ಬಿಜೆಪಿಗರ ಎದೆ ಸೀಳಿದರೆ ಭ್ರಷ್ಟಾಚಾರ ಮಾತ್ರ ಕಾಣುತ್ತದೆ : ಪ್ರಿಯಾಂಕ್ ಖರ್ಗೆ
► "KPSC ಮಾಜಿ ಅಧ್ಯಕ್ಷ ಯಡಿಯೂರಪ್ಪ ಕುಟುಂಬದ ಸಂಬಂಧಿ; ಇದನ್ನು ಹೇಳಿದ್ದು ಯತ್ನಾಳ್" ► "ವಿಜಯೇಂದ್ರರವರೇ, ನಿಮ್ಮಲ್ಲಿ ಎಳ್ಳು ಕಾಳಷ್ಟು ನೈತಿಕತೆ ಇದ್ದರೆ ಯತ್ನಾಳ್ ಎತ್ತಿರುವ ವಿಷಯಗಳಿಗೆ ಉತ್ತರ ಹೇಳಿ"
ಪ್ರಿಯಾಂಕ್ ಖರ್ಗೆ/ವಿಜಯೇಂದ್ರ
ಬೆಂಗಳೂರು : ʼಬಿಜೆಪಿಗರ ಎದೆ ಸೀಳಿದರೆ ಭ್ರಷ್ಟಾಚಾರ ಮಾತ್ರ ಕಾಣುತ್ತದೆ, ಅಂತೆಯೇ ಎಲ್ಲಾ ಹಗರಣಗಳ ಮೂಲ ಕೆದಕಿದರೆ ಬಿಜೆಪಿಯ ಬಾಗಿಲಿಗೆ ಬಂದು ನಿಲ್ಲುತ್ತದೆ!ʼ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯ ವಿಡಿಯೋವೊಂದನ್ನು ಹಂಚಿಕೊಂಡು ಬರೆದುಕೊಂಡಿರುವ ಅವರು, "ಸಾಲು ಸಾಲು ನೇಮಕಾತಿ ಹಗರಣಗಳನ್ನು ನಡೆಸಿದ ಕೆಪಿಎಸ್ಸಿಯ ಮಾಜಿ ಅಧ್ಯಕ್ಷ ಯಡಿಯೂರಪ್ಪನವರ ಕುಟುಂಬದ ಸಂಬಂಧಿಯಂತೆ. ಆತನ ಮನೆಯಲ್ಲಿ ಯಡಿಯೂರಪ್ಪನವರ ಹಾಗೂ ವಿಜಯೇಂದ್ರರವರ ಫೋಟೋಗಳನ್ನು ಭಕ್ತಿಪೂರ್ವಕವಾಗಿ ಹಾಕಿದ್ದಾನಂತೆ. ಇದನ್ನು ಹೇಳಿರುವುದು ಯಡಿಯೂರಪ್ಪನವರ ಕುಟುಂಬದ ಆಳ ಅಗಲಗಳನ್ನು ಚೆನ್ನಾಗಿ ಬಲ್ಲಂತಹ ಯತ್ನಾಳ್ ರವರು" ಎಂದು ಉಲ್ಲೇಖಿಸಿದ್ದಾರೆ.
ಬಿಜೆಪಿ ಸರಕಾರವೇ ನೇಮಿಸಿದ್ದ ಕೆಪಿಎಸ್ಸಿ ಅಧ್ಯಕ್ಷನ ಅಕ್ರಮಗಳಲ್ಲಿ ವಿಜಯೇಂದ್ರ ಅವರೂ ಪಾಲುದಾರರೇ?. ವಿಜಯೇಂದ್ರರವರೇ, ಕೆಪಿಎಸ್ಸಿ ವಿಚಾರದಲ್ಲಿ ನಿಮ್ಮ ಒಳಮರ್ಮಗಳು ಬಯಲಾಗುವ ಭಯದಿಂದ ಪ್ರತಿಭಟನೆ ಎಂಬ ನಾಟಕ ಶುರು ಮಾಡಿರುವಿರಾ? ಎಂದು ಪ್ರಶ್ನಿಸಿದ್ದಾರೆ.
ವಿಜಯೇಂದ್ರರವರೇ, ನಿಮ್ಮಲ್ಲಿ ಎಳ್ಳು ಕಾಳಷ್ಟು ನೈತಿಕತೆ ಇದ್ದರೆ ಯತ್ನಾಳ್ ಅವರು ಎತ್ತಿರುವ ವಿಷಯಗಳಿಗೆ ಉತ್ತರ ಹೇಳಿ, ನಿಮಗೂ ಶಿವಶಂಕರಪ್ಪನಿಗೂ ಏನು ಸಂಬಂಧ? ಅಂತಹ ಭ್ರಷ್ಟನನ್ನು ನಿಮ್ಮ ಸರಕಾರ ಕೆಪಿಎಸ್ಸಿಗೆ ನೇಮಿಸಿದ್ದೇಕೆ? ನಿಮ್ಮ ವ್ಯವಹಾರಗಳಿಗೆ ಆತ ಬೇನಾಮಿಯೇ? ನಿಮ್ಮ ಹಾಗೂ ನಿಮ್ಮ ಪೂಜ್ಯ ತಂದೆಯವರ ಮೇಲೆ ಆತನಿಗೆ ಫೋಟೋ ಇಟ್ಟುಕೊಳ್ಳುವಷ್ಟು ಕೃತಜ್ಞನಾಗಿರುವುದೇಕೆ? ತಾವು ಇದುವರೆಗೂ ಆತನ ವಿರುದ್ಧ ಒಂದೇ ಒಂದು ಪದ ಮಾತನಾಡದಿರುವುದೇಕೆ? ಈ ಪ್ರಶ್ನೆಗಳಿಗೆ ಉತ್ತರ ನೀಡುವ ನೈತಿಕ ಧೈರ್ಯ ನಿಮ್ಮಲ್ಲಿದೆಯೇ? ಎಂದು ಅವರು ಕೇಳಿದ್ದಾರೆ.