SIR | ʼಎಎಸ್‍ಡಿಡಿಒʼ ಅಡಿಯಲ್ಲಿ 84.31 ಲಕ್ಷ ಮತದಾರರು ಪತ್ತೆ: ರಾಜ್ಯ ಮುಖ್ಯ ಚುನಾವಣಾಧಿಕಾರಿ
ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್
ಬೆಂಗಳೂರು : ಮತದಾರರ ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್)ಪ್ರಕ್ರಿಯೆ ವೇಳೆ ರಾಜ್ಯದಲ್ಲಿ ಮೃತಪಟ್ಟ, ನಕಲಿ ಮತ್ತು ಇತರೆ ವರ್ಗ ಒಳಗೊಂಡತೆ ʼಎಎಸ್‍ಡಿಡಿಒʼ ಅಡಿಯಲ್ಲಿ 84,31,612 ಮತದಾರರು ಪತ್ತೆಯಾಗಿದ್ದು, ಇದರ ಪರಿಶೀಲನೆ ಮುಂದುವರೆಸಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ.ಅನ್ಬುಕುಮಾರ್ ಹೇಳಿದ್ದಾರೆ.
ಬುಧವಾರ ನಗರದ ಮುಖ್ಯ ಚುನಾವಣಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಕಾರ್ಯ ಚುರುಕುಗೊಂಡಿದ್ದು, 5,54,32,314 ಮತದಾರರಿಗೆ ಹಂಚಿಕೆ ಮಾಡಿರುವ ಗಣತಿ ನಮೂನೆಗಳ ಪೈಕಿ 4,26,75,861 ನಮೂನೆಗಳನ್ನು ಡಿಜಿಟಲೀಕರಣ ಮಾಡಲಾಗಿದೆ. ಆದರೆ, ಪರಿಶೀಲನೆ ವೇಳೆ ರಾಜ್ಯಾದ್ಯಂತ ಗೈರಾದ, ಸ್ಥಳಾಂತರಗೊಂಡ, ಮೃತಪಟ್ಟ, ನಕಲಿ ಮತ್ತು ಇತರೆ ವರ್ಗ ಸೇರಿದಂತೆ ಎಎಸ್‍ಡಿಡಿಒ ಅಡಿಯಲ್ಲಿ ಒಟ್ಟು 84,31,612 ಮತದಾರರು ಪತ್ತೆಯಾಗಿದ್ದಾರೆ ಎಂದು ತಿಳಿಸಿದರು.
ಎಎಸ್‍ಡಿಡಿಒ ಅಡಿಯಲ್ಲಿ ಪತ್ತೆಯಾದ 84,31,612 ಮತದಾರರಲ್ಲಿ 11,61,231 ಮತದಾರರು ನಾಪತ್ತೆ ಎಂದು ಗೊತ್ತಾಗಿದೆ. ಅದೇ ರೀತಿ, 51,74,968 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. 14,99,799 ಮತದಾರರು ಮೃತಪಟ್ಟಿದ್ದು, 5,62,572 ಜನರು ಎರಡು ಕಡೆ ಮತದಾನದ ಹಕ್ಕು ಹೊಂದಿರುವುದು ಕಂಡುಬಂದಿದೆ. ಇದರ ಜೊತೆಗೆ 33,042 ಇತರೆ ಮತದಾರರನ್ನೂ ಗುರುತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಆ.8 ಕೊನೆ ದಿನ: ಎಸ್‍ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಮತದಾರರು ತಮ್ಮ ಗಣತಿ ಅರ್ಜಿ ಸಲ್ಲಿಸಲು ಆ. 8 ಕೊನೆಯ ದಿನವಾಗಿದೆ. ಹೀಗಾಗಿ, ಈ ಕೂಡಲೇ ಮತದಾರರು ನಿಗದಿತ ದಿನಾಂಕದೊಳಗೆ ಸಂಬಂಧಿಸಿದ ಬಿಎಲ್‍ಒಗಳಿಗೆ ಗಣತಿ ನಮೂನೆಗಳನ್ನು ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಅಲ್ಲದೆ, ರಾಜ್ಯಾದ್ಯಂತ ಇನ್ನೂ 43,24,847 ಗಣತಿ ನಮೂನೆಗಳನ್ನು ಸಾರ್ವಜನಿಕರು ವಾಪಸ್ಸು ಮಾಡುವುದು ಬಾಕಿ ಇದೆ. ಇತ್ತ ಜಿಬಿಎ ವ್ಯಾಪ್ತಿಯಲ್ಲಿ ಒಟ್ಟು 1,03,88,363 ಮತದಾರರಿದ್ದು, ಈ ಪೈಕಿ 39,38,202 ಎಎಸ್‍ಡಿಡಿಒ ಮತದಾರರು ಪತ್ತೆಯಾಗಿದ್ದಾರೆ ಎಂದು ಅವರು ಹೇಳಿದರು.
‘ಸುಮಾರು 29 ಲಕ್ಷ ಮತದಾರರು ‘2002ರ ಮಾಹಿತಿ ಇಲ್ಲ' ಎಂಬ ಕಾರಣ ನೀಡಿ ಅರ್ಜಿ ವಾಪಸ್ ಕೊಟ್ಟಿದ್ದಾರೆ. ಆದರೆ, ಮಾಹಿತಿ ಲಭ್ಯವಿಲ್ಲದಿದ್ದರೂ ಬಿಎಲ್‍ಒಗಳ ನೆರವಿನಿಂದ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಶಾಶ್ವತವಾಗಿ ಸ್ಥಳಾಂತರಗೊಂಡಿರುವ 51.74 ಲಕ್ಷ ಮತದಾರರು ಪ್ರಸ್ತುತ ಕರ್ನಾಟಕದ ಯಾವುದೇ ಕ್ಷೇತ್ರದಲ್ಲಿ ವಾಸವಿದ್ದು, ದೇಶದ ಬೇರೆ ಎಲ್ಲೂ ಮತ ಹೊಂದಿರದಿದ್ದರೆ ನಮೂನೆ-6 ಮೂಲಕ ಸೂಕ್ತ ವಿಳಾಸದ ದಾಖಲೆ ನೀಡಿ ಅರ್ಜಿ ಸಲ್ಲಿಸಬಹುದು. ಅವರು ಕರ್ನಾಟಕದಲ್ಲಿ ವಾಸ ಮಾಡುತ್ತಿರುವುದಕ್ಕೆ ಸರಿಯಾದ ದಾಖಲೆ ಸಲ್ಲಿಸಿದರೆ ಅವರ ಹೆಸರನ್ನು ಪರಿಗಣಿಸಲಾಗುತ್ತದೆ, ಇಲ್ಲವಾದಲ್ಲಿ ಅಂತಿಮ ಪಟ್ಟಿಯಿಂದಲೂ ಅವರನ್ನು ಹೊರಗಿಡಲಾಗುತ್ತದೆ ಎಂದು ವಿ.ಅನ್ಬುಕುಮಾರ್ ಹೇಳಿದರು.
ತಿದ್ದುಪಡಿಗೆ ಈಗಲೂ ಅವಕಾಶ: ‘ಸಲ್ಲಿಕೆ ಮಾಡಿರುವ ಮತದಾರರ ಗಣತಿ ನಮೂನೆಯಲ್ಲಿ ಯಾವುದೇ ರೀತಿಯ ಬದಲಾವಣೆ, ತಿದ್ದುಪಡಿಗಾಗಿ ಆ.8ರವರೆಗೂ ಅವಕಾಶ ನೀಡಲಾಗಿದೆ.ಅಗತ್ಯಯುಳ್ಳವರು ಆಯಾ ಬಿಎಲ್‍ಒಗಳನ್ನು ಸಂಪರ್ಕಿಸಿ ತಮ್ಮ ಮಾಹಿತಿ ಬದಲಾವಣೆ ಮಾಡಿಕೊಳ್ಳಬಹುದು’ ಎಂದು ವಿ. ಅನ್ಬುಕುಮಾರ್ ತಿಳಿಸಿದ್ದಾರೆ.
ಎಎಸ್‍ಡಿಡಿಒ ಎಂದರೇನು?: ಎ-ಅಬ್ಸೆಂಟ್(ಬಿಎಲ್‍ಒ ಗಣತಿ ನಮೂನೆ ತಲುಪಿಸುವ ವೇಳೆ ಮತದಾರ ಲಭ್ಯವಾಗದಿರುವುದು), ಎಸ್-ಪರ್ಮನೆಂಟ್ ಶಿಫ್ಟಿಂಗ್(ಖಾಯಂ ಆಗಿ ಆ ಮತಗಟ್ಟೆ ವ್ಯಾಪ್ತಿಯಿಂದ ಸ್ಥಳಾಂತರಗೊಂಡಿರುವುದು), ಡಿ-ಡೆಡ್(ಮೃತಪಟ್ಟಿರುವ ಮತದಾರರು), ಡಿ-ಡೂಪ್ಲಿಕೇಟ್(ಒಂದು ಕಡೆ ಮತ ಇದ್ದರೂ ಮತ್ತೊಂದು ಮತಗಟ್ಟೆ ವ್ಯಾಪ್ತಿಯಲ್ಲಿ ಹೆಸರು ನೋಂದಾಯಿಸಿಕೊಂಡವರು), ಒ-ಅದರ್(ಇತರರು).