ದಲಿತರ ಕಲ್ಯಾಣಕ್ಕೆ ಮೀಸಲಿಟ್ಟಿದ್ದ 39 ಸಾವಿರ ಕೋಟಿ ರೂ. ಗ್ಯಾರಂಟಿಗಳಿಗೆ ಬಳಕೆ; ಸಚಿವ ಮಹದೇವಪ್ಪ ರಾಜೀನಾಮೆಗೆ ಛಲವಾದಿ ನಾರಾಯಣಸ್ವಾಮಿ ಒತ್ತಾಯ
ಛಲವಾದಿ ನಾರಾಯಣಸ್ವಾಮಿ/ಡಾ.ಎಚ್.ಸಿ.ಮಹದೇವಪ್ಪ
ಬೆಳಗಾವಿ : ದಲಿತರ ಉದ್ಧಾರ ಮಾಡದೇ ವಂಚನೆಗೆ ಕಾರಣರಾದ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದ್ದಾರೆ.
ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಡಾ.ಮಹದೇವಪ್ಪ ದಲಿತ ವಿರೋಧಿ. ಇವರು ಕೇವಲ ತಮ್ಮ ಬಾಸ್‍ಗಳನ್ನು ಓಲೈಕೆ ಮಾಡಿಕೊಂಡು ಲೂಟಿ ಮಾಡಿ, ಇವರ ಕುಟುಂಬಗಳನ್ನು ಉದ್ಧಾರ ಮಾಡುತ್ತಿದ್ದಾರೆ. ಸಮುದಾಯಗಳ ಉದ್ಧಾರ ಇವರಿಂದ ಆಗುತ್ತಿಲ್ಲ. ಡಾ.ಅಂಬೇಡ್ಕರ್ ಅವರಿಗೆ ಅಪಮಾನ ಮಾಡುವ ರೀತಿಯಲ್ಲಿ ನೀವು ಇವತ್ತು ಅಧಿಕಾರ ನಡೆಸುತ್ತಿದ್ದೀರಿ ಎಂದು ಆರೋಪಿಸಿದರು.
ಅಂಬೇಡ್ಕರ್ ಅವರು ಬದುಕಿದ್ದರೆ ಇಂತಹವರನ್ನು ಎಲ್ಲಿಡಬೇಕೋ ಅಲ್ಲಿ ಇಡುತ್ತಿದ್ದರು. ಇವರು ದಲಿತರ ಸರ್ವನಾಶ ಮಾಡುವ ಕೆಲಸ ಮಾಡುತ್ತಿದ್ದಾರೆ. ಎಸ್ಸಿಪಿ-ಟಿಎಸ್ಪಿ ಹಣದ ಲೂಟಿ, ಜನರಿಗೆ ವಂಚನೆ ಕಾರ್ಯ ನಡೆಯುತ್ತಿದೆ. ಅವರಿಗೆ ಏನೂ ಸಿಗದಂತೆ ಮಾಡುತ್ತಿದ್ದಾರೆ. ಅಲ್ಲದೆ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯಲ್ಲೂ ಸಂಪೂರ್ಣ ತಾರತಮ್ಯ ಮಾಡಲಾಗಿದೆ. ಇದರಿಂದ ಯಾರಿಗೂ ನೆಮ್ಮದಿ ಇಲ್ಲದಂತೆ ಮಾಡಿದ್ದಾರೆ. ಈ ಕುರಿತ ಮಸೂದೆ ಬರಲಿದೆ ಎಂದು ಅವರು ತಿಳಿಸಿದರು.
ಎಸ್‍ಇಪಿ, ಟಿಎಸ್‍ಪಿ ಹಣವನ್ನು ಅನ್ಯಕಾರ್ಯಗಳಿಗೆ ಬಳಸಿ ಪರಿಶಿಷ್ಟ ಜಾತಿ, ವರ್ಗ-ದಲಿತ ಸಮುದಾಯಗಳಿಗೆ ಅನ್ಯಾಯ ಮಾಡಲಾಗುತ್ತಿದೆ. ಸರಕಾರದ ಈ ಕ್ರಮ ಖಂಡನೀಯ. ಈ ವರ್ಷದಲ್ಲಿ ಪರಿಶಿಷ್ಟ ಜಾತಿಗಳ ಶ್ರೇಯೋಭಿವೃದ್ಧಿಗೆ 42ಸಾವಿರ ರೂ. ಕೋಟಿ ಎಸ್ಸಿಪಿ, ಟಿಎಸ್ಪಿ ಮೊತ್ತವನ್ನು ಮೀಸಲಿಟ್ಟಿದ್ದೇವೆ. ಇದುವರೆಗೆ ಈ 3 ವರ್ಷಗಳಲ್ಲಿ 39 ಸಾವಿರ ಕೋಟಿ ರೂ. ಗ್ಯಾರಂಟಿಗಳಿಗೆ ಬಳಸಿದ್ದಾರೆ ಎಂದು ಅವರು ದೂರಿದರು.