‘ಬಿಹಾರ ವಿಧಾನಸಭೆ ಚುನಾವಣಾ ಕೆಲಸಕ್ಕೂ ಸಿದ್ಧವಾಗಿರಿ’; ಸಂಪುಟ ಸಚಿವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ?
ಸಂಪುಟ ಸಚಿವರಿಗೆ ‘ಔತಣಕೂಟ’
File Photo
ಬೆಂಗಳೂರು: ಬಿಹಾರ ರಾಜ್ಯದ ವಿಧಾನಸಭೆಗೆ ನವೆಂಬರ್ ನಲ್ಲಿ ಚುನಾವಣೆ ನಡೆಯಲಿದೆ. ಅಲ್ಲಿ ಚುನಾವಣಾ ಕೆಲಸಕ್ಕೂ ನೀವು ಸಿದ್ಧವಾಗಿರಬೇಕು ಎಂದು ಸಚಿವ ಸಂಪುಟ ಸಹೋದ್ಯೋಗಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚನೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಸೋಮವಾರ ತಮ್ಮ ಅಧಿಕೃತ ಸರಕಾರಿ ನಿವಾಸ ಕಾವೇರಿಯಲ್ಲಿ ಸಂಪುಟ ಸಚಿವರಿಗಾಗಿ ಆಯೋಜಿಸಲಾಗಿದ್ದ ‘ಔತಣಕೂಟ’ದಲ್ಲಿ ಸಚಿವರೊಂದಿಗೆ ಮಾತನಾಡಿದ ಅವರು, ಬಿಹಾರದಲ್ಲಿ ಚುನಾವಣಾ ಪ್ರಚಾರ ನಡೆಸುವ ಸಂಬಂಧ ಹೈಕಮಾಂಡ್‍ನಿಂದ ಯಾವಾಗ ಬೇಕಾದರೂ ಸೂಚನೆ ಬರಬಹುದು, ನೀವು ಸಿದ್ಧವಾಗಿರಿ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.
ಬಿಹಾರ ವಿಧಾನಸಭಾ ಚುನಾವಣೆಗೆ ನಿಮ್ಮೆಲ್ಲರ ಅಗತ್ಯ ಸಹಕಾರವೂ ಇರಲಿ. ಚುನಾವಣಾ ಕೆಲಸಕ್ಕೆ ಸಂಬಂಧಿಸಿದಂತೆ ಪಕ್ಷದ ಹೈಕಮಾಂಡ್ ನೀಡುವಂತಹ ಸಲಹೆ-ಸೂಚನೆಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೇ, ಬಿಹಾರ ರಾಜ್ಯದ ಚುನಾವಣೆ ಬಳಿಕ ರಾಜ್ಯದಲ್ಲಿ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಗೂ ಹೈಕಮಾಂಡ್ ನಿರ್ಧರಿಸಬಹುದು. ಆದುದರಿಂದ, ಎಲ್ಲ ಸಚಿವರು ಹೈಕಮಾಂಡ್ ಆದೇಶಕ್ಕೆ ಬದ್ಧರಾಗಿರಬೇಕು. ವಿರೋಧ ಪಕ್ಷಗಳಿಗೆ ಆಹಾರವಾಗುವ ರೀತಿಯಲ್ಲಿ ಯಾವುದೆ ಗೊಂದಲಗಳು ಸೃಷ್ಟಿಯಾಗಲು ಅವಕಾಶ ನೀಡಬಾರದು ಎಂದು ಹೇಳುವ ಮೂಲಕ ಸಂಪುಟ ಪುನರ್ ರಚನೆ ವೇಳೆ ಹಲವು ಸಚಿವರನ್ನು ಕೈಬಿಡುವ ಕುರಿತು ಸೂಕ್ಷ್ಮ ಸಂದೇಶವನ್ನು ಮುಖ್ಯಮಂತ್ರಿ ನೀಡಿರುವುದಾಗಿ ಹೇಳಲಾಗುತ್ತಿದೆ.
ತುರ್ತಾಗಿ ತೆರಳಿದ ಚಲುವರಾಯಸ್ವಾಮಿ: ಕೃಷಿ ಇಲಾಖೆಯ ಕಾರ್ಯಕ್ರಮದ ಹಿನ್ನೆಲೆಯಲ್ಲಿ ವಿದೇಶ ಪ್ರವಾಸಕ್ಕೆ ತೆರಳುತ್ತಿರುವುದರಿಂದ, ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಿ, ಅನುಮತಿ ಪಡೆದು ತೆರಳುತ್ತಿದ್ದೇನೆ. ಔತಣಕೂಟದಲ್ಲಿ ವಿಶೇಷ ಏನು ಚರ್ಚೆ ಇಲ್ಲ. ಸಾಮಾನ್ಯ ಚರ್ಚೆ ಅಷ್ಟೇ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿ, ತುರ್ತಾಗಿ ನಿರ್ಗಮಿಸಿದರು.
ಔತಣಕೂಟದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ್, ಡಾ.ಜಿ. ಪರಮೇಶ್ವರ್, ಶರಣಬಸಪ್ಪ ದರ್ಶನಾಪುರ್, ಕೆ.ಎಚ್.ಮುನಿಯಪ್ಪ, ಪ್ರಿಯಾಂಕ್ ಖರ್ಗೆ, ರಾಮಲಿಂಗಾ ರೆಡ್ಡಿ, ಎಂ.ಬಿ.ಪಾಟೀಲ್, ಡಿ.ಸುಧಾಕರ್, ಡಾ.ಎಂ.ಸಿ.ಸುಧಾಕರ್, ಬೈರತಿ ಸುರೇಶ್, ಸಂತೋಷ್ ಲಾಡ್, ಕೆ. ವೆಂಕಟೇಶ್, ರಹೀಂ ಖಾನ್, ಶಿವಾನಂದ ಪಾಟೀಲ್, ಆರ್.ಬಿ.ತಿಮ್ಮಾಪುರ್, ಕೆ.ಜೆ.ಜಾರ್ಜ್, ಈಶ್ವರ್ ಖಂಡ್ರೆ, ಡಾ.ಶರಣ ಪ್ರಕಾಶ್ ಪಾಟೀಲ್, ಮಧು ಬಂಗಾರಪ್ಪ, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.