×
Ad

ಶಾಶ್ವತ ನಿವಾಸಿ ಪ್ರಮಾಣ ಪತ್ರ ವಿತರಣೆಗೆ ಮುಂದಾಗಿರುವ ರಾಜ್ಯ ಸರಕಾರದ ವಿರುದ್ಧ ರಾಜ್ಯಪಾಲರಿಗೆ ದೂರು: ವಿಜಯೇಂದ್ರ

Update: 2026-07-11 20:13 IST

ಮೈಸೂರು : ಸಂವಿಧಾನ ಬಾಹಿರವಾಗಿ ಶಾಶ್ವತ ನಿವಾಸಿ ಪ್ರಮಾಣ ಪತ್ರ ವಿತರಣೆಗೆ ಮುಂದಾಗಿರುವ ರಾಜ್ಯ ಸರಕಾರದ ವಿರುದ್ಧ ಮುಂದಿನ ವಾರ ರಾಜ್ಯಪಾಲರಿಗೆ ದೂರು ಕೊಡುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಕಾಯಕ ಸಮುದಾಯಗಳ ಒಕ್ಕೂಟ ಮೈಸೂರು ವಿಭಾಗದ ವತಿಯಿಂದ ಜೆ.ಕೆ. ಮೈದಾನದಲ್ಲಿ ಶನಿವಾರ ಆಯೋಜಿಸಿದ್ದ ನೂತನ ವಿಧಾನ ಪರಿಷತ್ ಸದಸ್ಯ ಆರ್.ರಘು ಕೌಟಿಲ್ಯ ಅಭಿನಂದನೆ ಹಾಗೂ ಬಿಜೆಪಿ ಕೃತಜ್ಞತಾ ಸಮರ್ಪಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಎಸ್‌ಐಆರ್ ಪ್ರಕ್ರಿಯೆಯಲ್ಲಿ ನುಸುಳುಕೋರರು, ಅಕ್ರಮ ವಲಸಿಗರಿಗೆ ಶಾಶ್ವತ ನಿವೇಶನ ಪತ್ರ ಕೊಡಲು ಕಂದಾಯ ನಿರೀಕ್ಷಕರಿಗೆ ಅಧಿಕಾರ ಕೊಟ್ಟಿದ್ದಾರೆ. ಇದು ದೇಶದ ರಕ್ಷಣೆ ಮತ್ತು ಭದ್ರತೆಗೆ ಅಪಾಯಕಾರಿಯಾಗಿದೆ ಎಂದರು.

ಅಹಿಂದ ಹೆಸರಿನಲ್ಲಿ ಸಮಾಜದ ಮಧ್ಯೆ ವಿಷ ಬೀಜ ಬಿತ್ತುವ, ಸಮಾಜ ಒಡೆಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಬಸವಣ್ಣ ಜಪ, ಕೈಯಲ್ಲಿ ಶಿವಲಿಂಗ ಹಿಡಿದು ಕಾಂಗ್ರೆಸ್ ಸರಕಾರ ಕಪಟ ನಾಟಕ ಮಾಡುತ್ತಿದೆ. ಇದನ್ನು ಯಾರೂ ನಂಬಬಾರದು ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯದಲ್ಲಿ 6 ದಶಕಗಳ ಆಡಳಿತ ನಡೆಸಿದ ಕಾಂಗ್ರೆಸ್, ಕಾಯಕ ಸಮಾಜಗಳ ಕಣ್ಣೀರು ಒರೆಸಿದೆಯೇ? ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ಕುತಂತ್ರದಿಂದ ಸೋಲಿಸಿದ್ದು ಯಾರು? ಅಂಬೇಡ್ಕರ್ ಅವರನ್ನು ಈ ದೇಶದ ಪ್ರಧಾನಿ ಮಾಡಬೇಕಿತ್ತು. ಅವರ ಹೆಸರನ್ನು ಮತಕ್ಕಾಗಿ ಕಾಂಗ್ರೆಸ್ ಬಳಸುತ್ತಿದೆ. ಕಾಂಗ್ರೆಸ್‌ಗೆ ಮಹಾತ್ಮ ಗಾಂಧಿ, ದೇವರಾಜ ಅರಸು, ಅಂಬೇಡ್ಕರ್ ಹೆಸರೇಳುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಸರ್ವರಿಗೂ ಸಮಪಾಲು, ಸಾಮಾಜಿಕ ನ್ಯಾಯ ತತ್ವದಡಿಯಲ್ಲಿ ಮೂರನೇ ಬಾರಿ ಪ್ರಧಾನಿಯಾಗಿರುವ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್‌ಗೆ ಸಹಿಸಲು ಆಗುತ್ತಿಲ್ಲ. ರಾಜ್ಯದಲ್ಲಿ ಎಸ್‌ಸಿ, ಎಸ್‌ಟಿಗೆ ಮೀಸಲಿಟ್ಟ ಹಣವನ್ನು ಲೂಟಿ ಮಾಡಲಾಯಿತು. ವಾಲ್ಮೀಕಿ ಸಮುದಾಯದ ಹಣವನ್ನು ನೆರೆ ರಾಜ್ಯದ ಚುನಾವಣೆಗೆ ಬಳಸಲಾಯಿತು ಎಂದು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News