ಮತದಾರರ ನೋಂದಣಿ ಸಹಾಯ ಕೇಂದ್ರಗಳನ್ನು ಹೆಚ್ಚಿಸುವಂತೆ ಚುನಾವಣಾ ಆಯೋಗಕ್ಕೆ MLC ರಮೇಶ್ ಬಾಬು ಆಗ್ರಹ
ರಮೇಶ್ ಬಾಬು| Photo Credit :facebook/Ramesh Babu
ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ಸಂದರ್ಭದಲ್ಲಿ ಯಾವುದೇ ಅರ್ಹ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಖಚಿತಪಡಿಸಿಕೊಳ್ಳಲು, ರಾಜ್ಯಾದ್ಯಂತ ತಕ್ಷಣವೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರ ಸಹಾಯ ಕೇಂದ್ರಗಳನ್ನು ಸ್ಥಾಪಿಸುವಂತೆ ಕರ್ನಾಟಕ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು ಆಗ್ರಹಿಸಿದ್ದಾರೆ.
ಈ ಬಗ್ಗೆ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿರುವ ಅವರು, ಮತದಾರರಿಗೆ ಮಾಹಿತಿ ನಮೂನೆಗಳನ್ನು ಪಡೆಯಲು, ಭರ್ತಿ ಮಾಡಲು ಮತ್ತು ಸಲ್ಲಿಸಲು ಸಹಾಯ ಮಾಡಲು ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗಳ ಕಚೇರಿಯು ಸಾಕಷ್ಟು ಪ್ರಮಾಣದಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ವಿಫಲವಾಗಿದೆ ಎಂದು ತಿಳಿಸಿದ್ದಾರೆ.
ಬೂತ್ ಮಟ್ಟದ ಅಧಿಕಾರಿಗಳು ಮನೆ-ಮನೆಗೆ ತೆರಳಿ ನಮೂನೆಗಳನ್ನು ವಿತರಿಸುವ ಪ್ರಕ್ರಿಯೆಯು ಜೂನ್ 30 ರಿಂದ ಪ್ರಾರಂಭವಾಗಿದ್ದು, ಜುಲೈ 29 ರವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ಆದರೆ ವಿತರಣೆ ಆರಂಭವಾಗಿ 15 ದಿನಗಳು ಕಳೆದರೂ ಶೇಕಡಾ 50 ರಷ್ಟು ಅರ್ಹ ಮನೆಗಳಿಗೆ ಇನ್ನೂ ನಮೂನೆಗಳು ತಲುಪಿಲ್ಲ. ಈ ನಿಧಾನಗತಿಯ ವಿತರಣೆಯಿಂದಾಗಿ ನಿಜವಾದ ಮತದಾರರು ಮತದಾರರ ಪಟ್ಟಿಯಿಂದ ಅನ್ಯಾಯವಾಗಿ ಹೊರಗುಳಿಯುವ ಸಾಧ್ಯತೆಯಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಪ್ರತಿ ಪೋಲಿಂಗ್ ಬೂತ್ ವ್ಯಾಪ್ತಿಯಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲು ಮತ್ತು ಮತದಾರರಿಗೆ ಅಗತ್ಯ ಫಾರ್ಮ್ಗಳನ್ನು ಭರ್ತಿ ಮಾಡಿ ಸಲ್ಲಿಸಲು ಸಹಾಯ ಮಾಡಲು ತರಬೇತಿ ಪಡೆದ ಅಧಿಕಾರಿಗಳನ್ನು ನಿಯೋಜಿಸುವಂತೆ ಕರ್ನಾಟಕ ಮುಖ್ಯ ಚುನಾವಣಾ ಅಧಿಕಾರಿಗೆ ನಿರ್ದೇಶನ ನೀಡಬೇಕೆಂದು ಅವರು ಭಾರತೀಯ ಚುನಾವಣಾ ಆಯೋಗವನ್ನು ಒತ್ತಾಯಿಸಿದ್ದಾರೆ.
ಎಲ್ಲಾ ಅರ್ಹ ಕುಟುಂಬಗಳಿಗೆ ನಮೂನೆಗಳು ತಲುಪುವವರೆಗೆ ಫಾರ್ಮ್ಗಳನ್ನು ಸಲ್ಲಿಸುವ ಗಡುವನ್ನು ವಿಸ್ತರಿಸಬೇಕು. ಫಾರ್ಮ್ ತಲುಪದಿರುವ ಕಾರಣ ಅಥವಾ ಸೂಕ್ತ ಸಹಾಯ ಸಿಗದ ಕಾರಣ ಯಾರಾದರೂ ನಮೂನೆಗಳನ್ನು ಸಲ್ಲಿಸದಿದ್ದರೆ, ಕೇವಲ ಅದೇ ಕಾರಣಕ್ಕಾಗಿ ಯಾವುದೇ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕದಂತೆ ಆಯೋಗವು ಕ್ರಮ ಕೈಗೊಳ್ಳಬೇಕು ಎಂದು ಅವರು ವಿನಂತಿಸಿದ್ದಾರೆ.
ರಾಜ್ಯ ಮಟ್ಟದ ಮೇಲ್ವಿಚಾರಣೆಯ ವ್ಯವಸ್ಥೆ, ಜಿಲ್ಲಾ ಮಟ್ಟದ ಕುಂದುಕೊರತೆ ನಿವಾರಣಾ ಕೇಂದ್ರಗಳು ಹಾಗೂ ಸಹಾಯವಾಣಿಗಳನ್ನು ಆರಂಭಿಸಬೇಕು. ಫಾರ್ಮ್ ವಿತರಣೆ ಮತ್ತು ಸಂಗ್ರಹಣೆಯ ಜಿಲ್ಲಾವಾರು ದೈನಂದಿನ ಅಂಕಿ-ಅಂಶಗಳನ್ನು ಪ್ರಕಟಿಸಬೇಕು ಮತ್ತು ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ಗ್ರಾಮೀಣ ಮತದಾರರಿಗೆ ವಿಶೇಷ ನೆರವು ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಕರ್ನಾಟಕದಲ್ಲಿ 37,464 ಮತದಾರರ ಸಹಾಯ ಕೇಂದ್ರಗಳು ಮತ್ತು 11,856 ಬಿಎಲ್ಒ ಸಹಾಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಸಿಇಒ ಕಚೇರಿಯ ಮಾಹಿತಿಯನ್ನು ಪ್ರಶ್ನಿಸಿರುವ ಅವರು, ಈ ಅಂಕಿ-ಅಂಶಗಳು ವಾಸ್ತವ ಸ್ಥಿತಿಯನ್ನು ಬಿಂಬಿಸುತ್ತಿಲ್ಲ ಮತ್ತು ಸಾಕಷ್ಟು ಕೇಂದ್ರಗಳಿಲ್ಲದ ಕಾರಣ ಮತದಾರರು ತೊಂದರೆ ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯಲ್ಲಿನ ಆಡಳಿತಾತ್ಮಕ ಲೋಪದೋಷಗಳಿಂದಾಗಿ ಯಾವುದೇ ನಿಜವಾದ ಮತದಾರರು ಪಟ್ಟಿಯಿಂದ ಹೊರಗುಳಿಯದಂತೆ ಚುನಾವಣಾ ಆಯೋಗವು ಸಂವಿಧಾನದ 324 ನೇ ವಿಧಿಯಡಿ ಇರುವ ತನ್ನ ಅಧಿಕಾರವನ್ನು ಚಲಾಯಿಸುವ ಮೂಲಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ತಮ್ಮ ಪತ್ರದಲ್ಲಿ ಆಗ್ರಹಿಸಿದ್ದಾರೆ.