ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ಸಚಿವರು ತೆರಳಬೇಕು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು/ಚಿತ್ರದುರ್ಗ: ರಾಜ್ಯದ ಪ್ರತಿಯೊಂದು ವಿಧಾನಸಭಾ ಕ್ಷೇತ್ರಕ್ಕೂ ಸಚಿವರು ಪ್ರವಾಸ ಮಾಡಬೇಕು. ಯಾವುದೇ ಪಕ್ಷದ ಶಾಸಕರಿದ್ದರೂ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜನರ ಅಹವಾಲು ಸ್ವೀಕರಿಸಿ, ಪರಿಹರಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.
ಶನಿವಾರ ಚಿತ್ರದುರ್ಗದಲ್ಲಿ ನಡೆದ ಬೆಂಗಳೂರು ಪ್ರಾದೇಶಿಕ ವಿಭಾಗ ಮಟ್ಟದ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸರಕಾರ ಹಾಗೂ ಆಡಳಿತಕ್ಕೆ ಹೊಸ ರೂಪ ನೀಡಲು ನಾವು ಮುಂದಾಗಿದ್ದೇವೆ. ನಾವೆಲ್ಲರೂ ಕರ್ನಾಟಕ ರಾಜ್ಯದಲ್ಲಿ ಒಂದು ತಂಡದಂತೆ ಕೆಲಸ ಮಾಡಬೇಕಿದೆ ಎಂದು ಸಲಹೆ ನೀಡಿದರು.
‘ಪ್ರಜಾಸೇವಾ ಇಲಾಖೆ’ ಸ್ಥಾಪನೆ ಹೊಸ ಆಲೋಚನೆ ಆಗಿದೆ. ಶಾಸಕರು, ಅಧಿಕಾರಿಗಳು ಈ ಇಲಾಖೆ ಮೂಲಕ ಜನರ ಮಧ್ಯೆ ಸರಕಾರ ಇರುವಂತೆ ನೋಡಿಕೊಳ್ಳಬೇಕು. ಜನರ ಸಮಸ್ಯೆಗಳನ್ನು ಗಮನಿಸಿ ಬಗೆಹರಿಸಬೇಕು. ಜನರ ಬಳಿಗೆ ಸರಕಾರವೇ ಹೋಗಬೇಕು. ಪ್ರಜಾಸೇವಾ ಇಲಾಖೆ ಇರುವುದೇ ಜನರಿಗಾಗಿ ಎಂದು ತಿಳಿಸಬೇಕಾಗಿದೆ. ಮೊದಲನೆ ಮತ್ತು ಮೂರನೆ ಶನಿವಾರ ಪ್ರತಿ ವಿಧಾನಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳ ನೇತೃತ್ವದಲ್ಲಿ ಜನರ ಸಮಸ್ಯೆ ಆಲಿಸಬೇಕು, ಬಗೆಹರಿಸಬೇಕು. ಇದೇ ಪ್ರಜಾಸೇವಾ ಇಲಾಖೆಯ ಧ್ಯೇಯೋದ್ದೇಶ ಎಂದು ಅವರು ಹೇಳಿದರು.
ಜಿಲ್ಲಾಡಳಿತವು ಗ್ರಾಮೀಣ ಭಾಗದ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿ ಕುಡಿಯುವ ನೀರು ಪೂರೈಕೆಗೆ 1 ಕೋಟಿವರೆಗೆ ಖರ್ಚು ಮಾಡಬಹುದು ಎಂದು ಬೆಳಗಾವಿ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಹೊಸದಾಗಿ ಕೊಳವೆ ಬಾವಿ ಕೊರೆದರೆ, ದುರಸ್ತಿಗೊಳಿಸಿದರೆ ಪ್ರತಿಯೊಂದರ ಮಾಹಿತಿ ದಾಖಲಿಸಬೇಕು. ಮುಖ್ಯವಾಗಿ ಜಿಪಿಎಸ್ ಮಾಹಿತಿ ದಾಖಲಿಸಬೇಕು. ವಿದ್ಯುತ್ ಸಂಪರ್ಕ ಸೇರಿದಂತೆ ಪ್ರತಿ ತೀರ್ಮಾನದ ಬಗ್ಗೆಯೂ ಮಾಹಿತಿಗಳು ಪಾರದರ್ಶಕವಾಗಿರಬೇಕು. ಈ ಬಗ್ಗೆ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಸಲ್ಲದು ಎಂದು ಎಚ್ಚರಿಕೆ ನೀಡಿದರು.
ಈಗಾಗಲೇ ರೈತರಿಗೆ ನಾನು ಮನವಿ ಮಾಡಿದ್ದೇನೆ. ಯಾವುದೇ ಕಾರಣಕ್ಕೂ ಮುಂದಿನ ಮಳೆ, ಅಣೆಕಟ್ಟು ನೀರು ನೆಚ್ಚಿಕೊಂಡು ಬೆಳೆ ಹಾಕಬಾರದು. ಬೆಳೆ ಹಾಕಿದರೆ ನಷ್ಟಕ್ಕೆ ನೀವೇ ಹೊಣೆಯಾಗಬೇಕಾಗುತ್ತದೆ. ಬೆಳೆ ವಿಮೆ ಕುರಿತು ಅಧಿಕಾರಿಗಳು ಕೆಲಸ ಮಾಡಬೇಕು ಎಂದ ಅವರು, ಆಲಮಟ್ಟಿ ಹೊರತಾಗಿ ಬೇರೆ ಯಾವ ಜಲಾಶಯದಲ್ಲೂ ನೀರಿನ ಪರಿಸ್ಥಿತಿ ಉತ್ತಮವಾಗಿಲ್ಲ. ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಲು ಸಾಧ್ಯವಿಲ್ಲ ಎಂದು ಸಮಿತಿ ಮುಂದೆ ಹೇಳಲಾಗಿದೆ. ಅವರಿಗೂ ಪರಿಸ್ಥಿತಿಯ ಬಗ್ಗೆ ಅರಿವಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸಚಿವರಾದ ರಾಮಲಿಂಗಾರೆಡ್ಡಿ, ಈಶ್ವರ ಖಂಡ್ರೆ, ಸರಕಾರದ ಹೊಸದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಪ್ರಮುಖರಿದ್ದರು.