×
Ad

ಕನ್ನಡ ಹೋರಾಟಗಾರರ ಮೇಲಿನ ಮೊಕದ್ದಮೆ ವಾಪಸ್‌ : ಸಿಎಂ ಸಿದ್ದರಾಮಯ್ಯ ಘೋಷಣೆ

ಜನರಾಜ್ಯೋತ್ಸವ-2025 ಕಾರ್ಯಕ್ರಮ

Update: 2025-12-28 22:08 IST

ಬೆಂಗಳೂರು : ಕನ್ನಡ ಪರ ಹೋರಾಟಗಾರರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮೊಕದ್ದಮೆಗಳನ್ನು ರಾಜ್ಯ ಸರಕಾರ ಹಿಂಪಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ.

ರವಿವಾರ ನಗರದ ಅರಮನೆ ಮೈದಾನದಲ್ಲಿ ಕನ್ನಡ ಚಳುವಳಿಗಾರರ ಸಮಿತಿ ಆಯೋಜಿಸಿದ್ದ ಜನರಾಜ್ಯೋತ್ಸವ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಯ ವಿಚಾರವಾಗಿ ನಡೆದ ಹೋರಾಟ ಸಂದರ್ಭದಲ್ಲಿ ಅನೇಕರ ಮೇಲೆ ವಿವಿಧ ಪೊಲೀಸ್ ಠಾಣೆಗಳಲ್ಲಿ ಮೊಕದ್ದಮೆಗಳು ದಾಖಲಾಗಿವೆ.ಈ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ನೇತೃತ್ವದಲ್ಲಿ ಉಪ ಸಮಿತಿ ರಚನೆ ಮಾಡಿದ್ದು, ಅವರೊಂದಿಗೆ ಚರ್ಚೆ ನಡೆಸಿದ ಬಳಿಕ ಮೊಕದ್ದಮೆ ಹಿಂಪಡೆಯುತ್ತೇವೆ ಎಂದು ತಿಳಿಸಿದರು.

ಅದೇ ರೀತಿ, ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿ ಸೇರಿದಂತೆ ಕನ್ನಡ ಅಭಿವೃದ್ಧಿ ವಿಚಾರವಾಗಿ ಚರ್ಚೆ ನಡೆಸಲು ಶೀಘ್ರದಲ್ಲಿಯೇ ‘ಕನ್ನಡ ತಜ್ಞರ ಸಭೆ’ ನಡೆಸಲಾಗುವುದು. ದ್ವಿಭಾಷಾ ನೀತಿ ಜಾರಿ ಆಗಲೇಬೇಕು ಎನ್ನುವುದು ನನ್ನದು ವೈಯಕ್ತಿಯ ಅಭಿಪ್ರಾಯವಾಗಿದೆ.ಆದರೆ, ಸರಕಾರದ ಮಟ್ಟದಲ್ಲಿ ಎಲ್ಲರೊಂದಿಗೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಕರ್ನಾಟಕವು ಕನ್ನಡಮಯವಾಗಬೇಕು ಎಂಬುದು ನನ್ನ ಆಶಯ. ಅದಕ್ಕಾಗಿ ಕನ್ನಡ ಭಾಷೆ ಪರ, ಕನ್ನಡ ಅಭಿವೃದ್ಧಿಯ ಪರ ನಮ್ಮ ಸರಕಾರ ಕೆಲಸ ಮಾಡುತ್ತಿದೆ ಎಂದ ಅವರು, ನಾನು ಕನ್ನಡ ಕಾವಲು ಸಮಿತಿಯ ಮೊದಲ ಅಧ್ಯಕ್ಷನಾಗಿದ್ದೆ. ಕನ್ನಡ ರಾಜ್ಯ ಭಾಷೆಯಾಗಬೇಕು. ಆಡಳಿತ ಭಾಷೆಯಾಗಬೇಕು. ಕರ್ನಾಟಕದಲ್ಲಿ ಸಾರ್ವಭೌಮ ಭಾಷೆಯಾಗಬೇಕು ಎಂದು ಆಗಲೇ ತೀರ್ಮಾನ ಮಾಡಿದ್ದೆ. ಅಂದಿನ ಕಾವಲು ಸಮಿತಿಯೇ ಇಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರವಾಗಿದೆ ಎಂದು ತಿಳಿಸಿದರು.

ಕನ್ನಡ ಆಡಳಿತ ಭಾಷೆ ಎಂದು ಘೋಷಿಸಿದ್ದರೂ ಈಗಲೂ ಅನೇಕ ಸಚಿವರು, ಅಧಿಕಾರಿಗಳು ಇಂಗ್ಲಿಷ್‌ ಭಾಷೆಯಲ್ಲಿ ಟಿಪ್ಪಣಿ ಬರೆಯುತ್ತಿರುವುದನ್ನು, ಕಡತ ಮಂಡಿಸುವುದನ್ನು ಕೈ ಬಿಟ್ಟು, ಕನ್ನಡವನ್ನು ಬಳಕೆ ಮಾಡಬೇಕು, ಜತೆಗೆ ರಾಜ್ಯದಲ್ಲಿ ಕನ್ನಡ ಬಳಸುವುದು ಅನಿವಾರ್ಯ ಎಂಬಂತಹ ಕನ್ನಡದ ವಾತಾವರಣವನ್ನು ಎಲ್ಲರೂ ಸೃಷ್ಟಿಸಬೇಕು ಎಂದು ಅವರು ಕರೆ ನೀಡಿದರು.

ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ಭಾಷೆ ಕಲಿಯದಿದ್ದರೆ ಬದುಕು ನಡೆಸುವುದು ಸುಲಭವಲ್ಲ, ಆದರೆ ಕರ್ನಾಟಕದಲ್ಲಿ ಬೇರೆ ಭಾಷಿಕರು ಕನ್ನಡ ಕಲಿಯದಿದ್ದರೂ ಇಲ್ಲಿ ಜೀವನ ನಡೆಸುತ್ತಾರೆ. ಹಾಗಾಗಿ ಕರುನಾಡಿನಲ್ಲಿ ಕನ್ನಡ ಬಳಕೆ ಮಾತನಾಡುವುದು ಅನಿವಾರ್ಯ ಎಂಬಂತಹ ವಾತಾವರಣವನ್ನು ನಾವೆಲ್ಲ ಸೃಷ್ಟಿಸಬೇಕು. ಬೇರೆ ಭಾಷಿಕರು ತಮ್ಮ ಭಾಷೆಯಲ್ಲೇ ಮಾತನಾಡುತ್ತಾರೆ, ಕನ್ನಡವನ್ನು ಕಲಿಯಲು ಮುಂದಾಗುವುದೇ ಇಲ್ಲ. ಆದರೆ ನಾವು ಅವರಿಗೆ ಕನ್ನಡ ಕಲಿಸುವ ಬದಲು ಅವರ ಭಾಷೆಯಲ್ಲೇ ಮಾತನಾಡುತ್ತಿದ್ದೇವೆ. ಇದಕ್ಕೆ ನಮ್ಮಲ್ಲಿರುವ ಅತಿಯಾದ ಉದಾರತೆ ಸಹ ಕಾರಣವಾಗಿದೆ ಎಂದು ಸಿದ್ದರಾಮಯ್ಯ ನುಡಿದರು.

ಕಾರ್ಯಕ್ರಮದಲ್ಲಿ ಪ್ರಾ ಸ್ತವಿಕವಾಗಿ ಕನ್ನಡ ಪರ ಹೋರಾಟಗಾರ ಭೈರಪ್ಪ ಹರೀಶ್ ಕುಮಾರ್ ಮಾತನಾಡಿದರು. ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ, ಹಿರಿಯ ಸಾಹಿತಿಗಳಾದ ಬರಗೂರು ರಾಮಚಂದ್ರಪ್ಪ, ಮೂಡ್ನಾಕೂಡು ಚಿನ್ನಸ್ವಾಮಿ, ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ, ಕನ್ನಡ ಪರ ಹೋರಾಟಗಾರರಾದ ಸಾ.ರಾ.ಗೋವಿಂದು, ಪ್ರವೀಣ್ ಕುಮಾರ್ ಶೆಟ್ಟಿ, ದಾ.ಪಿ.ಆಂಜನಪ್ಪ, ಭೀಮಾಶಂಕರ್ ಪಾಟೀಲ್, ರೂಪೇಶ್ ರಾಜಣ್ಣ ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News