಸ್ಟಿಕ್ ಬಾಟಲಿಗಳಂತಹ ಇತರ ತ್ಯಾಜ್ಯಗಳಿಗೆ ಉತ್ತಮ ಬೆಲೆ ಇರುವುದರಿಂದ ರದ್ದಿ ಆಯುವವರು ಅದನ್ನು ಬೇಗನೆ ಸಂಗ್ರಹಿಸುತ್ತಾರೆ.
ಮರುಬಳಕೆಯ ಹಂತದಲ್ಲೂ ಹಾಲಿನ ಪ್ಯಾಕೆಟ್‌ಗಳ ಒಳಗಿನ ಪದರದಲ್ಲಿರುವ ಕಡು ಬಣ್ಣದ ಪ್ಲಾಸ್ಟಿಕ್ ಅನ್ನು ರಿಸೈಕ್ಲಿಂಗ್ ಕಂಪನಿಗಳು ಹೆಚ್ಚಾಗಿ ಇಷ್ಟಪಡುವುದಿಲ್ಲ. ಹಾಲಿನ ಬಳಕೆಯ ಅವಧಿಯನ್ನು ಹೆಚ್ಚಿಸಲು, ನೇರ ಸೂರ್ಯನ ಬೆಳಕು ಮತ್ತು ನೇರಳಾತೀತ ಕಿರಣಗಳನ್ನು ತಡೆಯಲು ಈ ಕಡು ಬಣ್ಣದ ಪದರವನ್ನು ಬಳಸಲಾಗುತ್ತದೆ.
"ಈ ಪ್ಯಾಕೆಟ್‌ಗಳು ಅಂತಿಮವಾಗಿ ಕಸದ ರಾಶಿಯನ್ನೇ ಸೇರಬಹುದು. ಆದರೆ ರದ್ದಿ ಆಯುವವರು ಬೇಗನೆ ಎತ್ತಿಕೊಳ್ಳದಿರುವುದರಿಂದ ಇವು ರಸ್ತೆಬದಿ ಮತ್ತು ಡಸ್ಟ್‌ಬಿನ್‌ಗಳಲ್ಲೇ ದೀರ್ಘಕಾಲ ಉಳಿಯುತ್ತವೆ. ಎಣ್ಣೆಯ ಕ್ಯಾನ್‌ಗಳನ್ನು ಆಯುವವರು ಸುಲಭವಾಗಿ ಸಂಗ್ರಹಿಸುತ್ತಾರೆ. ಆದರೆ ಸೂಕ್ತ ಅಭಿಯಾನ ನಡೆಯದ ಹೊರತು ಹಾಲಿನ ಪ್ಯಾಕೆಟ್‌ಗಳಿಂದ ಅವರಿಗೆ ಯಾವುದೇ ಆರ್ಥಿಕ ಲಾಭ ಸಿಗುವುದಿಲ್ಲ" ಎಂದು ಬೋಸ್ ಹೇಳಿದ್ದಾರೆ.
►ಈ ತಂತ್ರಜ್ಞಾನ ಹೇಗೆ ಕೆಲಸ ಮಾಡುತ್ತದೆ?
ಮರುಬಳಕೆಯ ವೇಳೆ, ಹಾಲಿನ ಪ್ಯಾಕೆಟ್‌ನಲ್ಲಿರುವ ಪಾಲಿಎಥಿಲಿನ್ ಅನ್ನು ಎಣ್ಣೆ ಹಾಗೂ ಶ್ಯಾಂಪೂ ಬಾಟಲಿಗಳಲ್ಲಿ ಬಳಸುವ ಪಾಲಿಪ್ರೊಪಿಲೀನ್ ಎಂಬ ಮತ್ತೊಂದು ವಸ್ತುವಿನೊಂದಿಗೆ ಸಂಯೋಜಿಸಲಾಗುತ್ತದೆ. ಇವು ಅಣು ಹಂತದಲ್ಲಿ ಒಂದಕ್ಕೊಂದು ಭಿನ್ನವಾಗಿದ್ದರೂ, 'ವಿಟ್ರಿಮರ್ಸ್' (Vitrimers) ಎಂಬ ವಿಶೇಷ ಅಣುಗಳ ಸಹಾಯದಿಂದ ಈ ಎರಡೂ ವಸ್ತುಗಳನ್ನು ಬೆರೆಸಿ ಹೊಸ ಮರುಬಳಕೆ ವಸ್ತುವನ್ನು ಮಾಡಲಾಗುತ್ತದೆ.
"ಸಾಮಾನ್ಯವಾಗಿ ದುರ್ಬಲವಾಗಿರುವ ಈ ಹಾಲಿನ ಪ್ಯಾಕೆಟ್‌ಗಳನ್ನು ಬೆರೆಸಿ, ಹೊರಾಂಗಣದಲ್ಲಿ ಬಳಸಬಹುದಾದ ದೃಢವಾದ ವಸ್ತುವನ್ನು ಏಕೆ ತಯಾರಿಸಬಾರದು ಎಂದು ನಾವು ಯೋಚಿಸಿದೆವು. ಈ ಹೊಸ ತಂತ್ರಜ್ಞಾನದ ಮೂಲಕ ಸಭಾಂಗಣಗಳಲ್ಲಿ ಬಳಸುವ 3D ಪ್ರಿಂಟ್ ಪೋಡಿಯಂಗಳನ್ನು ಮಾಡಲು ನಮಗೆ ಸಾಧ್ಯವಾಗಿದೆ. ಇಂತಹ ಒಂದು ಪೋಡಿಯಂ ಅನ್ನು ಪರೀಕ್ಷಾರ್ಥ ಬಳಕೆಗೆ ಈಗ ಐಐಎಸ್‌ಸಿಗೆ ನೀಡಲಾಗಿದೆ" ಎಂದು ಬೋಸ್ ವಿವರಿಸಿದ್ದಾರೆ. ಬೋಸ್ ಅವರು ತ್ಯಾಜ್ಯ ವಸ್ತುಗಳ 3D ಪ್ರಿಂಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುವ 'VOiLA' ನವೋದ್ಯಮದ ಸಂಸ್ಥಾಪಕರೂ ಆಗಿದ್ದಾರೆ.
ಈ ಹೊಸ ಮರುಬಳಕೆ ವಸ್ತುವಿನಿಂದ ಕೇವಲ ಪೋಡಿಯಂ ಮಾತ್ರವಲ್ಲದೆ, ಬೆಂಚ್‌ಗಳಂತಹ ವಿವಿಧ ಹೊರಾಂಗಣ ಪೀಠೋಪಕರಣಗಳನ್ನು ಸಹ ತಯಾರಿಸಬಹುದಾಗಿದೆ.
►ಇಂತಹ ಇತರೆ ಮರುಬಳಕೆ ವಸ್ತುಗಳಿವೆಯೇ?
ಸುಲಭವಾಗಿ ಮರುಬಳಕೆ ಮಾಡಲು ಸಾಧ್ಯವಾಗದ ಮತ್ತೊಂದು ಪ್ಲಾಸ್ಟಿಕ್ ಎಂದರೆ 'ಮಲ್ಟಿ-ಲೇಯರ್ ಪ್ಲಾಸ್ಟಿಕ್' . ಚಿಪ್ಸ್ ಹಾಗೂ ಇತರೆ ಆಹಾರ ಪದಾರ್ಥಗಳನ್ನು ತಾಜಾ ಇರಿಸಲು ಈ ಕವರ್‌ಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಹಲವು ಪದರಗಳಿರುವುದರಿಂದ, ಮರುಬಳಕೆಗಾಗಿ ಪ್ರತಿಯೊಂದು ಪದರವನ್ನು ಬೇರ್ಪಡಿಸುವುದು ಕಷ್ಟ.
ಬೆಂಗಳೂರು ಮೂಲದ 'ಯೂನಿಫೈಡ್ ಇಂಟೆಲಿಜೆನ್ಸ್' ಎಂಬ ಸಂಸ್ಥೆಯು ಈ ಪ್ಲಾಸ್ಟಿಕ್‌ಗಳನ್ನು ಬಳಸಿ ದೃಢವಾದ ನಿರ್ಮಾಣ ಸಾಮಗ್ರಿಗಳನ್ನು ತಯಾರಿಸುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 1ರ ಒಳಗಿನ ಗೋಡೆಗಳಿಗೆ ಈ ವಸ್ತುವನ್ನೇ ಬಳಸಲಾಗಿದೆ. ಸಂಗ್ರಹಿಸಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಶುಚಿಗೊಳಿಸಿ, ಸಣ್ಣ ಚೂರುಗಳಾಗಿ ಕತ್ತರಿಸಲಾಗುತ್ತದೆ. ನಂತರ 'ಥರ್ಮೋಫ್ಯೂಷನ್' ಪ್ರಕ್ರಿಯೆಯ ಮೂಲಕ ಫಲಕಗಳನ್ನು ತಯಾರಿಸಿ, ಅವುಗಳ ನಡುವೆ ಜೇನುಗೂಡಿನ ಮಾದರಿಯ ರಚನೆ ನೀಡಿ ಗೋಡೆಗಳನ್ನು ನಿರ್ಮಿಸಲಾಗುತ್ತದೆ.
ಈ ಮರುಬಳಕೆ ವಸ್ತುವಿನ ಬಾಳಿಕೆ ಬಗ್ಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪೌಲ್ ಕೋಶಿ ಮಾತನಾಡಿ, "ಇದು ನಾಲ್ಕು ಇಂಚು ದಪ್ಪವಿದ್ದು, ಇಟ್ಟಿಗೆ ಗೋಡೆಗಿಂತ ಕೊಂಚ ತೆಳ್ಳಗಿರುತ್ತದೆ. ಆದರೆ ಅದಕ್ಕಿಂತ ಹಲವು ಪಟ್ಟು ಹೆಚ್ಚು ಗಟ್ಟಿಯಾಗಿರುತ್ತದೆ. ಸುತ್ತಿಗೆಯಿಂದ ಹೊಡೆದರೂ ಒಡೆಯುವುದಿಲ್ಲ, ಸಣ್ಣದಾಗಿ ಜಗ್ಗಿದರೂ ಮತ್ತೆ ತನ್ನ ಹಳೆಯ ಸ್ಥಿತಿಗೇ ಬರುತ್ತದೆ ಎಂದಿದ್ದಾರೆ.
ಈ ವಸ್ತುವಿನಿಂದ ಮನೆ ನಿರ್ಮಿಸಲು ಚದರ ಅಡಿಗೆ ಸ್ವಲ್ಪ ಹೆಚ್ಚಿನ ವೆಚ್ಚವಾಗಬಹುದು. ಆದರೆ ಶೀಘ್ರ ನಿರ್ಮಾಣ ಮತ್ತು ನೀರಿನ ಉಳಿತಾಯದ ದೃಷ್ಟಿಯಿಂದ ಇದು ಲಾಭದಾಯಕ. ಸಾಮಾನ್ಯ ಇಟ್ಟಿಗೆ-ಸಿಮೆಂಟ್ ನಿರ್ಮಾಣಕ್ಕೆ ಸಾವಿರಾರು ಲೀಟರ್ ನೀರು ಬೇಕಾಗುತ್ತದೆ. ಬೆಂಗಳೂರಿನಂತಹ ನಗರದಲ್ಲಿ ಪ್ರತಿದಿನ ಉತ್ಪತ್ತಿಯಾಗುವ ಸುಮಾರು 100 ಟನ್ ಪ್ಲಾಸ್ಟಿಕ್ ತ್ಯಾಜ್ಯದಿಂದ 10,000 ಚದರ ಅಡಿಯ ಕಟ್ಟಡವನ್ನು ನಿರ್ಮಿಸಬಹುದು ಎಂದು ಅವರು ಹೇಳಿದ್ದಾರೆ.
ಈ ಕ್ಷೇತ್ರದಲ್ಲಿ ಕೆಲಸ ಮಾಡುವ ಸಂಸ್ಥೆಗಳಿಗೆ ಕೆಲವು ಸವಾಲುಗಳೂ ಇವೆ. ನಿರ್ಮಾಣ ಕ್ಷೇತ್ರದ ಮೂಲ ನಿಯಮಗಳು ಸಿಮೆಂಟ್ ಹಾಗೂ ಇಟ್ಟಿಗೆ ಆಧಾರಿತ ಕಟ್ಟಡಗಳಿಗೆ ಮಾತ್ರ ಸೀಮಿತವಾಗಿವೆ. ಹೀಗಾಗಿ ಈ ಹೊಸ ಮಾದರಿಯ ಸಾಮಗ್ರಿಗಳು ಬೆಂಕಿ ನಿರೋಧಕತೆ ಮತ್ತು ದೃಢತೆ ಬಗ್ಗೆ ನೇರ ಪ್ರಯೋಗಾಲಯ ಪರೀಕ್ಷೆಯ ಪ್ರಮಾಣಪತ್ರಗಳನ್ನು ಹೊಂದಿರಬೇಕಾಗುತ್ತದೆ.
ಮತ್ತೊಂದೆಡೆ, ತ್ಯಾಜ್ಯದಿಂದ ಕಟ್ಟಿದ ಕಟ್ಟಡಗಳಲ್ಲಿ ವಾಸಿಸುವ ಬಗ್ಗೆ ಜನರಲ್ಲಲಿರುವ ಮಾನಸಿಕ ಹಿಂಜರಿಕೆಯನ್ನು ಹೋಗಲಾಡಿಸಬೇಕಿದೆ. ಈ ಕುರಿತು ಜಾಗೃತಿ ಮೂಡಿಸಲು ಕರ್ನಾಟಕದ ಆರ್ಚ್‌ಬಿಷಪ್ ಮುಂದಾಗಿದ್ದು, ಬೆಂಗಳೂರು ಹೊರವಲಯದ ಅತ್ತಿಬೆಲೆಯಲ್ಲಿ ಚರ್ಚ್ ಒಂದನ್ನು ನಿರ್ಮಿಸಲು 'ಯೂನಿಫೈಡ್ ಇಂಟೆಲಿಜೆನ್ಸ್' ಸಂಸ್ಥೆಗೆ ಆದೇಶ ನೀಡಿದ್ದಾರೆ.
ಕೃಪೆ: indianexpress.com