Hunsuru | ಹಾಡಹಗಲೇ ಗನ್ ತೋರಿಸಿ ಚಿನ್ನದಂಗಡಿಯಲ್ಲಿ ಚಿನ್ನಾಭರಣ ದೋಚಿ ಪರಾರಿಯಾದ ಮುಸುಕುದಾರಿಗಳು!
ಸಾಂದರ್ಭಿಕ ಚಿತ್ರ | PC : gemini AI
ಮೈಸೂರು : ಹಾಡಹಗಲೇ ಗನ್ ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಹುಣಸೂರು ಟೌನ್ ನಲ್ಲಿ ರವಿವಾರ ಮಧ್ಯಾಹ್ನ ನಡೆದಿದೆ.
ಹುಣಸೂರು ಟೌನ್ ಬಸ್ ನಿಲ್ದಾಣದ ಬಳಿ ಇರುವ ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ ಶೋರಂನಲ್ಲಿ ಈ ಘಟನೆ ನಡೆದಿದ್ದು, ಸುಮಾರು 5 ಕೆ.ಜಿ. ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ರವಿವಾರ ಮಧ್ಯಾಹ್ನ 1.30 ರ ಸಮಯದಲ್ಲಿ 5 ಜನ ಮುಸುಕುದಾರಿಗಳ ತಂಡ ಚಿನ್ನದ ಅಂಗಡಿಯ ಒಳಗೆ ನುಗ್ಗಿದೆ. ಏಕಾಏಕಿ ಒಬ್ಬ ಮುಸುಕುದಾರಿ ಗನ್ ತೋರಿಸಿ ಅಂಗಡಿ ಮಾಲೀಕ ಸೇರಿದಂತೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ 10 ಮಂದಿಗೂ ಹೆದರಿಸಿದ್ದಾನೆ. ಇನ್ನು ನಾಲ್ಕು ಮಂದಿ ಮುಸುಕುದಾರಿಗಳ ತಂಡ ತಮ್ಮ ಬ್ಯಾಗ್ ಗಳಿಗೆ ಚಿನ್ನಾಭರಣ ತುಂಬಿಕೊಂಡು ಸಿನಿಮೀಯ ರೀತಿಯಲ್ಲಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಎರಡು ಬೈಕ್ ಗಳಲ್ಲಿ ಬಂದ ಗುಂಪು ಕೃತ್ಯ ಎಸಗಿದೆ. ದರೋಡೆಕೋರರನ್ನು ಸಿಬ್ಬಂದಿಗಳು ಹಿಂಬಾಲಿಸಿದ್ದಾರೆ. ಆದರೆ ದುಷ್ಕರ್ಮಿಗಳನ್ನ ಹಿಡಿಯಲು ಸಾಧ್ಯವಾಗಿಲ್ಲ. ದರೋಡೆ ನಡೆಸಿದ ಸಂಪೂರ್ಣ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸುಮಾರು 5 ಕೆ.ಜಿ. ಚಿನ್ನಾಭರಣ ದೋಚಿರುವುದಾಗಿ ತಿಳಿದು ಬಂದಿದೆ.
ಸ್ಥಳಕ್ಕೆ ಎಸ್ಪಿ ವಿಷ್ಣುವರ್ಧನ್ ಭೇಟಿ ನೀಡಿ ತನಿಖೆ ಚುರುಕು ಗೊಳಿಸಿದ್ದಾರೆ. ಈ ಸಂಬಂಧ ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.