ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಬೆಂಗಳೂರಿನಲ್ಲಿ ವಂದೇ ಮಾತರಂ, ರಾಷ್ಟ್ರಗೀತೆ ಹಾಡಿ ‘Gen Z’ ಸಂಭ್ರಮ
ಬೆಂಗಳೂರು : ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಭಾರೀ ಪ್ರತಿಭಟನೆಗೆ ಬಹುದೊಡ್ಡ ಗೆಲುವು ಸಿಕ್ಕಿದ್ದು, ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೆ ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಶನಿವಾರ ಪ್ರತಿಭಟನಾನಿರತ ಸಾವಿರಾರು ಯುವಜನರು ವಂದೇ ಮಾತರಂ, ರಾಷ್ಟ್ರಗೀತೆ ಹಾಡಿ ಸಂಭ್ರಮಾಚರಣೆ ನಡೆಸಿದರು.
ಹೊಸದಿಲ್ಲಿಯ ಜಂತರ್ ಮಂತರ್ ಮಾದರಿಯಲ್ಲೇ ಫ್ರೀಡಂ ಪಾರ್ಕ್‍ನಲ್ಲಿಯೂ ಯುವಜನತೆ ಆರು ದಿನಗಳಿಂದ ನಿರಂತರವಾಗಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ, ನೀಟ್ ಹಗರಣವನ್ನು ಖಂಡಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದರು. ಶನಿವಾರ ಮಧ್ಯಾಹ್ನದ ವೇಳೆಗೆ ಪ್ರಧಾನ್ ರಾಜೀನಾಮೆ ನೀಡುತ್ತಿದ್ದಂತೆ ಪ್ರತಿಭಟನೆಯಲ್ಲಿದ್ದ ಯುವಜನರ ‘ಮೆಲೋಡಿ ಚಾಕೊಲೇಟ್’ ಹಂಚುವ ಮೂಲಕ ಸಂವಿಧಾನಕ್ಕೆ ಸಿಕ್ಕ ಗೆಲುವು ಎಂದು ಸಂಭ್ರಮಪಟ್ಟರು.
ಸಂಭ್ರಮಾಚರಣೆ ವೇಳೆ ಮಾತನಾಡಿದ ಹಲವು ಯುವ ಮುಖಂಡರು, ‘ನಮ್ಮ ಹೋರಾಟ ಅಂಬೇಡ್ಕರ್, ಗಾಂಧಿ ಹಾದಿಯಲ್ಲಿತ್ತು. ಪ್ರಜಾಪ್ರಭುತ್ವದಡಿ ಹೋರಾಟಗಳಿಗೆ ಎಂದಿಗೂ ಜಯ ಸಿಕ್ಕೇ ಸಿಗುತ್ತದೆ ಎನ್ನುವ ನಂಬಿಕೆ ಇತ್ತು. ಈಗ ನಾವು ಗೆದ್ದಿದ್ದೇವೆ. ಆದರೆ, ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳುವುದಿಲ್ಲ, ದೇಶದಲ್ಲಿ ಶಿಕ್ಷಣ ವ್ಯವಸ್ಥೆ ಭ್ರಷ್ಟಾಚಾರದಿಂದ ಕೂಡಿದೆ. ಈ ಭ್ರಷ್ಟ ವ್ಯವಸ್ಥೆ ಬದಲಾಗಬೇಕು. ಭ್ರಷ್ಟ ಸರಕಾರಗಳ ವಿರುದ್ಧದ ನಮ್ಮ ಹೋರಾಟ ನಿರಂತರವಾಗಿರಲಿದೆ’ ಎಂದರು.
ಸಂಭ್ರಮಾಚರಣೆಯಲ್ಲಿ ಅಂಬೇಡ್ಕರ್, ಗಾಂಧಿ, ಭಗತ್ ಸಿಂಗ್, ಸುಭಾಷ್ ಚಂದ್ರ ಭೋಸ್, ಸಾವಿತ್ರಿ ಬಾಯಿಫುಲೆ ಭಾವಚಿತ್ರಗಳು ರಾರಾಜಿಸಿದವು. ಈ ವೇಳೆಯಲ್ಲಿ ಎಸ್‍ಎಫ್‍ಐ, ಎಐಡಿಎಸ್‍ಒ, ಎಐಎಸ್‍ಎ, ಎಐಎಸ್‍ಎಫ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.