ದೇವದಾಸಿಯರ ಪುನರ್ವಸತಿ ಸೇರಿದಂತೆ ಅವರ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ಕ್ರಮ : ಸಿಎಂ ಸಿದ್ದರಾಮಯ್ಯ
Update: 2025-08-25 19:23 IST
ಬೆಂಗಳೂರು, ಆ.25 : ರಾಜ್ಯಾದ್ಯಂತ ದೇವದಾಸಿಯರ ಪುನರ್ವಸತಿ ಸೇರಿದಂತೆ ಅವರ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 2025-26ನೆ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಾಗೃತ ಹಾಗೂ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಾಜ್ಯಾದ್ಯಂತ ದೇವದಾಸಿಯರ ಸಮೀಕ್ಷೆ ಕಾರ್ಯವನ್ನು ಈಗಾಗಲೇ ಆರಂಭಿಸಲಾಗಿದ್ದು, ಸಮೀಕ್ಷೆ ಪೂರ್ಣಗೊಂಡ ಬಳಿಕ ದೇವದಾಸಿಯರ ಪುನರ್ವಸತಿಗೆ ಹಾಗೂ ಈ ಪಿಡುಗನ್ನು ಸಂಪೂರ್ಣವಾಗಿ ತೊಲಗಿಸಲು ಯೋಜನೆ ಜಾರಿಗೊಳಿಸಲಾಗುವುದು ಎಂದು ಅವರು ಹೇಳಿದರು.
ಅದೇ ರೀತಿ, ದೇವದಾಸಿಯರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ವಿಶೇಷ ಅನುದಾನ ನೀಡುವ ಬಗ್ಗೆಯೂ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.