×
Ad

ಮೈಸೂರು ರಾಜಮನೆತನದ ಮೇಲೆ ಮುಗಿಬೀಳುವುದನ್ನು ಸರಕಾರ ನಿಲ್ಲಿಸಬೇಕು : ಛಲವಾದಿ ನಾರಾಯಣಸ್ವಾಮಿ

Update: 2025-01-31 22:05 IST

 ಛಲವಾದಿ ನಾರಾಯಣಸ್ವಾಮಿ

ಮೈಸೂರು : ಮೈಸೂರು ರಾಜಮನೆತನದ ಮೇಲೆ ಮುಗಿಬೀಳುವುದನ್ನು ಸರ್ಕಾರ ನಿಲ್ಲಿಸಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಕ್ರೋ ಫೈನ್ಸಾನ್ ಕಿರುಕುಳ ತಡೆಗೆ ತಂದ ಸುಗ್ರೀವಾಜ್ಞೆಯನ್ನು ಸ್ವಾಗತಿಸುತ್ತೇನೆ. ಅದೇ ರೀತಿ ಬೆಂಗಳೂರು ಅರಮನೆ ಜಾಗದ ವಿವಾದ ಸಂಬಂಧ ತಂದ ಸುಗ್ರೀವಾಜ್ಞೆ ವಿರೋಧಿಸುತ್ತೇನೆ ಎಂದು ತಿಳಿಸಿದರು.

ಕಾಂಗ್ರೆಸ್ ಸರಕಾರ ಎಲ್ಲದಕ್ಕೂ ಸುಗ್ರೀವಾಜ್ಞೆ ತರಲು ಮುಂದಾಗಿದೆ. ದೇಶದ ಮೇಲೆ ತುರ್ತು ಪರಿಸ್ಥಿತಿ ತಂದವರು ಸುಗ್ರೀವಾಜ್ಞೆ ತರದೇ ಇರುತ್ತಾರೆಯೇ? ಬೆಂಗಳೂರು ಅರಮನೆ ಜಾಗದ ವಿವಾದ ನ್ಯಾಯಲಯದಲ್ಲಿ ಇತ್ಯರ್ಥವಾಗಿಲ್ಲ. ಈ ವಿಚಾರದಲ್ಲಿ ಸರ್ಕಾರ ದ್ವಂದ್ವ ನೀತಿ ಅನುಸರಿಸುತ್ತಿದೆ ಎಂದು ಟೀಕಿಸಿದರು.

ಮುಡಾ ಪ್ರಕರಣ ಸಿಬಿಐಗೆ ವಹಿಸಿ: ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅಪರಾಧಿ. ಯಾವುದೇ ನ್ಯಾಯಾಲಯ ನಿರಾಪರಾಧಿ ಎಂದು ಹೇಳಿಲ್ಲ. ಈಗಲಾದರೂ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು. ರಾಜ್ಯಪಾಲರು ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟರು. ಜಾರಿ ನಿರ್ದೇಶನಾಲಯ ಮುಡಾದಲ್ಲಿ ಹಗರಣ ನಡೆದಿರುವುದನ್ನು ಬಹಿರಂಗಪಡಿಸಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಭಿವೃದ್ಧಿ ಪದವೇ ಮರೆತುಹೋಗಿದೆ. ಕೇವಲ 5 ಗ್ಯಾರಂಟಿಗಳಲ್ಲಿ 5 ವರ್ಷ ಕಳೆಯಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇದ್ದಾರೆ ಎಂದು ಲೇವಡಿ ಮಾಡಿದರು.

ಮುಖ್ಯಮಂತ್ರಿ ಮಾತಿಗೆ ಸಚಿವರು ಕವಡೆ ಕಾಸಿನ ಗೌರವ ಕೊಡುತ್ತಿಲ್ಲ. ಏನೇ ಹೇಳಿದರೂ ಕೇಳುತ್ತಿಲ್ಲ. ಮಂತ್ರಿಗಳು ಪ್ರೈವೇಟ್ ಲಿಮಿಟೆಡ್ ಕಂಪನಿ ಎಂದಾಗಿದ್ದಾರೆ. ಯಾರು ಬೇಕಾದರೂ ಲೂಟಿ ಮಾಡಬಹುದು. ಕದ್ದ ಮಾಲು ವಾಪಸ್ ಕೊಟ್ಟರೆ ಚುಪ್ತ ಮಾಡುವ ಹೊಸ ಕಾನೂನು ರಾಜ್ಯದಲ್ಲಿದೆ ಎಂದರು.

ಬಕೆಟ್ ರಾಜಕಾರಣ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಬಕೆಟ್ ರಾಜಕಾರಣ ಮಾಡುತ್ತಿದ್ದಾರೆ. ಬೆಂಗಳೂರಿಗೆ ಬರದೇ ಮೈಸೂರಿಂದಲೇ ಕೌಂಟರ್ ಕೊಡುತ್ತಾರೆ. ತಾಕತ್ ಇದ್ದರೆ ತಮ್ಮ ಮುಂದೆ ಬಂದು ಮಾತಾಡಲಿ. ಅಂಕಿ-ಸಂಖ್ಯೆಗಳ ಸಮೇತ ಅವರಿಗೆ ಉತ್ತರ ಕೊಡುತ್ತೇನೆ ಎಂದು ಸವಾಲು ಹಾಕಿದರು.

ಕುಂಭಮೇಳ ವಿರೋಧಿಸುವವರನ್ನು ನೇಣಿಗೇರಿಸಿ: ಕುಂಭಮೇಳ ವಿರೋಧಿಸುವ ಯಾರನ್ನಾದರೂ ನೇಣಿಗೇರಿಸಬೇಕು. ನಾನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಣಿಗೇರಿಸುವಂತೆ ಹೇಳುತ್ತಿಲ್ಲ. ಕುಂಭಮೇಳ ವಿರೋಧಿಸುವ ಯಾರಾದರೂ ಶಿಕ್ಷೆಗೆ ಒಳಗಾಗಬೇಕು. ಕುಂಭಮೇಳದಿಂದ ಬಡತನ ನಿರ್ಮೂಲನೆಯಾಗುತ್ತದೆಂದು ಯಾರಾದರೂ ಜಾಹೀರಾತು ಕೊಟ್ಟಿದ್ದಾರೆಯೇ ಎಂದು ಪ್ರಶ್ನಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News