ಚಾಮರಾಜನಗರದಲ್ಲಿ ಪರಿಶಿಷ್ಟ ಜಾತಿಯವರ ಮೇಲೆ ಹಲ್ಲೆ ಪ್ರಕರಣ: 26 ಮಂದಿಯ ಖುಲಾಸೆ ಆದೇಶ ಎತ್ತಿಹಿಡಿದ ಹೈಕೋರ್ಟ್
ಬೆಂಗಳೂರು: ಚಾಮರಾಜನಗರ ಜಿಲ್ಲೆಯಲ್ಲಿ 2009ರಲ್ಲಿ ನಡೆದಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಹಾಗೂ ಸಮುದಾಯ ಭವನದ ನಾಮಫಲಕವನ್ನು ತೆರವುಗೊಳಿಸಿ ಪರಿಶಿಷ್ಟ ಜಾತಿಯವರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ 26 ಮಂದಿಯನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿಹಿಡಿದಿದೆ.
ಆರೋಪಿಗಳನ್ನು ಖುಲಾಸೆಗೊಳಿಸಿ ಚಾಮರಾಜನಗರದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2015ರ ಆ.20ರಂದು ಹೊರಡಿಸಿದ್ದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ಏಕಸದಸ್ಯ ನ್ಯಾಯಪೀಠ, ವಿಚಾರಣಾ ನ್ಯಾಯಾಲಯದ ತೀರ್ಪಿನಲ್ಲಿ ಮಧ್ಯಪ್ರವೇಶಿಸುವಂಥ ಕಾನೂನಾತ್ಮಕ ಅಥವಾ ವಾಸ್ತವಿಕ ದೋಷ ಕಂಡುಬಂದಿಲ್ಲ ಎಂದು ಹೇಳಿದೆ.
ಹೈಕೋರ್ಟ್ ತೀರ್ಪು :
ಸಾಕ್ಷಿಗಳು, ದಾಖಲೆಗಳು ಹಾಗೂ ಪ್ರಕರಣದ ಭೌತಿಕ ಸಾಕ್ಷ್ಯಗಳನ್ನು ಮರುಪರಿಶೀಲಿಸಿದ ಬಳಿಕ ವಿಚಾರಣಾ ನ್ಯಾಯಾಲಯದ ನಿರ್ಣಯದಲ್ಲಿ ಲೋಪ ಕಂಡುಬಂದಿಲ್ಲ. ಘಟನೆ ನಡೆದ ಸಮಯದಲ್ಲಿ ವಿದ್ಯುತ್ ಇರಲಿಲ್ಲ ಎಂಬುದನ್ನು ಸಾಕ್ಷಿಗಳೇ ಒಪ್ಪಿಕೊಂಡಿದ್ದಾರೆ. ಅಂತಹ ಸಂದರ್ಭದಲ್ಲಿ ಆರೋಪಿಗಳನ್ನು ನಿಖರವಾಗಿ ಗುರುತಿಸಿದ ಕುರಿತು ಸ್ಪಷ್ಟ ಮತ್ತು ವಿಶ್ವಾಸಾರ್ಹ ವಿವರಣೆ ಇಲ್ಲ. ಪ್ರತ್ಯಕ್ಷ ದರ್ಶಿಗಳ ಹೇಳಿಕೆಗಳಲ್ಲಿನ ವೈರುಧ್ಯಗಳು ಸಾಮಾನ್ಯ ಸ್ವರೂಪದ್ದಾಗಿರದೆ, ಪ್ರಕರಣದ ಮೂಲವನ್ನೇ ಅನುಮಾನಿಸುವಂತಿವೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಅಭಿಪ್ರಾಯಪಟ್ಟಿದೆ.
ಕ್ರಿಮಿನಲ್ ಪ್ರಕರಣದಲ್ಲಿ ಆರೋಪಗಳನ್ನು ಸಂಶಯಾತೀತವಾಗಿ ಸಾಬೀತುಪಡಿಸುವ ಹೊಣೆ ಪ್ರಾಸಿಕ್ಯೂಷನ್ ಮೇಲಿರುತ್ತದೆ. ಈ ಪ್ರಕರಣದಲ್ಲಿ ಆ ಮಾನದಂಡ ತಲುಪುವಂಥ ದೃಢವಾದ ಸಾಕ್ಷ್ಯ ಒದಗಿಸಲಾಗಿಲ್ಲ. ಆದ್ದರಿಂದ, ಆರೋಪಿಗಳಿಗೆ ಅನುಮಾನದ ಲಾಭ ನೀಡಿರುವ ವಿಚಾರಣಾ ನ್ಯಾಯಾಲಯದ ಕ್ರಮ ಸರಿಯಾಗಿದೆ ಎಂದಿರುವ ಹೈಕೋರ್ಟ್ ರಾಜ್ಯ ಸರಕಾರದ ಮೇಲ್ಮನವಿ ವಜಾಗೊಳಿಸಿದೆ.
ಪ್ರಕರಣವೇನು? :
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ 2009ರ ಜೂನ್ 6ರಂದು ಒಟ್ಟು 29 ಮಂದಿ ಮಾರಕಾಸ್ತ್ರಗಳನ್ನು ಹಿಡಿದು ಕಾನೂನುಬಾಹಿರವಾಗಿ ಗುಂಪು ಕಟ್ಟಿಕೊಂಡು ಗಲಭೆ ನಡೆಸಿದ್ದರು ಎಂದು ಪೊಲೀಸರು ಆರೋಪಿಸಿದ್ದರು.
ಸಮುದಾಯ ಭವನದ ನಾಮಫಲಕ ಮತ್ತು ಅಲ್ಲಿದ್ದ ಅಂಬೇಡ್ಕರ್ ಭಾವಚಿತ್ರವನ್ನು ಆರೋಪಿಗಳು ಕೆಳಗೆ ಎಳೆದಿದ್ದರು. ಸಾರ್ವಜನಿಕವಾಗಿ ಪರಿಶಿಷ್ಟ ಜಾತಿಯವರ ಭಾವನೆಗಳಿಗೆ ಧಕ್ಕೆ ತಂದು ಅವಮಾನಿಸುವ ಉದ್ದೇಶದಿಂದ ಈ ಕೃತ್ಯ ನಡೆಸಲಾಗಿತ್ತು. ಈ ಸಂಬಂಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಅಕ್ರಮ ಕೂಟ, ಗಲಭೆ, ಮಾರಕಾಸ್ತ್ರಗಳೊಂದಿಗೆ ಗಲಭೆ, ಅಕ್ರಮ ತಡೆ, ಹಲ್ಲೆ, ಬೆದರಿಕೆ, ಆಸ್ತಿ ಹಾನಿ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಕ್ಕೆ ಸಂಬಂಧಿಸಿದ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(1)(ಎಕ್ಸ್) ಮತ್ತು 3(1)(ಎಕ್ಸ್‌ಐ) ಅಡಿಯಲ್ಲಿಯೂ ಆರೋಪ ಹೊರಿಸಲಾಗಿತ್ತು.
ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಪ್ರಾಸಿಕ್ಯೂಷನ್ ಒಟ್ಟು 13 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿತ್ತು. 21 ದಾಖಲೆಗಳು ಹಾಗೂ 25 ಭೌತಿಕ ವಸ್ತುಗಳನ್ನು ಸಾಕ್ಷ್ಯವಾಗಿ ಸಲ್ಲಿಸಿತ್ತು. ದೂರುದಾರ ಮತ್ತು ಗಾಯಾಳುಗಳು ಸೇರಿದಂತೆ ಮೊದಲ ಏಳು ಸಾಕ್ಷಿಗಳನ್ನು ಪ್ರತ್ಯಕ್ಷ ದರ್ಶಿಗಳೆಂದು ಪರಿಗಣಿಸಲಾಗಿತ್ತು. ವೈದ್ಯರು ಹಾಗೂ ತನಿಖಾಧಿಕಾರಿಗಳ ಸಾಕ್ಷ್ಯವನ್ನೂ ದಾಖಲಿಸಲಾಗಿತ್ತು. ಮೂಲ ಪ್ರಕರಣದಲ್ಲಿ29 ಆರೋಪಿಗಳಿದ್ದರು. ಅವರಲ್ಲಿ ಒಬ್ಬ ಆರೋಪಿ ವಿರುದ್ಧ ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗಿದ್ದು, ಮತ್ತೊಬ್ಬರು ಸಾವಿಗೀಡಾಗಿದ್ದ ಕಾರಣ ಅವರ ವಿರುದ್ಧದ ಪ್ರಕರಣ ಮುಕ್ತಾಯಗೊಂಡಿತ್ತು. ಉಳಿದ 26 ಮಂದಿಯನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಮೇಲ್ಮನವಿ ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಗಾಯಾಳು ಸಾಕ್ಷಿಗಳ ಹೇಳಿಕೆಗಳಿಗೆ ವಿಚಾರಣಾ ನ್ಯಾಯಾಲಯ ಸೂಕ್ತ ಮಹತ್ವ ನೀಡಿಲ್ಲ. ಎಸ್‌ಸಿ-ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸಾಮಾಜಿಕ ಉದ್ದೇಶ ಗಮನದಲ್ಲಿಟ್ಟುಕೊಂಡು ಸಾಕ್ಷ್ಯವನ್ನು ಪರಿಶೀಲಿಸಬೇಕಾಗಿತ್ತು ಎಂದು ವಾದ ಮಂಡಿಸಿದ್ದರು.
ಆರೋಪಿಗಳ ಪರ ವಕೀಲರು, ಸಾಕ್ಷ್ಯಗಳಲ್ಲಿರುವ ಗಂಭೀರ ವೈರುಧ್ಯಗಳನ್ನು ವಿಚಾರಣಾ ನ್ಯಾಯಾಲಯ ಸರಿಯಾಗಿಯೇ ಪರಿಗಣಿಸಿದೆ. ಕತ್ತಲಿನಲ್ಲಿ ಆರೋಪಿಗಳನ್ನು ಗುರುತಿಸಿರುವ ಬಗ್ಗೆ ಯಾವುದೇ ವಿಶ್ವಾಸಾರ್ಹ ವಿವರಣೆಯಿಲ್ಲ. ಆದ್ದರಿಂದ, ಆರೋಪಿಗಳಿಗೆ ಅನುಮಾನದ ಲಾಭ ನೀಡಿ ಖುಲಾಸೆಗೊಳಿಸಿರುವುದು ನ್ಯಾಯ ಸಮ್ಮತವಾಗಿದೆ ಎಂದು ವಾದಿಸಿದ್ದರು.