ಕೋಗಿಲು ಸಮೀಪ ಅನಧಿಕೃತ ಮನೆಗಳ ತೆರವು; ಸ್ಥಳಕ್ಕೆ ಭೇಟಿ ನೀಡಿದ ಸಚಿವ ಝಮೀರ್ ಅಹ್ಮದ್ ಖಾನ್
"ನಾಳೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸಿಹಿ ಸುದ್ದಿ ನೀಡುತ್ತೇವೆ"
ಬೆಂಗಳೂರು : ಕೋಗಿಲು ಸಮೀಪ ಅನಧಿಕೃತವಾಗಿ ನಿರ್ಮಿಸಿಕೊಂಡಿದ್ದ ಮನೆಗಳನ್ನು ತೆರವು ಮಾಡಿರುವುದರಿಂದ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಸೋಮವಾರ(ಡಿ.29) ಬೆಳಗ್ಗೆ 11 ಗಂಟೆಗೆ ಸಭೆ ಕರೆಯಲಾಗಿದ್ದು, ಮಧ್ಯಾಹ್ನದ ವೇಳೆಗೆ ಸಿಹಿ ಸುದ್ದಿ ನೀಡುತ್ತೇವೆ ಎಂದು ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ರವಿವಾರ ಕೋಗಿಲು ಬಳಿಯ ಫಕೀರ್ ಲೇಔಟ್ ಹಾಗೂ ವಸೀಮ್ ಲೇಔಟ್ ಪ್ರದೇಶಕ್ಕೆ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಅವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ, ಸ್ಥಳೀಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ನಮ್ಮದು ಬಡವರ ಪರ ಸರಕಾರ. ಇಲ್ಲಿನ ಬಡವರಿಗೆ ಯಾವ ರೀತಿ ಪರ್ಯಾಯ ವ್ಯವಸ್ಥೆ ಮಾಡಬೇಕು ಎಂಬುದರ ಕುರಿತು ಮುಖ್ಯಮಂತ್ರಿ ತೀರ್ಮಾನ ಮಾಡುತ್ತಾರೆ. ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೊರಗೆ ಹೋಗಿದ್ದಾರೆ. ಪ್ರತಿದಿನ ನನ್ನನ್ನು ಸಂಪರ್ಕಿಸಿ ಪರಿಸ್ಥಿತಿಯ ಕುರಿತು ಮಾಹಿತಿ ಪಡೆಯುತ್ತಿದ್ದಾರೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.
ಬಹಳ ವರ್ಷಗಳಿಂದ ಈ ಕುಟುಂಬಗಳು ಇಲ್ಲಿ ಕಾನೂನು ಬಾಹಿರವಾಗಿ ವಾಸ ಮಾಡುತ್ತಿವೆ. ಮರ‍್ನಾಲ್ಕು ಬಾರಿ ಇವರಿಗೆ ಮನೆಗಳನ್ನು ಖಾಲಿ ಮಾಡುವಂತೆ ನೋಟಿಸ್‌ಗಳನ್ನು ನೀಡಲಾಗಿತ್ತು ಎಂದು ಅವರು ತಿಳಿಸಿದರು.
ಕೇರಳ ಮುಖ್ಯಮಂತ್ರಿ ರಾಜಕೀಯ: ಸರಕಾರವು ಬುಲ್ಡೋಜರ್ ಬಳಸಿ ಮನೆಗಳನ್ನು ತೆರವು ಮಾಡಿದ ಕ್ರಮವನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟೀಕಿಸಿದ್ದು ಹಾಗೂ ಕೇರಳದ ಜನಪ್ರತಿನಿಧಿಗಳ ನಿಯೋಗ ಇಲ್ಲಿ ಭೇಟಿ ನೀಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಉತ್ತರಪ್ರದೇಶದಲ್ಲಿಯೂ ಇದೇ ರೀತಿ ಬುಲ್ಡೋಜರ್ ಬಳಸಿ ಅನೇಕ ಮನೆಗಳನ್ನು ತೆರವುಗೊಳಿಸಲಾಗಿತ್ತು. ಅದರ ಬಗ್ಗೆ ಯಾಕೆ ಅವರು ಧ್ವನಿ ಎತ್ತಲಿಲ್ಲ ಎಂದು ಪ್ರಶ್ನಿಸಿದರು.
ಮುಂದಿನ ವರ್ಷ ಎಪ್ರಿಲ್ ತಿಂಗಳಲ್ಲಿ ಕೇರಳ ರಾಜ್ಯದಲ್ಲಿ ಚುನಾವಣೆ ನಡೆಯಲಿದೆ. ಆದುದರಿಂದ, ಈ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಅವರಿಗೆ ಬಡವರ ಬಗ್ಗೆ ಕಾಳಜಿ ಇದ್ದರೆ ಅವರ ಸರಕಾರ, ಅವರ ಪಕ್ಷದ ವತಿಯಿಂದ ಬಡವರ ಮನೆಗಳ ನಿರ್ಮಾಣಕ್ಕೆ ಅನುದಾನ ಕೊಡಲಿ ಎಂದ ಝಮೀರ್ ಅಹ್ಮದ್, ನೈಸರ್ಗಿಕ ವಿಕೋಪವಾಗಿ ಕೇರಳದಲ್ಲಿ ಹಲವಾರು ಮನೆಗಳು ಹಾಳಾಗಿತ್ತು. ನಮ್ಮ ಸರಕಾರವು 100 ಮನೆಗಳನ್ನು ನೀಡುವುದಾಗಿ ಘೋಷಿಸಿ, ಅವುಗಳನ್ನು ಕಟ್ಟಿಸಿಕೊಡುತ್ತಿದೆ ಎಂದು ಹೇಳಿದರು.