1 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಬೆಲೆ ಬಾಳುವ ಕಬ್ಬಿಣದ ಅದಿರು ಲೂಟಿ ತನಿಖೆಗೆ ಎಸ್‍ಐಟಿ ರಚಿಸುವಂತೆ ಕೋರಿ ಸಿಎಂಗೆ ಪತ್ರ
ಬೆಂಗಳೂರು, ಸೆ.12 : ಅಕ್ರಮ ಗಣಿಗಾರಿಕೆ ವಿಚಾರದ ಕುರಿತು ಅಧ್ಯಯನ ನಡೆಸಲು ಕಾನೂನು ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ರಚಿಸಲಾಗಿದ್ದ ಸಂಪುಟ ಉಪ ಸಮಿತಿ ಸರಕಾರಕ್ಕೆ ಸಲ್ಲಿಸಿದ ವರದಿಯಂತೆ 1 ಲಕ್ಷ ಕೋಟಿ ರೂ.ಗೂ ಅಧಿಕ ಬೆಲೆ ಬಾಳುವ ಕಬ್ಬಿಣದ ಅದಿರನ್ನು ಲೂಟಿ ಮಾಡಿರುವುದು ತಿಳಿದು ಬಂದಿದೆ. ಆ ಪ್ರಕರಣವನ್ನು ತನಿಖೆ ಮಾಡಲು ವಿಶೇಷ ತನಿಖಾ ತಂಡ ರಚಿಸಿಸಬೆಕು ಎಂದು ಕೋರಿ ಕಾಂಗ್ರೆಸ್ ಮುಖಂಡರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಮುಖಂಡರಾದ ವಿ.ಎಸ್. ಉಗ್ರಪ್ಪ, ಎಚ್.ಎಂ.ರೇವಣ್ಣ, ಡಾ.ಸಿ.ಎಸ್.ದ್ವಾರಕಾನಾಥ್, ವಿ.ಆರ್.ಸುದರ್ಶನ್, ಡಾ.ಎಲ್.ಹನುಮಂತಯ್ಯ, ಮೋಹನ್ ಕೊಂಡಜ್ಜಿ ಅವರು ಪತ್ರ ಬರೆದಿದ್ದು, ಎಚ್.ಕೆ.ಪಾಟೀಲ್ ನೇತೃತ್ವದ ಸಂಪುಟ ಉಪ ಸಮಿತಿ ವರದಿಯನ್ನು ರಾಜ್ಯ ಸರಕಾರ ಸ್ವೀಕರಿಸಿದ್ದರೂ, ಯಾವುದೇ ಕ್ರಮವಹಿಸಿಲ್ಲ. ಆದ್ದರಿಂದ ಕ್ರಮಹಿಸಬೇಕು ಎಂದು ಆಗ್ರಹಿಸಿದ್ದಾರೆ.
ಕೆಲವು ವ್ಯಕ್ತಿ, ಸಂಘ-ಸಂಸ್ಥೆಗಳು, ರಾಜಕಾರಣಿಗಳು ಮತ್ತು ಅಧಿಕಾರಿಗಳ ಸಹಕಾರದಿಂದ ಅಕ್ರಮವಾಗಿ 1ಲಕ್ಷ ಕೋಟಿ ರೂ. ಬೆಲೆಬಾಳುವ ಕಬ್ಬಿಣದ ಅದಿರನ್ನು ಲೂಟಿ ಮಾಡಿ, ಸರಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ್ದಾರೆ. ಆದ್ದರಿಂದ ಕಾನೂನು ಸಚಿವ ಎಚ್.ಕೆ.ಪಾಟೀಲ್ ನೇತೃತ್ವದ ಸಂಪುಟ ಉಪ ಸಮಿತಿ ನೀಡಿರುವ ವರದಿಯಂತೆ ತಪ್ಪಿತಸ್ಥರು ಯಾವುದೇ ಪಕ್ಷದವರಾಗಿದ್ದರೂ, ಯಾವುದೇ ಅಧಿಕಾರಿಗಳಾಗಿರಲಿ, ಯಾವುದೇ ಸಂಘ-ಸಂಸ್ಥೆಯವರಾಗಿರಲಿ ಅಂತವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.