Bengaluru | ಹೊಸವರ್ಷ ಸಂಭ್ರಮಾಚರಣೆಯ ಭದ್ರತೆಗೆ 20 ಸಾವಿರ ಪೊಲೀಸರ ನಿಯೋಜನೆ : ಜಿ.ಪರಮೇಶ್ವರ್
ಬೆಂಗಳೂರು : ನಗರದ ವಿವಿಧೆಡೆ ನಡೆಯುವ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ತಿಳಿಸಿದರು.
ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ನಗರದಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳು, ಬಂದೋಬಸ್ತ್ ವ್ಯವಸ್ಥೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನಗರದಲ್ಲಿ ಹೊಸ ಸಂಭ್ರಮಾಚರಣೆಯ ಕರ್ತವ್ಯಕ್ಕೆ ಒಟ್ಟು 20 ಸಾವಿರ ಪೊಲೀಸರನ್ನು ನಿಯೋಜಿಸಲಾಗುತ್ತಿದೆ. ಕಾನೂನು ಸುವ್ಯವಸ್ಥೆ 14 ಸಾವಿರ ಪೊಲೀಸರು, 2500 ಟ್ರಾಫಿಕ್ ಪೊಲೀಸರು, 88 ಕೆಎಸ್ಆರ್‌ಪಿ ಪ್ಲಟೂನ್ಸ್, 21 ಸಿಎಆರ್, 266 ಹೋಯ್ಸಳ ವಾಹನ, 250 ಕೋಬ್ರ ವಾಹನಗಳನ್ನು ನಿಯೋಜಿಸಲಾಗುತ್ತಿದೆ. 400 ಟ್ರಾಫಿಕ್ ವಾರ್ಡನ್‌ಗಳನ್ನು ನಿಯೋಜಿಸಲಾಗಿದೆ. ಜನ ದಟ್ಟಣೆ ನಿಯಂತ್ರಿಸಲು ವಾಟರ್ ಜೆಟ್ಸ್ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದು. ಸಿವಿಲ್ ಡಿಫೆನ್ಸ್, ಹೋಮ್ ಗಾರ್ಡ್ಸ್ ಸೇರಿದಂತೆ ಒಟ್ಟು 20 ಸಾವಿರ ಪೊಲೀಸರನ್ನು ನಿಯೋಜಿಸಲಾಗುವುದು ಎಂದು ವಿವರಿಸಿದರು.
ಹೊಸ ವರ್ಷದ ಆಚರಣೆಯಲ್ಲಿ ಹೆಚ್ಚಿನ ಜನ ಭಾಗವಹಿಸುತ್ತಿದ್ದಾರೆ. ಕಳೆದ ವರ್ಷ 8 ಲಕ್ಷಕ್ಕೂ ಹೆಚ್ಚು ಜನರು ಸಂಭ್ರಮಾಚರಣೆಗಳಲ್ಲಿ ಭಾಗವಹಿಸಿದ್ದರು. ಎಂ.ಜಿ.ರಸ್ತೆ, ಬ್ರಿಗೇಡ್ ರೋಡ್, ಇಂದಿರಾನಗರ, ಕೋರಮಂಗಲ, ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ರಸ್ತೆಯನ್ನು ಹೆಚ್ಚು ಜನ ಸೇರುವ ಸ್ಥಳಗಳೆಂದು ಗುರುತಿಸಲಾಗಿದೆ.
ಹಿಂದಿನ ವರ್ಷದ ಅನುಭವದ ಮೇಲೆ ಈ ಸ್ಥಳಗಳನ್ನು ಗುರುತಿಸಲಾಗಿದೆ. ಹಿಂದಿನ ವರ್ಷಕ್ಕಿಂತ ಹೆಚ್ಚು ಜನ ಸೇರಬಹುದು ಎಂದು ಅಂದಾಜಿಸಲಾಗಿದ್ದು, ಸುಮಾರು 10 ಲಕ್ಷಕ್ಕು ಹೆಚ್ಚು ಜನ ಸೇರುವ ಸಾಧ್ಯತೆ ಇದೆ ಎಂದರು.
ಜನರು ಸುರಕ್ಷಿತವಾಗಿ ಮನೆಗಳಿಗೆ ಹೋಗಲು ಅನುವು ಮಾಡಿಕೊಡಲಾಗುವುದು. ಬಾರ್ ಆ್ಯಂಡ್ ರೆಸ್ಟೋರೆಂಟ್, ಮೆಟ್ರೋ ಕಾರಿಡಾರ್, ಮನಸಂರಜನಾ ಸ್ಥಳಗಳಲ್ಲಿ ಹೆಚ್ಚಿನ ರೀತಿಯಲ್ಲಿ ಯುವಕ-ಯುವತಿಯರು ಸೇರುತ್ತಾರೆ. ಇದಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅವಶ್ಯಕತೆ ಇರುವ ಸ್ಥಳಗಳಲ್ಲಿ ವಾಚ್ ಟವರ್, 180 ಕಡೆ ಫೋಕಸ್ ಲೈಟ್‌ಗಳನ್ನು ಅಳವಡಿಸಲಾಗುವುದು. ಸಾರ್ವಜನಿಕರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲು ಪೊಲೀಸ್ ಆ್ಯಕ್ಸಿಸ್ ಕಂಟ್ರೋಲ್, ವಾಹನ ತಪಾಸಣೆ ವ್ಯವಸ್ಥೆ ಮಾಡಲಾಗಿದೆ. ಟ್ಯಾಕ್ಸಿಗಳು ಸಿಗುವುದಿಲ್ಲ. ಅಂತವರು ಸುರಕ್ಷಿತವಾಗಿ ಮನೆಗಳಿಗೆ ಹೋಗಲು 8 ಕಡೆ ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು.
ಸಂಭ್ರಮಾಚರಣೆ ನಡೆಯುವ ಸ್ಥಳಗಳಲ್ಲಿ 250 ಕಡೆ ತಾತ್ಕಲಿಕವಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಸೇಫ್ಟಿ ಶೆಲ್ಟರ್‌ಗಳು, ಆಂಬುಲೆನ್ಸ್‌ಗಳನ್ನು ನಿಯೋಜಿಸಲಾಗುತ್ತಿದೆ. ಜನದಟ್ಟಣೆಯ ಮೇಲೆ ಡ್ರೋನ್ ಕ್ಯಾಮೆರಾಗಳಿಂದ ಪೊಲೀಸರು ನಿಗಾವಹಿಸಲಿದ್ದಾರೆ ಎಂದು ತಿಳಿಸಿದರು.
ಮಹಿಳಾ ಸುರಕ್ಷತೆ ಮತ್ತು ಜನಸಂದಣಿ ನಿಯಂತ್ರಣಕ್ಕೆ ಹೆಚ್ಚಿನ ಗಮನ ಹರಿಸಲಾಗುವುದು. ಈಗಾಗಲೇ ಬಾರ್, ರೆಸ್ಟೋರೆಂಟ್, ಮಾಲ್‌ಗಳ ಮಾಲೀಕರುಗಳಿಗೆ ಅಗತ್ಯ ಸೂಚನೆಗಳನ್ನು ನೀಡಲಾಗಿದೆ. ಡಿಜಿಪಿ ಅವರು 15 ಅಂಶಗಳ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ ಎಂದರು.
ಹೆಚ್ಚಿನ ಭದ್ರೆತೆಗೆ ಒತ್ತು ನೀಡಲಾಗಿದೆ. ಇದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಈಗಾಗಲೇ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸಿ, ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂಬುದನ್ನು ಗಮನ ಹರಿಸಲಾಗಿದೆ.
ಮುಖಚರ್ಯೆ ಗುರುತಿಸುವ ಎಐ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ಅಪರಾಧ ಚಟುವಟಿಕೆ ಹಿನ್ನೆಲೆಯುಳ್ಳವರ ಮಾಹಿತಿ ಫೇಸ್ ರೆಕಾಗ್ನೈಸೇಷನ್ ಎಐ ಕ್ಯಾಮೆರಾದಿಂದ ಗೊತ್ತಾಗಲಿದೆ. ಅಂಥವರು ಕಂಡು ಬಂದರೆ ಕೂಡಲೇ ಎಚ್ಚರಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಕಳೆದ ಐದು ದಿನದಿಂದ ನಗರದಲ್ಲಿ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದವರ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗಿದೆ. 2854 ಸವಾರರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿಸಿದರು.
ಹೀಟ್ ಮ್ಯಾಪ್:
ಆಂಬುಲೆನ್ಸ್, ವಾಹನಗಳು, ಟ್ರಾಫಿಕ್ ಸಮಸ್ಯೆ ಸೇರಿದಂತೆ ಜನಗಳಿಗೆ ಮಾಹಿತಿ ಸಿಗಲು ಕ್ಯೂಆರ್ ಕೋಡ್ ಪರಿಚಯಿಸಲಾಗಿದೆ. ಕ್ಯೂಆರ್ ಕೋಡ್ ಮೂಲಕ ಮಾಹಿತಿ ಪಡೆಯಬಹುದು. ಇದೇ ಮೊದಲ ಬಾರಿಗೆ 'ಹೀಟ್ ಮ್ಯಾಪ್' ಮಾಡಲಾಗಿದೆ. ಅತೀ ಹೆಚ್ಚು ಜನ ಸೇರಿರುವ ಸ್ಥಳಗಳನ್ನು ಕೆಂಪು ಬಣ್ಣದಿಂದ ಗುರುತಿಸಲಾಗುತ್ತದೆ. ಹಳದಿ ಬಣ್ಣದಿಂದ ಗುರುತಿಸುವ ಸ್ಥಳಗಳನ್ನು ಹೆಚ್ಚಿನ ಜನ ಸೇರುತ್ತಿರುವುದನ್ನು ಸೂಚಿಸುತ್ತದೆ. ಹಸಿರು ಬಣ್ಣ ಇರುವುದು ಕಡಿಮೆ ಜನ ಇರುವುದನ್ನು ಗುರುತಿಸಬಹುದು. ಇದನ್ನು ಕಮಾಂಡ್ ಸೆಂಟರ್‌ನಿಂದ ನಿಗಾವಹಿಸಲಾಗುತ್ತದೆ. ಇದನ್ನು ಆಧರಿಸಿ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಜನರ ದಟ್ಟಣೆ ನಿಯಂತ್ರಣಕ್ಕೆ ಕೂಡಲೇ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.
ಸಾರ್ವಜನಿಕರಿಗೆ ಮನವಿ:
ಹೊಸ ವರ್ಷವನ್ನು ಜವಾಬ್ದಾರಿಯಿಂದ ಸಂಭ್ರಮಾಚರಣೆ ಮಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗುವುದು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ. ನಿಮ್ಮ ಮನೆಯ ಯುವಕರು, ಮನೆಯಿಂದ ಹೊರ ಹೋದ ಬಳಿಕ ವಾಪಸ್ ಮನೆಗೆ ಬರುವವರೆಗೂ ಅವರ ಬಗ್ಗೆ ನಿಗಾವಹಿಸಬೇಕು ಎಂದು ಸಾರ್ವಜನಿಕರಿಗೆ ಮನವಿ ಮಾಡಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ. ಎಂ.ಎ.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ , ಜಂಟಿ ಪೊಲೀಸ್ ಆಯುಕ್ತರುಗಳಾದ ರಮೇಶ್ ಬಾನೋಥ್, ವಂಶಿಕೃಷ್ಣ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತರಾದ ಅಜಯ್ ಹಿಲೋರಿ, ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತಿಕ್ ರೆಡ್ಡಿ ಹಾಗೂ ಎಲ್ಲ ವಿಭಾಗಗಳ ಡಿಸಿಪಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.