ಸರಕಾರದ ಯೋಜನೆಗಳಿಗೆ ಜಮೀನು ಕೊಟ್ಟ ಮಾಲಕರ ತ್ಯಾಗ ಸ್ಮರಣೆಗೆ ‘ವಾಲ್ ಆಫ್ ಗ್ರಾಟಿಟ್ಯೂಡ್’ : ಸಿಎಂ ಡಿ.ಕೆ.ಶಿವಕುಮಾರ್
10.8 ಕಿ.ಮೀ. ಉದ್ದದ ಎಸ್.ಎಂ.ಕೃಷ್ಣ ದಶಪಥ ರಸ್ತೆಗೆ ಚಾಲನೆ
ಬೆಂಗಳೂರು : ಕೈಗಾರಿಕಾ ಪ್ರದೇಶ, ಶಾಲೆಗಳು, ಕೆರೆ, ರಸ್ತೆ ನಿರ್ಮಾಣ ಸೇರಿದಂತೆ ಸರಕಾರದ ವಿವಿಧ ಜನಪರ ಯೋಜನೆಗಳಿಗೆ ಯಾವುದೇ ತಕರಾರು ಮಾಡದೇ ಜಮೀನು ಬಿಟ್ಟುಕೊಟ್ಟುವ ಭೂ ಮಾಲಕರ ಹೆಸರನ್ನು ತ್ಯಾಗ ಸ್ಮರಣೆಗೆ ‘ವಾಲ್ ಆಫ್ ಗ್ರಾಟಿಟ್ಯೂಡ್’(ಕೃತಜ್ಞತಾ ಫಲಕ)ನಲ್ಲಿ ಸೇರಿಸಲು ಸರಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಘೋಷಿಸಿದ್ದಾರೆ.
ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣದ ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ), ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ನಗರದ ಚಲ್ಲಘಟ್ಟ ಮೆಟ್ರೋ ನಿಲ್ದಾಣ ಸಮೀಪದ ಕೆಂಪೇಗೌಡ ಬಡಾವಣೆಯಲ್ಲಿ ಶನಿವಾರ ಆಯೋಜಿಸಿದ್ದ 517ನೇ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚಲ್ಲಘಟ್ಟ ಮೆಟ್ರೋ ನಿಲ್ದಾಣದಿಂದ ಆರಂಭಗೊಳ್ಳುವ 10.8 ಕಿ.ಮೀ ಉದ್ದದ ಎಸ್.ಎಂ.ಕೃಷ್ಣ ದಶಪಥ ರಸ್ತೆಗೆ ಶನಿವಾರ ಅಧಿಕೃತವಾಗಿ ಚಾಲನೆ ನೀಡಿದ್ದೇವೆ. ಇನ್ನು ಮುಂದೆ ಈ ರಸ್ತೆಯು ಸಾರ್ವಜನಿಕರ ಬಳಕೆಗೆ ಮುಕ್ತವಾಗಿದೆ. ಈ ರಸ್ತೆ 10.8 ಕಿ.ಮೀ.ಗೆ ನಿಲ್ಲುವುದಿಲ್ಲ. ಇದು 123ಕಿ.ಮೀ. ರಸ್ತೆಯಾಗಿ ವಿಸ್ತರಣೆಯಾಗಲಿದೆ. ಈ ರಸ್ತೆಯಲ್ಲಿ ‘ವಾಲ್ ಆಫ್ ಗ್ರಾಟಿಟ್ಯೂಡ್’ ನಿರ್ಮಿಸಲು ಮುಂದಾಗಿದ್ದೇವೆ. ಆ ಮೂಲಕ ರಸ್ತೆಗಾಗಿ ಜಮೀನು ನೀಡಿದವರ ಹೆಸರನ್ನು ಶಾಶ್ವತವಾಗಿ ಉಳಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ನಾವು ಮಾಡಲಿದ್ದೇವೆ. ಇದನ್ನು ಎಲ್ಲ ಕಡೆಗಳಲ್ಲೂ ಮಾಡಲಾಗುವುದು ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲವಿದೆ. ಯಾವುದೇ ಜಮೀನು ಉಳುಮೆ ಮಾಡದೇ ಮಟ್ಟ ಮಾಡಲು ಸಾಧ್ಯವಿಲ್ಲ. ಭೂಮಿ ಕಳೆದುಕೊಂಡವರ ಬಗ್ಗೆ ನಮಗೆ ಕಾಳಜಿ ಇದೆ. ಕೆಂಗೇರಿ ಹಾಗೂ ಯಲಹಂಕ ಪಟ್ಟಣ ನಿರ್ಮಾಣ ಮಾಡಿದ್ದು ಹೇಗೆ? ಜಿ.ಪರಮೇಶ್ವರ್ ಅವರು ತುಮಕೂರಿನಲ್ಲಿ ಟೌನ್‍ಶಿಪ್ ಮಾಡಲು ಮುಂದಾಗಿದ್ದಾರೆ. ಅವು ಭೂಮಿಯಲ್ಲವೇ? ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ. ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯೆ ನಾವು ಏನು ಸಾಧನೆ ಮತ್ತು ತ್ಯಾಗ ಮಾಡುತ್ತೇವೆ ಎಂಬುದು ಮುಖ್ಯ. ಈ ದಶಪಥದ ರಸ್ತೆಗೆ ಭೂಮಿ ತ್ಯಾಗ ಮಾಡಿದ ಎಲ್ಲರಿಗೂ ಸಾಷ್ಟಾಂಗ ನಮನ ಸಲ್ಲಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಬೆಂಗಳೂರಿಗರು ಮೂರು `ಕೆ' ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ಬೆಂಗಳೂರು ಕಟ್ಟಿದ ನಾಡಪ್ರಭು ಕೆಂಪೇಗೌಡರು, ವಿಧಾನಸೌಧ ಕಟ್ಟಿದ ಕೆಂಗಲ್ ಹನುಮಂತಯ್ಯ ಹಾಗೂ ಬೆಂಗಳೂರನ್ನು ಅಂತರ್‍ರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಎಸ್.ಎಂ.ಕೃಷ್ಣ ಅವರು. ಶ್ರೀ ನಿರ್ಮಲಾನಂದ ಸ್ವಾಮಿ ಹಾಗೂ ಶ್ರೀ ನಂಜಾವಧೂತ ಸ್ವಾಮಿ ಸೇರಿ ಜೂ.27ರಂದು ಕೆಂಪೇಗೌಡ ಜಯಂತಿ ಆಚರಣೆ ಮಾಡಬೇಕು ಎಂದು ತೀರ್ಮಾನ ಮಾಡಿದ ಬಳಿಕ ನಾವು ಕೆಂಪೇಗೌಡ ಜಯಂತಿ ಆಚರಿಸಿಕೊಂಡು ಬರುತ್ತಿದ್ದೇವೆ. ಆ ಸಮಯದಲ್ಲಿ ನನಗೆ ಬೆಂಬಲವಾಗಿ ನಿಂತ ಎಚ್.ಎಂ.ರೇವಣ್ಣ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಇದೇ ವೇಳೆ `ಶಿಪಿಂಗ್ ದ ಗ್ಲೋಬಲ್ ಬೆಂಗಳೂರು' ಪುಸ್ತಕ ಬಿಡುಗಡೆ ಮಾಡಲಾಯಿತು. ಸಾಧಕರಿಗೆ ಕೆಂಪೇಗೌಡ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಶ್ವ ಒಕ್ಕಲಿಗ ಮಠದ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಸಚಿವರಾದ ಕೆ.ಜೆ.ಜಾರ್ಚ್, ಕೆ.ಎಚ್.ಮುನಿಯಪ್ಪ, ಬೈರತಿ ಸುರೇಶ್, ಕೃಷ್ಣಬೈರೇಗೌಡ, ಶಾಸಕರಾದ ಶಿವಣ್ಣ, ಮಂಕಾಳ ವೈದ್ಯ, ಬಾಲಕೃಷ್ಣ, ಟಿ.ಬಿ.ಜಯಚಂದ್ರ, ಎಂಎಲ್ಸಿ ಪುಟ್ಟಣ್ಣ, ನಾಗರಾಜ ಯಾದವ್, ಆರತಿ ಕೃಷ್ಣ, ರಾಮೋಜಿಗೌಡ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಅಧ್ಯಕ್ಷ ಎಚ್.ಎಂ.ರೇವಣ್ಣ ಸೇರಿ ಮತ್ತಿತರರು ಉಪಸ್ಥಿತರಿದ್ದರು.
ಅನೇಕ ಯೋಜನೆ: ಬೆಂಗಳೂರು ವಿವಿಯಲ್ಲಿ ಕೆಂಪೇಗೌಡ ಅಧ್ಯಯನ ಕೇಂದ್ರ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಸಚಿವ ಕೆ.ಎಚ್.ಮುನಿಯಪ್ಪ ಅವರ ವಿಧಾನಸಭಾ ಕ್ಷೇತ್ರದಲ್ಲಿ 9.5 ಎಕರೆ ಜಾಗ ನೀಡಿದ್ದು, ಅಲ್ಲಿ ಕೆಂಪೇಗೌಡ ಅಧ್ಯಯನ ಕೇಂದ್ರ ಸ್ಥಾಪಿಸಲು ತೀರ್ಮಾನಿಸಲಾಗಿದೆ. ಹುತ್ರಿದುರ್ಗದಲ್ಲಿ 10 ಕೋಟಿ ಮೊತ್ತದ ಅಭಿವೃದ್ಧಿ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ಕೆಂಪೇಗೌಡರ ಸಾಧನೆ, ದೂರದೃಷ್ಟಿ ತೀರ್ಮಾನ, ತ್ಯಾಗವನ್ನು ನಾವು ಸ್ಮರಿಸಬೇಕು. ಅವರ ಹೆಸರು ಶಾಶ್ವತವಾಗಿ ಉಳಿಯಲಿ ಎಂದು ನಾವು ಅನೇಕ ಯೋಜನೆ ರೂಪಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ವಿವರಿಸಿದರು.
ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ: ಈ ಹಿಂದೆ ಸರಕಾರ ಪೆರಿಫೆರಲ್ ರಿಂಗ್ ರಸ್ತೆ ಮಾಡಲು ತೀರ್ಮಾನಿಸಿತ್ತು. ಆದರೆ, ಕಾರ್ಯರೂಪಕ್ಕೆ ತಂದಿರಲಿಲ್ಲ. ನಾನು ಬೆಂಗಳೂರು ನಗರದ ಜವಾಬ್ದಾರಿ ವಹಿಸಿಕೊಂಡ ಬಳಿಕ ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂದು ಹೇಳಿ ಈ ಯೋಜನೆ ಜಾರಿಗೆ ಮುಂದಾಗಿದ್ದೇವೆ. 123 ಕಿ.ಮೀ. ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ರಸ್ತೆ ನಿರ್ಮಾಣ ಪ್ರಕ್ರಿಯೆ ಚಾಲನೆಯಲ್ಲಿದ್ದು, ಟೆಂಡರ್ ಕರೆಯಲಾಗಿದೆ. ಎಲೆಕ್ಟ್ರಾನಿಕ್ ಸಿಟಿಯಿಂದ ಮೈಸೂರು ರಸ್ತೆಗೆ ಸೇರುವ ಹಂತಕ್ಕೂ ಅಂತಿಮ ಅಧಿಸೂಚನೆ ಸದ್ಯದಲ್ಲೇ ಹೊರಡಿಸುತ್ತೇವೆ. ಈ ರಸ್ತೆ ಇಲ್ಲವಾದರೆ ಬೆಂಗಳೂರು ಉಳಿಯಲು ಸಾಧ್ಯವಿಲ್ಲ. ಹೀಗಾಗಿ, ನಾನು ದಿಟ್ಟ ತೀರ್ಮಾನ ಮಾಡಲಿದ್ದೇನೆ. ಭೂಮಿ ಕಳೆದುಕೊಳ್ಳುವ ಮಾಲಕರಿಗೆ ಶೇ.35ರಷ್ಟು ವಾಣಿಜ್ಯ ಭೂಮಿ, ಶೇ.40ರಷ್ಟು ವಸತಿ ಪ್ರದೇಶ ಭೂಮಿ ಮತ್ತು ಟಿಡಿಆರ್ ನೀಡಲು ಸರಕಾರ ಮುಂದಾಗಿದೆ. ಭೂ ಮಾಲಕರು ತಮಗೆ ಯಾವ ಆಯ್ಕೆ ಬೇಕೋ ಅದನ್ನು ತೆಗೆದುಕೊಳ್ಳಬಹುದು ಎಂದು ಸಿಎಂ ವಿವರಿಸಿದರು.
ದಶಪಥ ರಸ್ತೆಯ ಅನುಕೂಲಗಳೇನು?: ಎಸ್.ಎಂ. ಕೃಷ್ಣ ದಶಪಥ ರಸ್ತೆಯು ಟೋಲ್‍ರಹಿತ ಸಂಚಾರ ವ್ಯವಸ್ಥೆಯನ್ನು ಒದಗಿಸುವುದರ ಜತೆಗೆ ನೈಸ್ ರಸ್ತೆಗೆ ಪರ್ಯಾಯ ಮಾರ್ಗವಾಗಿದ್ದು, ಪಶ್ಚಿಮ ಹಾಗೂ ಉತ್ತರ ಬೆಂಗಳೂರಿನ ಸಂಪರ್ಕ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತದೆ. ಈ ರಸ್ತೆಯು ಮಾಗಡಿ ರಸ್ತೆಯ ಕಡಬಗೆರೆ ಕ್ರಾಸ್‍ನಿಂದ ಮೈಸೂರು ರಸ್ತೆ ಚಲ್ಲಘಟ್ಟ ಮೆಟ್ರೋ ನಿಲ್ದಾಣದವರೆಗೆ ಸಂಪರ್ಕ ಕಲ್ಪಿಸಿರುವುದಲ್ಲದೆ, ನಾಡಪ್ರಭು ಕೆಂಪೇಗೌಡ ಬಡಾವಣೆಯ ಎಲ್ಲ 9 ಬ್ಲಾಕ್‍ಗಳನ್ನು ಸಂಪರ್ಕಿಸುತ್ತದೆ.
ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಸಂಪರ್ಕಿಸುವ ವಾಹನಗಳು ಪ್ರಸ್ತುತ ನೈಸ್ ರಸ್ತೆ ಅಥವಾ ನಾಯಂಡಹಳ್ಳಿ-ಸುಮನಹಳ್ಳಿ ಜಂಕ್ಷ ನ್ ಮೂಲಕ ಚಲಿಸಬೇಕಾಗಿದ್ದು, ಈ ಮಾರ್ಗದ ವಾಹನ ಸಂಚಾರ ಅವಧಿ 60 ನಿಮಿಷಗಳಷ್ಟಿತ್ತು. ಆದರೀಗ ಎಸ್.ಎಂ. ಕೃಷ್ಣ ರಸ್ತೆಯು ಸಂಚಾರ ಅವಧಿಯನ್ನು 1 ಗಂಟೆಯಿಂದ ಕೇವಲ 15 ನಿಮಿಷಗಳಿಗೆ ತಗ್ಗಿಸಲಿದೆ.
ಈ ರಸ್ತೆ ಕಂಬೀಪುರ, ಕೊಮ್ಮಘಟ್ಟ ಹಾಗೂ ಕೆಂಚನಪುರ ಪ್ರದೇಶಗಳಿಗೂ ಸುಗಮ ಸಂಪರ್ಕ ಒದಗಿಸಲಿದೆ. ಜತೆಗೆ ಮಾಚೋಹಳ್ಳಿ, ಕೊಡಿಗೇಹಳ್ಳಿ, ಕನ್ನಳ್ಳಿ, ಕೆಂಚನಪುರ, ಸೂಲಿಕೆರೆ, ಕೊಮ್ಮಘಟ್ಟ ಹಾಗೂ ಚಲ್ಲಘಟ್ಟ ಗ್ರಾಮಗಳಿಗೆ ಹೊಂದಿಕೊಂಡಂತಿದ್ದು, ಈ ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಗೆ ಸಹಕಾರಿಯಾಗಲಿದೆ. ಮೈಸೂರು, ಮಾಗಡಿ, ಹಾಸನ, ಕುಣಿಗಲ್, ಮಂಡ್ಯ ಹಾಗೂ ರಾಮನಗರ ಭಾಗಗಳಿಂದ ಬೆಂಗಳೂರಿಗೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ ಹಣ ಮತ್ತು ಸಮಯ ಉಳಿತಾಯ ಮಾಡುವ ಪ್ರಮುಖ ಮಾರ್ಗವಾಗಲಿದೆ. ಒಟ್ಟಾರೆ ಯಾವುದೇ ಟೋಲ್ ಶುಲ್ಕವಿಲ್ಲದೆ ಸಾರ್ವಜನಿಕರಿಗೆ ಮುಕ್ತವಾಗಿರುವ ಎಸ್.ಎಂ. ಕೃಷ್ಣ ದಶಪಥ ರಸ್ತೆ ದಕ್ಷಿಣ ಮತ್ತು ಪಶ್ಚಿಮ ಬೆಂಗಳೂರು ನಡುವಿನ ಸಂಪರ್ಕ ಬೆಸೆಯುವಲ್ಲಿ ಹೊಸ ಅಧ್ಯಾಯ ಆರಂಭಿಸಲಿದ್ದು, ಸಂಚಾರ ದಟ್ಟಣೆ ನಿವಾರಣೆ ಹಾಗೂ ನಗರಾಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿದೆ.
‘ಹೆಬ್ಬಾಳದ ಬಳಿ ಕಡಿಮೆ ಅಂತರದ ಟನಲ್ ರಸ್ತೆ ನಿರ್ಮಾಣ ಕೆಲಸವನ್ನು ಕೆಲವೇ ದಿನಗಳಲ್ಲಿ ಆರಂಭ ಮಾಡಲಾಗುವುದು. ಬೆಂಗಳೂರು ವಿಶ್ವದ ನಗರ. ಇಲ್ಲಿನ ಸಂಚಾರ ದಟ್ಟಣೆ ನಿವಾರಣೆಗೆ ದೊಡ್ಡ ಟನಲ್ ರಸ್ತೆ ನಿರ್ಮಾಣ ಸೇರಿ ಅನೇಕ ಯೋಜನೆ ರೂಪಿಸಲಾಗಿದೆ. ಜತೆಗೆ, ಅಧಿಕಾರಿಗಳ ತಂಡ ರಚಿಸಲಾಗುವುದು. ನನ್ನ ಮೇಲೆ ಇಟ್ಟಿರುವ ಅಪಾರ ವಿಶ್ವಾಸ ಉಳಿಸಿಕೊಂಡು ಹೋಗುತ್ತೇನೆ. ನನಗೆ ಇತಿಹಾಸ ಓದುವುದು, ಸ್ಮರಿಸುವುದಕ್ಕಿಂತ, ಇತಿಹಾಸ ಸೃಷ್ಟಿಸಲು ಇಷ್ಟ.’
-ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿ.