ಮಂಗಳವಾರ ಮತ್ತೆ ಸಿಎಂ-ಡಿಸಿಎಂ ಉಪಹಾರ ಸಭೆ
ಡಿ.ಕೆ.ಶಿವಕುಮಾರ್/ಸಿದ್ದರಾಮಯ್ಯ
ಬೆಂಗಳೂರು : ಅಧಿಕಾರ ಹಂಚಿಕೆ ವಿಚಾರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಳೆ(ಡಿ.2) ಬೆಳಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಉಪಹಾರಕ್ಕೆ ತೆರಳಲಿದ್ದಾರೆ.
ಸೋಮವಾರ ಈ ಕುರಿತು ಅಧಿಕೃತವಾಗಿ ಡಿ.ಕೆ.ಶಿವಕುಮಾರ್ ಮಾಹಿತಿ ಹಂಚಿಕೊಂಡಿದ್ದು, ‘ನಾನು ಮತ್ತು ಮುಖ್ಯಮಂತ್ರಿಗಳು ಒಂದು ತಂಡವಾಗಿ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ. ನಾವು ರಾಜ್ಯದ ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಲು ನಮ್ಮ ಸಾಮೂಹಿಕ ಪ್ರಯತ್ನಗಳನ್ನು ಚರ್ಚಿಸಲು ಮತ್ತು ಬಲಪಡಿಸಲು ಮಂಗಳವಾರ ಬೆಳಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಉಪಹಾರಕ್ಕೆ ಆಹ್ವಾನಿಸಿದ್ದೇನೆ’ ಎಂದು ತಿಳಿಸಿದ್ದಾರೆ.
ಇತ್ತ ಸೋಮವಾರ ಇದೇ ವಿಚಾರವಾಗಿ ವಿಧಾನಸೌಧದಲ್ಲಿ ಖುದ್ದು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಡೆಯಿಂದ ಮಂಗಳವಾರ(ಡಿ.2) ಬೆಳಗ್ಗೆ ಉಪಹಾರಕ್ಕೆ ಆಹ್ವಾನ ಬಂದಿದ್ದು, ಅಲ್ಲಿಗೆ ಹೋಗುತ್ತೇನೆ’ ಎಂದು ಸ್ಪಷ್ಟಪಡಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ‘ಇದು ನನಗೆ ಹಾಗೂ ಮುಖ್ಯಮಂತ್ರಿಗಳಿಗೆ ಸಂಬಂಧಿಸಿದ ವಿಚಾರ. ನಾವಿಬ್ಬರು ಸಹೋದರರಂತೆ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ. ನೀವುಗಳು ಸದಾ ಗುಂಪು, ಗುಂಪು ಎಂದು ಬಿಂಬಿಸುತ್ತಿದ್ದೀರಿ. ನಮ್ಮಲ್ಲಿ ಯಾವುದೇ ಗುಂಪು ಇಲ್ಲ’ ಎಂದು ಹೇಳಿದರು.
ನಮ್ಮ ಜೊತೆ ಕಾಂಗ್ರೆಸ್ ಪಕ್ಷದ 140 ಮಂದಿ ಶಾಸಕರು ಇದ್ದಾರೆ. ನಾವು ಹುಟ್ಟುವಾಗಲೂ ಒಬ್ಬರೇ, ಸಾಯುವಾಗಲೂ ಒಬ್ಬರೆ. ಪಕ್ಷದ ವಿಚಾರ ಬಂದಾಗ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುತ್ತೇವೆ. ಈ ಬಗ್ಗೆ ಚಿಂತೆ ಬೇಡ ಎಂದು ಅವರು ತಿಳಿಸಿದರು.
ಈ ವಾರ ಹೊಸದಿಲ್ಲಿಯಲ್ಲಿ ಸರ್ವಪಕ್ಷ ಸಭೆ ನಡೆಯಲಿದೆಯೇ ಎಂದು ಕೇಳಿದಾಗ, ನಾನು ಸರ್ವಪಕ್ಷ ಸಭೆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತಿದ್ದೇನೆ. ಸಂಸತ್ ಅಧಿವೇಶನ ಆರಂಭವಾಗಿದ್ದು, ರಾಜ್ಯದ ಹಿತರಕ್ಷಣೆ ವಿಚಾರವಾಗಿ ಸಂಸದರಿಗೆ ಕೆಲವು ಜವಾಬ್ದಾರಿಗಳ ಬಗ್ಗೆ ಹೇಳಬೇಕಿದೆ ಎಂದು ತಿಳಿಸಿದರು.
ಅಧಿಕಾರ ಹಂಚಿಕೆ ಚರ್ಚೆ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಹ್ವಾನದ ಮೇರೆಗೆ ಡಿ.ಕೆ.ಶಿವಕುಮಾರ್ ಶನಿವಾರ ಅವರ ನಿವಾಸದಲ್ಲಿ ಉಪಹಾರ ಸೇವಿಸಿದ್ದರು. ಇದೀಗ ಮಂಗಳವಾರ ಡಿ.ಕೆ.ಶಿವಕುಮಾರ್ ಅವರು ತಮ್ಮ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಪಹಾರಕ್ಕೆ ಆಹ್ವಾನ ನೀಡಿರುವುದು ಗಮನ ಸೆಳೆದಿದೆ.