500 ಕೋಟಿಗೆ ತಲುಪಿದ ‘ಶಕ್ತಿ ಯೋಜನೆ’: ನಾಳೆ ವಿಶಿಷ್ಟ ಟಿಕೆಟ್ ವಿತರಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ಕೆಎಸ್ಸಾರ್ಟಿಸಿ, ಬಿಸಿಎಂಟಿ ಸೇರಿದಂತೆ ಸಾರಿಗೆ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ‘ಶಕ್ತಿ ಯೋಜನೆ’ಯಡಿ ಪ್ರಮಾಣ ಮಾಡಿದ ಮಹಿಳೆಯರ ಸಂಖ್ಯೆ 500 ಕೋಟಿಗೆ ತಲುಪಿದೆ. ಹೀಗಾಗಿ ಇಲ್ಲಿನ ಕುಮಾರಪಾರ್ಕ್ ಈಸ್ಟ್ ಗೇಟ್ ಬಳಿ ಇರುವ ಸಿಎಂ ಗೃಹ ಕಚೇರಿ ನಾಳೆ (ಜು.14) ‘ಶಕ್ತಿ’ ಯೋಜನೆಯ ವಿಶಿಷ್ಟ ಟಿಕೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವಿತರಣೆ ಮಾಡಲಿದ್ದಾರೆ.
ಕಾಂಗ್ರೆಸ್ ಸರಕಾರವು ರಾಜ್ಯದ ಎಲ್ಲ ಮಹಿಳೆಯರಿಗೆ ರಾಜ್ಯದೊಳಗೆ ಉಚಿತ ಬಸ್ ಪ್ರಯಾಣವನ್ನು ಒದಗಿಸುವ ನಿಟ್ಟಿನಲ್ಲಿ ‘ಶಕ್ತಿ’ ಯೋಜನೆಯನ್ನು 2023ರ ಜೂನ್ 11ರಿಂದ ಜಾರಿ ಮಾಡಿದೆ. ಈ ಯೋಜನೆಯಡಿಯಲ್ಲಿ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಕೆಕೆಆರ್‌ಟಿಸಿ ಮತ್ತು ಎನ್‍ಡಬ್ಲ್ಯೂಆರ್‌ಟಿಸಿ ಸಾರಿಗೆ ಬಸ್‍ಗಳಲ್ಲಿ ಮಹಿಳೆಯರು ರಾಜ್ಯದೊಳಗೆ ಉಚಿತವಾಗಿ ಪ್ರಯಾಣಿಸಬಹುದಾಗಿದೆ.
ರಾಜ್ಯದ ಸಾರಿಗೆ ನಿಗಮಗಳ ಬಸ್‍ಗಳಲ್ಲಿ ಪ್ರತಿನಿತ್ಯ ಸುಮಾರು ಒಂದು ಕೋಟಿಗೂ ಅಧಿಕ ಮಂದಿ ಪ್ರಯಾಣಿಸುತ್ತಾರೆ. ಅದರಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ 80 ಲಕ್ಷದವರೆಗೆ ಇದ್ದು, ‘ಶಕ್ತಿ ಯೋಜನೆ’ಯಡಿ ಪ್ರತಿನಿತ್ಯ 20 ಕೋಟಿ ರೂ.ಗಳಷ್ಟು ಉಚಿತ ಟಿಕೆಟ್ ಅನ್ನು ಮಹಿಳೆಯರಿಗೆ ವಿತರಿಸಲಾಗುತ್ತಿದೆ.
‘ಶಕ್ತಿ ಯೋಜನೆ’-500 ಕೋಟಿ: ಶಕ್ತಿ ಯೋಜನೆಯಡಿ ಪ್ರಯಾಣಿಸಿದವರ ಮಹಿಳಾ ಪ್ರಯಾಣಿಕರ ಸಂಖ್ಯೆ ಈಗಾಗಲೇ 500 ಕೋಟಿಗೆ ತಲುಪಿದ್ದು, ನಾಳೆ ನಡೆಯುವ ವಿಶಿಷ್ಟ ಟಿಕೆಟ್ ವಿತರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ‘ಶಕ್ತಿ ಯೋಜನೆ’ಯ 500ಕೋಟಿಯ ವಿಶೇಷ ಟಿಕೆಟ್ ಅನ್ನು ಸಾಂಕೇತಿಕವಾಗಿ ಮಹಿಳಾ ಪ್ರಯಾಣಿಕರಿಗೆ ವಿತರಣೆ ಮಾಡಲಿದ್ದಾರೆ.
‘ಮಹಿಳಾ ಸಬಲೀಕರಣದ ಮಹತ್ವಾಕಾಂಕ್ಷೆಯೊಂದಿಗೆ ಪ್ರಾರಂಭಿಸಲಾದ ಸಾರಿಗೆ ಬಸ್‍ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿರುವ ‘ಶಕ್ತಿ' ಯೋಜನೆಯ ಫಲಾನುಭವಿಗಳ ಸಂಖ್ಯೆ ಇಂದಿಗೆ 500ಕೋಟಿ ಗಡಿಯನ್ನು ದಾಟಿ ದಾಖಲೆ ಬರೆದಿದೆ. ಪ್ರಪಂಚಾದ್ಯಂತ ಹಾಗೂ ದೇಶದಾದ್ಯಂತ ಒಂದು ಸರಕಾರ ಹೆಣ್ಣುಮಕ್ಕಳಿಗೆ ಉಚಿತವಾಗಿ ಪ್ರಯಾಣಿಸುವ ಸೌಲಭ್ಯವನ್ನು ಕಲ್ಪಿಸಿರುವ ಏಕೈಕ ಸರಕಾರ ನಮ್ಮ ಕರ್ನಾಟಕ ಕಾಂಗ್ರೆಸ್ ಸರಕಾರ ಎಂಬ ಹೆಮ್ಮೆ, ಸಾರ್ಥಕತೆ ನಮಗಿದೆ’
-ಡಿ.ಕೆ.ಶಿವಕುಮಾರ್ ಉಪಮುಖ್ಯಮಂತ್ರಿ