ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಜಿಲ್ಲಾಧಿಕಾರಿಗಳೇ ಹೊಣೆ : ಸಿಎಂ ಡಿ.ಕೆ.ಶಿವಕುಮಾರ್

Update: 2026-07-25 20:55 IST

ಬೆಂಗಳೂರು/ ಚಿತ್ರದುರ್ಗ : ರಾಜ್ಯದಲ್ಲಿ ಯಾವುದೇ ರೀತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಕಂಡುಬಂದಲ್ಲಿ ಜಿಲ್ಲಾಧಿಕಾರಿಗಳನ್ನೆ ಹೊಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಚಿತ್ರದುರ್ಗದಲ್ಲಿ ನಡೆದ ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನೇಮಕಾತಿ ಪರ್ವ ನಡೆಯುತ್ತಿದ್ದು, ಇದರ ಭಾಗವಾಗಿ ಸುಮಾರು 70 ಸಾವಿರಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ನೇಮಕಾತಿ ಪರೀಕ್ಷೆ ನಡೆಯುವ ಕಡೆ ಕಡ್ಡಾಯವಾಗಿ ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಪ್ರಶ್ನೆ ಪತ್ರಿಕೆಗೆ ಹೆಚ್ಚಿನ ಭದ್ರತೆ ಒದಗಿಸಬೇಕು ಎಂದರು.

ಕೇಂದ್ರದ ಬಳಿ ನಿಯೋಗ : ಬರ ಪರಿಸ್ಥಿತಿ ಬಗ್ಗೆ ಕೇಂದ್ರ ಸರಕಾರದ ಬಳಿ ಚರ್ಚಿಸಲು ಸರ್ವಪಕ್ಷ ನಿಯೋಗ ಕರೆದುಕೊಂಡು ಹೋಗಲಾಗುವುದು. ಈ ಸಂಬಂಧ ಹೊಸದಿಲ್ಲಿಯಲ್ಲಿ ಸೋಮವಾರ ಸಂಸದರ ಸಭೆ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಸಾಧ್ಯವಿಲ್ಲ ಎಂದು ಕಾವೇರಿ ನೀರು ನಿರ್ವಾಹಣಾ ಸಮಿತಿ ಮುಂದೆ ಹೇಳಲಾಗಿದೆ. ಅವರಿಗೂ ಪರಿಸ್ಥಿತಿಯ ಬಗ್ಗೆ ಅರಿವಿದೆ. ಪ್ರಧಾನಿ ಮೋದಿ ಅವರು ಎಲ್ ನೀನೋ ಪರಿಣಾಮದ ಬಗ್ಗೆ ಮಾತನಾಡಿದ್ದಾರೆ. ಈ ಎಚ್ಚರಿಕೆಯನ್ನು ನಾವು ಕಡೆಗಣಿಸಬಾರದು. ನಾನು ಪ್ರಧಾನಿಯವರಿಗೆ ಬರ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದೇನೆ. ಬರದ ಬಗ್ಗೆ ವಸ್ತುಸ್ಥಿತಿ ತಿಳಿಸಲು ಪ್ರಧಾನಿಯವರ ಬಳಿಗೆ ಶೀಘ್ರ ನಿಯೋಗ ಹೋಗಲಿದೆ ಎಂದೂ ಅವರು ಉಲ್ಲೇಖಿಸಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News