ಕಾವೇರಿ ವಿವಾದ | ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ನಾಳೆ (ಆ.13) ʼಕರ್ನಾಟಕ ಬಂದ್ʼಗೆ ಕರೆ
ಯಾವುದೇ ಕಾರಣಕ್ಕೂ ಬಂದ್ ಹಿಂಪಡೆಯುವ ಪ್ರಶ್ನೆಯೇ ಇಲ್ಲ : ವಾಟಾಳ್ ನಾಗರಾಜ್
ಬೆಂಗಳೂರು : ತಮಿಳುನಾಡಿಗೆ ನೀರು ಹರಿಸುವಂತೆ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ನೀಡಿರುವ ಆದೇಶ ಖಂಡಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ ಗುರುವಾರ(ಆ.13) ಕರ್ನಾಟಕ ಬಂದ್ ಹೋರಾಟಕ್ಕೆ ಕರೆ ನೀಡಿದೆ. ಆದರೆ, ಹಲವು ಸಂಘ-ಸಂಸ್ಥೆಗಳು ನೈತಿಕ ಬೆಂಬಲ ಮಾತ್ರ ಸೂಚಿಸಿರುವ ಹಿನ್ನೆಲೆ ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ದೊರೆಯುವ ಸಾಧ್ಯತೆ ಇದೆ.
ಆಸ್ಪತ್ರೆ, ಔಷಧಿ ಮಳಿಗೆ, ಶಾಲೆ-ಕಾಲೇಜು, ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ, ಖಾಸಗಿ ಬಸ್‍ಗಳು, ಮೆಟ್ರೋ ರೈಲು ಸೇವೆ, ಆಟೊ, ಟ್ಯಾಕ್ಸಿ ಸೇವೆ, ಸರಕಾರಿ ಕಚೇರಿಗಳು ಸೇರಿದಂತೆ ಎಲ್ಲ ಚಟುವಟಿಕೆಗಳು ಎಂದಿನಂತೆ ಕಾರ್ಯನಿರ್ವಹಣೆ ಮಾಡಲಿದೆ. ಆದರೆ, ಮಂಡ್ಯ, ಮೈಸೂರು ಸೇರಿದಂತೆ ವಿವಿಧೆಡೆ ಕನ್ನಡ ಪರ ಸಂಘಟನೆಗಳ ಹೋರಾಟ ನಡೆಯುವ ಸಾಧ್ಯತೆಗಳಿವೆ.
ಮತ್ತೊಂದೆಡೆ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ಹಲವು ಪ್ರಮುಖ ಸಂಘಟನೆಗಳು ಬಂದ್‍ನಿಂದ ದೂರ ಉಳಿಯಲು ನಿರ್ಧರಿಸಿವೆ. ಕರವೇ ನಾರಾಯಣ ಗೌಡ ಬಣ ಹಾಗೂ ಶಿವರಾಮೇಗೌಡ ಬಣ ಬಂದ್‍ಗೆ ಬೆಂಬಲ ನೀಡುತ್ತಿಲ್ಲವೆಂದು ಸ್ಪಷ್ಟಪಡಿಸಿವೆ. ಇದರೊಂದಿಗೆ ಖಾಸಗಿ ಸಾರಿಗೆ ಒಕ್ಕೂಟ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಕೆಎಸ್ಸಾರ್ಟಿಸಿ, ಬಿಎಂಟಿಸಿ, ಮೆಟ್ರೋ ಸಿಬ್ಬಂದಿ ಒಕ್ಕೂಟಗಳು, ಬಹುತೇಕ ಆಟೊ ಚಾಲಕರ ಒಕ್ಕೂಟಗಳು ಬಂದ್‍ಗೆ ಬೆಂಬಲ ನೀಡದಿರಲು ನಿರ್ಧರಿಸಿವೆ. ಖಾಸಗಿ ಶಾಲೆಗಳ ಒಕ್ಕೂಟಗಳಾದ ರುಪ್ಸಾ ಮತ್ತು ಕ್ಯಾಮ್ಸ್ ಸಂಸ್ಥೆಗಳು, ಹೋಟೆಲ್ ಮಾಲೀಕರ ಸಂಘಗಳು ಕೇವಲ ನೈತಿಕ ಬೆಂಬಲ ಸೂಚಿಸಿವೆ. ಆರಂಭದಲ್ಲಿ ಬಂದ್‍ಗೆ ಬೆಂಬಲ ಸೂಚಿಸಿದ್ದ ಕರವೇ ಪ್ರವೀಣ್ ಶೆಟ್ಟಿ ಬಣ ಬಂದ್‍ಗೆ ಬೆಂಬಲ ನೀಡದಿರಲು ನಿರ್ಧರಿಸಿದೆ.
‘ಕಾವೇರಿ ವಿವಾದ ವಿಚಾರದಲ್ಲಿ ವಾಟಾಳ್ ಅವರ ಹೋರಾಟಕ್ಕೆ ನಮ್ಮ ಬೆಂಬಲ ಮೊದಲಿನಿಂದಲೂ ಇದೆ. ಆದರೆ ಈ ಸಂದರ್ಭದಲ್ಲಿ ಅವರು ಕರೆ ನೀಡಿರುವ ಬಂದ್‍ಗೆ ನಮ್ಮ ಬೆಂಬಲವಿಲ್ಲ. ಅಗತ್ಯವಿದ್ದರೆ ಎಲ್ಲ ಸಂಘಟನೆಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಮುಂದಿನ ದಿನಗಳಲ್ಲಿ ಬಂದ್ ಮಾಡಲು ವಾಟಾಳ್ ನಾಗರಾಜ್ ಅವರಿಗೆ ನಾವು ಮನವಿ ಮಾಡುತ್ತೇವೆ’ ಎಂದು ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ.
ಬುಧವಾರ ಈ ಕುರಿತು ಬಂದ್‍ನ ನೇತೃತ್ವವಹಿಸಿರುವ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಮಾತನಾಡಿ, ‘ಯಾವುದೇ ಕಾರಣಕ್ಕೂ ನಾಳಿನ(ಆ.13) ಬಂದ್ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ‘ಅಖಂಡ ಕರ್ನಾಟಕ ಬಂದ್’ ನಡೆಯಲಿದೆ ಎಂದರು.
ಅಲ್ಲದೆ, ಮೊದಲು ಕರ್ನಾಟಕ ಬಂದ್‍ಗೆ ಕರೆಯನ್ನು ನೀಡಿದ್ದೇ ಪ್ರವೀಣ್ ಶೆಟ್ಟಿ ಬಣದವರು. ಆದರೆ, ಈಗ ಏಕಾಏಕಿ ಬಂದ್‍ಗೆ ಬೆಂಬಲವಿಲ್ಲ ಎಂದು ಹೇಳಿಕೆ ನೀಡುತ್ತಿರುವುದರ ಹಿಂದಿನ ಕಾರಣ ಏನೆಂಬುದು ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವಾಟಾಳ್ ವಶಕ್ಕೆ: ‘ಬಂದ್ ಪೂರ್ವಭಾವಿಯಾಗಿ ಬುಧವಾರ ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದ ಬಳಿ ವಾಟಾಳ್ ನಾಗರಾಜ್ ವಿನೂತನ ‘ಪೊರಕೆ ಚಳುವಳಿ' ನಡೆಸಲು ಮುಂದಾದರು. ಈ ವೇಳೆ ತಡೆದ ಪೊಲೀಸರು, ತಕ್ಷಣವೇ ಅವರನ್ನು ವಶಕ್ಕೆ ಪಡೆದರು. ಆಗ ರಾಜ್ಯ ಸರಕಾರ ವಿರುದ್ಧ ವಾಟಾಳ್ ಆಕ್ರೋಶ ಹೊರಹಾಕಿದರು.
‘ಕನ್ನಡ ಪರ ಸಂಘಟನೆಗಳು ಬಂದ್ ಅವರ ಪಾಡಿಗೆ ಮಾಡಲಿ, ನೆಲ-ಜಲದ ವಿಚಾರ ಬಂದಾಗ ಈ ರೀತಿಯಲ್ಲಿ ಮಾಡುತ್ತಾರೆ. ರೈತರ ಆಕ್ರೋಶ ಸಹಜವಾಗಿದೆ. ಅಲ್ಪ ಪ್ರಮಾಣದಲ್ಲಿ ನೀರು ಬಿಡಿ ಎಂದಿದ್ದರೆ ಸಮಸ್ಯೆ ಇಲ್ಲ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಏಕಪಕ್ಷೀಯಯ ನಿರ್ಧಾರ ಕೈಗೊಳ್ಳಬಾರದು’
-ರಾಮಲಿಂಗಾರೆಡ್ಡಿ, ಜಲಸಂಪನ್ಮೂಲ ಸಚಿವ