ʼಕಾಂಗ್ರೆಸ್ ಒಂದು ಸಿದ್ಧಾಂತʼ; ಸಿದ್ಧಾಂತಗಳು ಎಂದಿಗೂ ಸಾಯುವುದಿಲ್ಲ: ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ | Photo Credit : PTI
ಹೊಸದಿಲ್ಲಿ,ಡಿ.28: ಕಾಂಗ್ರೆಸ್ ಒಂದು ಸಿದ್ಧಾಂತವಾಗಿದೆ ಮತ್ತು ಸಿದ್ಧಾಂತಗಳು ಎಂದಿಗೂ ಸಾಯುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಪಾದಿಸಿದ್ದಾರೆ.
ಕಾಂಗ್ರೆಸ್ ನ 140ನೇ ಸಂಸ್ಥಾಪನಾ ದಿನವಾದ ರವಿವಾರ ಪಕ್ಷದ ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ ನಾಯಕರು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ,‘‘ಸಂಸ್ಥಾಪನಾ ದಿನವಾದ ಇಂದು ‘ಕಾಂಗ್ರೆಸ್ ಅಂತ್ಯಗೊಂಡಿದೆ’ ಎಂದು ಹೇಳುವವರಿಗೆ ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಲು ನಾನು ಬಯಸುತ್ತೇನೆ. ನಮ್ಮ ಶಕ್ತಿ ಕಡಿಮೆಯಾಗಿರಬಹುದು, ಆದರೆ ನಮ್ಮ ಬೆನ್ನುಮೂಳೆ ಈಗಲೂ ನೇರವಾಗಿದೆ ಎಂದು ನಾನು ಅವರಿಗೆ ಹೇಳಬಯಸುತ್ತೇನೆ. ನಾವು ಸಂವಿಧಾನದೊಂದಿಗೆ, ಜಾತ್ಯತೀತತೆಯೊಂದಿಗೆ ಮತ್ತು ಬಡವರ ಹಕ್ಕುಗಳೊಂದಿಗೆ ರಾಜಿ ಮಾಡಿಕೊಂಡಿಲ್ಲ. ನಾವು ಅಧಿಕಾರದಲ್ಲಿ ಇಲ್ಲದಿರಬಹುದು, ಆದರೆ ನಾವು ಚೌಕಾಶಿಗಿಳಿಯುವುದಿಲ್ಲ’’ ಎಂದು ಹೇಳಿದರು.
ಕಾಂಗ್ರೆಸ್ ಎಂದಿಗೂ ಧರ್ಮದ ಹೆಸರಿನಲ್ಲಿ ಮತಗಳನ್ನು ಕೇಳಿಲ್ಲ, ಪಕ್ಷವು ಮಂದಿರ-ಮಸೀದಿ ಹೆಸರಿನಲ್ಲಿ ಎಂದಿಗೂ ದ್ವೇಷವನ್ನು ಹರಡಲಿಲ್ಲ ಎಂದು ಅವರು ಪ್ರತಿಪಾದಿಸಿದರು. ಕಾಂಗ್ರೆಸ್ ಜನರನ್ನು ಒಗ್ಗೂಡಿಸುತ್ತದೆ, ಬಿಜೆಪಿ ವಿಭಜಿಸುತ್ತದೆ. ಕಾಂಗ್ರೆಸ್ ಧರ್ಮವನ್ನು ಕೇವಲ ನಂಬಿಕೆಯಾಗಿ ಉಳಿಸಿಕೊಂಡಿದೆ. ಆದರೆ ಕೆಲವರು ಧರ್ಮವನ್ನು ರಾಜಕೀಯವನ್ನಾಗಿ ಪರಿವರ್ತಿಸಿದ್ದಾರೆ. ಇಂದು ಬಿಜೆಪಿಯ ಬಳಿ ಅಧಿಕಾರವಿದೆ, ಆದರೆ ಅವರ ಬಳಿ ಸತ್ಯವಿಲ್ಲ. ಆದ್ದರಿಂದ ಕೆಲವೊಮ್ಮೆ ಮಾಹಿತಿಗಳನ್ನು ಮರೆಮಾಚಲಾಗುತ್ತದೆ,ಕೆಲವೊಮ್ಮೆ ಜನಗಣತಿಯನ್ನು ಸ್ಥಗಿತಗೊಳಿಸಲಾಗುತ್ತದೆ,ಕೆಲವೊಮ್ಮೆ ಸಂವಿಧಾನವನ್ನು ಬದಲಿಸುವ ಮತುಗಳನ್ನಾಡಲಾಗುತ್ತದೆ. ಇಂದು ಇತಿಹಾಸದ ಬಗ್ಗೆ ಭಾಷಣ ಬಿಗಿಯುತ್ತಿದ್ದವರ ಪೂರ್ವಜರು ಇತಿಹಾಸದಿಂದ ಪಲಾಯನ ಮಾಡುತ್ತಿದ್ದರು ಎಂದು ಖರ್ಗೆ ಹೇಳಿದರು.
2025 ಮಹಾತ್ಮಾ ಗಾಂಧಿಯವರ ಕಾಂಗ್ರೆಸ್ ಅಧ್ಯಕ್ಷತೆಯ ಶತಾಬ್ದಿ, ಸಂವಿಧಾನ ಅಂಗೀಕಾರದ 75ನೇ ವರ್ಷ ಮತ್ತು ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯಾಗಿದೆ. 2026 ದಾಧಾಭಾಯಿ ನವರೋಜಿಯವರ 200ನೇ ವರ್ಷಾಚರಣೆ, ಸರೋಜಿನಿ ನಾಯ್ಡು ಅವರ ಕಾಂಗ್ರೆಸ್ ಅಧ್ಯಕ್ಷತೆಯ ಶತಾಬ್ದಿ ಮತ್ತು 1925ರಲ್ಲಿ ಕಾನ್ಪುರ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಸಲ ಹಾಡಲಾಗಿದ್ದ ‘ಝಂಡಾ ಉಂಚಾ ರಹೇ ಹಮಾರಾ’ ಗೀತೆಯ ಶತಮಾನೋತ್ಸವವೂ ಆಗಿದೆ ಎಂದು ಹೇಳಿದರು.
ಭಾರತದಂತೆಯೇ ಅನೇಕ ದೇಶಗಳು ಸ್ವಾತಂತ್ರ ಗಳಿಸಿದ್ದವು. ಆದರೆ ಅವುಗಳಲ್ಲಿ ಕೆಲವು ವಿಫಲಗೊಂಡಿವೆ, ಇನ್ನು ಕೆಲವು ಸರ್ವಾಧಿಕಾರಿ ಆಳ್ವಿಕೆಗೆ ಒಳಪಟ್ಟಿವೆ. ಭಾರತದಲ್ಲಿ ಮಾತ್ರ ಪ್ರಜಾಪ್ರಭುತ್ವವು ಜ್ವಲಂತವಾಗಿದೆ. ಕಾಂಗ್ರೆಸ್ ನ ಮಹಾನ್ ನಾಯಕರಿಂದಾಗಿ ಭಾರತವು ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವವಾಗಿದೆ ಎಂದು ಖರ್ಗೆ ಹೇಳಿದರು.