ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಖಾಯಂ ನಿವಾಸ ಪ್ರಮಾಣಪತ್ರ ನೀಡುತ್ತೇವೆ, ಅದರಲ್ಲಿ ತಪ್ಪೇನಿದೆ? : ಜಿ.ಪರಮೇಶ್ವರ್
"ಎಲ್ಲದರಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ"
ಬೆಂಗಳೂರು : ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯಲ್ಲಿ 13 ದಾಖಲೆಯನ್ನು ಕೇಳುತ್ತಾರೆ. ಅದರಲ್ಲಿ ‘ನೀವು ಸ್ವಂತ ಮನೆಯಲ್ಲಿ ಇದ್ದೀರಾ?’ ಎಂಬ ಪ್ರಶ್ನೆಯೂ ಇದೆ. ಹಾಗಾಗಿ ಖಾಯಂ ನಿವಾಸ ಪ್ರಮಾಣ ಪತ್ರವನ್ನು ನೀಡಲು ಕ್ರಮ ವಹಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಶನಿವಾರ ಸದಾಶಿವ ನಗರದ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈವರೆಗೆ ಕೇಂದ್ರ ಸರಕಾರ ಯಾವುದೇ ಪ್ರಮಾಣ ಪತ್ರಗಳನ್ನು ನೀಡಿಲ್ಲ. ಜಾತಿ ಪ್ರಮಾಣ ಪತ್ರವನ್ನು ರಾಜ್ಯ ಸರಕಾರವೇ ನೀಡಿದೆ. ನಾವು ಆಧಾರ್ ಕಾರ್ಡ್ ಮತ್ತು ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಖಾಯಂ ನಿವಾಸ ಪ್ರಮಾಣಪತ್ರ ನೀಡುತ್ತೇವೆ. ಅದರಲ್ಲಿ ತಪ್ಪೇನಿದೆ? ಎಲ್ಲದರಲ್ಲೂ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಸುಮಾರು 50 ರಿಂದ 60 ಸಾವಿರ ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣ ಪತ್ರ ಇಲ್ಲದೆ ಸಿಇಟಿ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ಸಮಸ್ಯೆಯಾಗಿದೆ. ಈಗ ನಾವು ಖಾಯಂ ಪ್ರಮಾಣ ಪತ್ರದಲ್ಲಿ ಜಾತಿಯನ್ನು ಉಲ್ಲೇಖಿಸಿದರೆ ಪರೀಕ್ಷೆ ಬರೆಯುವ ಮಕ್ಕಳಿಗೆ ಅನುಕೂಲವಾಗುತ್ತದೆ. ಬಿಜೆಪಿಗರು ಎಲ್ಲವನ್ನೂ ರಾಜಕೀಯ ದೃಷ್ಟಿಯಿಂದ ನೋಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಬಾಂಗ್ಲಾ ದೇಶದವರಿಗೂ ಖಾಯಂ ನಿವೇಶನ ಪತ್ರ ನೀಡಲಾಗುತ್ತಿದೆ ಎಂಬ ಬಿಜೆಪಿ ಆರೋಪ ಸತ್ಯಕ್ಕೆ ದೂರವಾದದ್ದು. ಬಾಂಗ್ಲಾದೇಶದ ಪ್ರಶ್ನೆಯೇ ಇಲ್ಲಿ ಬರುವುದಿಲ್ಲ. ಇದು ರಾಷ್ಟ್ರೀಯ ಸಮಸ್ಯೆ. ರಾಜ್ಯ ಸರಕಾರ ಬಾಂಗ್ಲಾ ದೇಶವರಿಗೆ ಪೌರತ್ವ ಕೊಡಲು ಆಗುತ್ತದೆಯೇ?. ಒಂದು ವೇಳೆ ಬಾಂಗ್ಲಾ ದೇಶದವರು ನಮ್ಮ ದೇಶದವರನ್ನು ಮದುವೆಯಾದರೆ, ಆಗ ಅದಕ್ಕೊಂದು ನಿಬಂಧನೆಯಿದೆ. ಅದು ಬಿಟ್ಟು ಬಾಂಗ್ಲಾ ದೇಶದವರಿಗಾಗಲಿ ಅಥವಾ ಬೇರೆ ದೇಶದವರಿಗಾಗಲಿ ಪೌರತ್ವವನ್ನು ರಾಜ್ಯ ಸರಕಾರ ಕೊಡಲು ಆಗುವುದಿಲ್ಲ ಎಂದು ಪರಮೇಶ್ವರ್ ಸ್ವಷ್ಟಪಡಿಸಿದರು.
ಎಸ್‍ಐಆರ್ ಪ್ರಕ್ರಿಯೆ ನಡೆಯುತ್ತಿರುವಾಗಲೇ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಚುನಾವಣೆ ಮಾಡಬಹುದು. ಆದರೆ, ಚುನಾವಣಾ ಆಯೋಗ ಅದಕ್ಕೆ ಅನುಮತಿ ನೀಡುವುದಿಲ್ಲ. ವಿಶೇಷ ಅನುಮತಿ ನೀಡಿದರೆ ನಾವು ಚುನಾವಣೆಯನ್ನು ಮಾಡಲು ಸಿದ್ಧರಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಇ-ಪೌತಿ, ಹಕ್ಕುಪತ್ರಗಳ ಕೆಲಸಗಳಿಗೆ ವೇಗ ನೀಡಲು ನಾಳೆ(ಜು.12) ರಾಜ್ಯದ ಎಲ್ಲ ಉಪ ನೋಂದಣಿ ಕಚೇರಿಗಳು ಕಾರ್ಯನಿರ್ವಹಿಸುವಂತೆ ಆದೇಶಿಸಲಾಗಿದೆ. ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಹೈಕಮಾಂಡ್ ತೀರ್ಮಾನಿಸಲಿದೆ ಎಂದು ಅವರು ತಿಳಿಸಿದರು.
‘ಕಂಬಳ’ ಸರಕಾರ ತೀರ್ಮಾನಿಸಲಿದೆ: ದಸರಾ ಉತಸ್ವ ನಮ್ಮ ಸಂಸ್ಕೃತಿ, ಪರಂಪರೆ ಇತಿಹಾಸವನ್ನು ಸಾರುವ ಹಬ್ಬ. ಇಂದಿನ ಮಕ್ಕಳಿಗೆ ಇತಿಹಾಸದ ಬಗ್ಗೆ ಅರಿವು ಮೂಡಿಸುವುದು ನಮ್ಮ ಕರ್ತವ್ಯ. ನಮ್ಮ ಮುಂದಿನ ಪೀಳಿಗೆಗೆ ನಮ್ಮ ನಾಡಿನ ಪರಂಪರೆಯನ್ನು ತಿಳಿಸಿಕೊಡುವ ಕೆಲಸ ನಮ್ಮಿಂದ ಆಗಬೇಕು. ನಮ್ಮ ಸಂಸ್ಕೃತಿಯ ಆಚರಣೆ ಎಲ್ಲರಿಗೂ ತಿಳಿಯಬೇಕು. ಹಾಗಾಗಿ ದಸರಾವನ್ನು ಸರಳವಾಗಿ ಆಚರಿಸುವುದು ಬೇಡ, ವಿಜೃಂಭಣೆಯಿಂದ ಆಚರಿಸೋಣ ಎಂದು ಸಲಹೆ ನೀಡಲಾಗಿದೆ.
ಮೈಸೂರು ದಸರಾ ಉತ್ಸವದಲ್ಲಿ ‘ಕಂಬಳ’ ನಡೆಸುವುದರ ಬಗ್ಗೆ ಎಲ್ಲರೂ ಅವರವರ ಅಭಿಪ್ರಾಯಗಳನ್ನು ಹೇಳಿಕೊಂಡಿದ್ದಾರೆ. ಈ ಬಗ್ಗೆ ಸರಕಾರ ಚರ್ಚಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಪರಮೇಶ್ವರ್ ತಿಳಿಸಿದರು.