ಕುಮಾರಸ್ವಾಮಿ ಅವರು ಪ್ರಧಾನಿ, ಕೇಂದ್ರ ಜಲ ಶಕ್ತಿ ಸಚಿವರಿಂದ ಮಾಹಿತಿ ಪಡೆದು ನದಿ ಜೋಡಣೆ ಯೋಜನೆ ಬಗ್ಗೆ ಮಾತನಾಡಲಿ : ಸಿಎಂ ಡಿ.ಕೆ.ಶಿವಕುಮಾರ್
"ಯಾವ ಸಮಯದಲ್ಲಿ ಯಾರಿಗೆ ಯಾವ ಉತ್ತರ ಕೊಡಬೇಕೋ ಆಗ ಕೊಡುತ್ತೇನೆ"
Update: 2026-07-11 16:07 IST
ಬೆಂಗಳೂರು: “ಕುಮಾರಸ್ವಾಮಿ ಅವರು ಮೊದಲು ಪ್ರಧಾನಮಂತ್ರಿ ಹಾಗೂ ಕೇಂದ್ರದ ಜಲಶಕ್ತಿ ಸಚಿವರನ್ನು ಭೇಟಿ ಮಾಡಲಿ. ಈ ಯೋಜನೆ ಬಗ್ಗೆ ಮಾಹಿತಿ ಪಡೆದು ನಂತರ ಮಾತನಾಡಲಿ” ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ತಿರುಗೇಟು ನೀಡಿದರು.
ವಿಧಾನಸೌಧ ಆವರಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.
ನದಿ ಜೋಡಣೆ ವಿಚಾರ ರಿಯಲ್ ಎಸ್ಟೇಟ್ ವ್ಯವಹಾರವಲ್ಲ, ನೀರಿನ ಪ್ರಮಾಣ ನಿಗದಿಯಾಗಬೇಕು ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಯಾವ ಸಮಯದಲ್ಲಿ ಯಾರಿಗೆ ಉತ್ತರ ಕೊಡಬೇಕೋ ಕೊಡುತ್ತೇನೆ" ಎಂದು ತಿಳಿಸಿದರು.
"ಕರ್ನಾಟಕವನ್ನು ಡ್ರಗ್ಸ್ ಮುಕ್ತ ರಾಜ್ಯವನ್ನಾಗಿ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ. ಯುವಕರಲ್ಲಿ ಹಾಗೂ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ಎಲ್ಲರೂ ಪೊಲೀಸರಿಗೆ ಸಹಕಾರ ನೀಡಬೇಕು. ಹೀಗಾಗಿ ಪೊಲೀಸ್ ಇಲಾಖೆಯಿಂದ 'ಬೇಡ ಬ್ರೋ' ಅಭಿಯಾನ ನಡೆಸುತ್ತಿದೆ" ಎಂದರು.