ಕಾವೇರಿ ನೀರು ಹಂಚಿಕೆ ವಿಚಾರ | CWRC ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸರಕಾರ ನಿರ್ಧಾರ

Update: 2026-07-29 15:45 IST

ಬೆಂಗಳೂರು : ರಾಜ್ಯದಲ್ಲಿ ತೀವ್ರ ಸ್ವರೂಪದ ಮಳೆ ಕೊರತೆಯ ಮಧ್ಯೆಯೇ ಕಾವೇರಿ ನೀರು ಹಂಚಿಕೆ ವಿಚಾರದಲ್ಲಿಯೂ ಕರ್ನಾಟಕ ರಾಜ್ಯಕ್ಕೆ ಹಿನ್ನೆಡೆಯಾಗಿದೆ. ತಮಿಳುನಾಡು ರಾಜ್ಯಕ್ಕೆ 15 ದಿನಗಳ ಕಾಲ ಪ್ರತಿನಿತ್ಯ 3,500 ಕ್ಯೂಸೆಕ್‌ ನೀರು ಹರಿಸಲು ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ನಿನ್ನೆ ಸೂಚಿಸಿತ್ತು.

ಮಂಗಳವಾರ CWRC ನೀಡಿರುವ ಈ ಆದೇಶದ ಹಿನ್ನೆಲೆಯಲ್ಲಿ ಮುಂದಿನ 15 ದಿನಗಳಲ್ಲಿ ತಮಿಳುನಾಡು ರಾಜ್ಯಕ್ಕೆ ಒಟ್ಟು 4.56 ಟಿಎಂಸಿಯಷ್ಟು ನೀರನ್ನು ಹರಿಸಲೇಬೇಕಾದ ಪರಿಸ್ಥಿತಿ ಎದುರಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿನ ಜಲಾಶಯಗಳ ನೀರಿನ ಸಂಗ್ರಹ, ಮಳೆಯ ಪ್ರಮಾಣ ಹಾಗೂ ಒಳಹರಿವನ್ನು ಪರಾಮರ್ಶಿಸಲು ನಡೆದ CWRC ಸಭೆಯಲ್ಲಿ ಈ ಮೇಲ್ಕಂಡ ತೀರ್ಮಾನ ಮಾಡಲಾಗಿತ್ತು.

ಈ ತೀರ್ಮಾನದ ಬೆನ್ನಲ್ಲೇ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಹೀಗಾಗಿ ವಿಧಾನಸೌಧದಲ್ಲಿ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತುರ್ತು ಸಭೆ ನಡೆಸಿದ್ದು, ಸಭೆಯಲ್ಲಿ CWRC ಆದೇಶದ ವಿರುದ್ಧ CWMAಗೆ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಲಾಗಿದೆ.

ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು, ಕಾವೇರಿ ಜಲಾನಯನದ ಅಧಿಕಾರಿಗಳು ಹಾಗೂ ವಕೀಲರ ಜೊತೆ ಮಹತ್ವದ ಚರ್ಚೆ ನಡೆದಿದ್ದು, ಕೆಆರ್‌ಎಸ್‌ ಡ್ಯಾಂನಲ್ಲಿ ಹಾಲಿ ಲಭ್ಯವಿರುವ ನೀರಿನ ಬಗ್ಗೆ ಸಚಿವರು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.

ಬಳಿಕ ಮಾತನಾಡಿದ ಅವರು, ಸದ್ಯ 46 ಟಿಎಂಸಿ ನೀರು ಮಾತ್ರ ಲಭ್ಯವಿದೆ, ಇದರಲ್ಲಿ 10 ಜಿಲ್ಲೆಗೆ ಕುಡಿಯೋಕೆ 12 ಟಿಎಂಸಿ ನೀರು ಬೇಕಾಗುತ್ತೆ. ಹೀಗಾಗಿ CWRC ಆದೇಶ ಪಾಲಿಸಲು ಸಾಧ್ಯವಿಲ್ಲದ ಕಾರಣ, ಮೇಲ್ಮನವಿ ಸಲ್ಲಿಸಲು ನಿರ್ಧಾರ ಮಾಡಿದ್ದೇವೆ. ಇಂದೇ ಅದನ್ನು ಸಲ್ಲಿಸುತ್ತೇವೆ. ಅವರ ಲೆಕ್ಕದ ಪ್ರಕಾರ 39 ಟಿಎಂಸಿ ನೀರು ಬಿಡಬೇಕಿತ್ತು. ಸುಗಮವಾಗಿ ಮಳೆ ಬಂದಿದ್ದರೆ ಮಾತ್ರ ಕೇಳಿದಷ್ಟು ಕೊಡಬೇಕಿತ್ತು. ಹೀಗಾಗಿ ನಮ್ಮ ವಾದವನ್ನು ಶ್ರೀರಾಮಯ್ಯನವರು ಮುಂದುವರಿಸುತ್ತಾರೆ. ನಮ್ಮಲ್ಲೇ ಶೇ. 66ರಷ್ಟು ಮಳೆ ಕಡಿಮೆ ಆಗಿದೆ ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News