×
Ad

ಆಳಂದ ಮತಗಳ್ಳತನ ಪ್ರಕರಣ | ಬಿಜೆಪಿಯ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್ ಸೇರಿ ಏಳು ಜನರ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಕೆ

Update: 2025-12-13 18:16 IST

ಸಾಂದರ್ಭಿಕ ಚಿತ್ರ PC | PTI

ಬೆಂಗಳೂರು : ಕಲಬುರಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂಬ ಆರೋಪ ಸಂಬಂಧಿಸಿದಂತೆ ಎಸ್‍ಐಟಿ ತಂಡವು ಬಿಜೆಪಿಯ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್, ಅವರ ಪುತ್ರ ಹರ್ಷಾನಂದ ಸೇರಿದಂತೆ ಒಟ್ಟು 7 ಜನರ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ಬೆಂಗಳೂರು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಸಲ್ಲಿಸಿದೆ.

ಆಳಂದ ಕ್ಷೇತ್ರದ ಬಿಜೆಪಿಯ ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್, ಅವರ ಮಗನಾದ ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ್, ಅವರ ಆಪ್ತ ಸಹಾಯಕರಾದ ತಿಪ್ಪೇರುದ್ರ, ಕಲಬುರಗಿ ನಿವಾಸಿಗಳಾದ ಅಕ್ರಂ ಪಾಷಾ, ಅಸ್ಲಂ ಪಾಷಾ, ಮುಹಮ್ಮದ್‌ ಅಲ್ಟಾಕ್ ಅಹ್ಮದ್, ಪಶ್ಚಿಮ ಬಂಗಾಳ ಮೂಲದ ಬಾಪಿ ಅದ್ಯ ವಿರುದ್ಧ 22 ಸಾವಿರ ಪುಟಗಳ ದೋಷಾರೋಪಣಾ ಪಟ್ಟಿ ಸಲ್ಲಿಕೆಯಾಗಿದೆ.

2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದಿದೆ ಎನ್ನಲಾಗಿದ್ದ ಮತಗಳ್ಳತನ ಪ್ರಕರಣದಲ್ಲಿ ಸುಭಾಷ್‌ ಗುತ್ತೇದಾರ್ ಪಾತ್ರವಿದೆ ಎಂಬುದು ಎಸ್‍ಐಟಿ ತನಿಖೆಯಿಂದ ದೃಢಪಟ್ಟಿದೆ. ತನಿಖೆಯ ವೇಳೆ ಆಳಂದ ಕ್ಷೇತ್ರದಲ್ಲಿ 5,994 ಮತದಾರರ ಹೆಸರು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂಬುದು ಪತ್ತೆಯಾಗಿದೆ. ಮತದಾರರ ಹೆಸರು ಅಳಿಸಲು ಸೈಬರ್ ಸೆಂಟರ್ ಬಳಸಿಕೊಂಡು ಹಣ ಪಾವತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣದಲ್ಲಿ, ಪ್ರತಿ ಮತದಾರರ ಹೆಸರು ಅಳಿಸಲು 80 ರೂ. ಹಣ ಪಾವತಿಸಲಾಗಿದೆ ಎಂಬ ಆರೋಪವಿದ್ದು, 2022ರ ಡಿ.9 ರಿಂದ 2023ರ ಫೆ.20ರ ನಡುವಿನ ಅವಧಿಯಲ್ಲಿ ಆಳಂದ ವಿಧಾನಸಭಾ ಮತಕ್ಷೇತ್ರದ 256 ಮತಗಟ್ಟೆಗಳ ವ್ಯಾಪ್ತಿಯಲ್ಲಿನ ಮೂಲ ಮತದಾರರ ಗಮನಕ್ಕೆ ಬಾರದಂತೆ 6,018 ಮತಗಳ ರದ್ದತಿಗೆ ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗಿತ್ತು ಎಂದು ದೋಷಾರೋಪಣಾ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಕಲಬುರಗಿ ಡೇಟಾ ಸೆಂಟರ್‍ನಿಂದ 75 ಮೊಬೈಲ್ ನಂಬರ್‍ಗಳನ್ನು ಬಳಸಿಕೊಂಡು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಡೇಟಾ ಸೆಂಟರ್‌ನವನು ಪ್ರತಿ ಅರ್ಜಿಗೂ 80 ರೂ.ನಂತೆ 4.8 ಲಕ್ಷ ರೂ. ಪಡೆದಿದ್ದ ಎಂಬ ಆರೋಪವಿದೆ. ಮಾಜಿ ಶಾಸಕ ಸುಭಾಷ್‌ ಗುತ್ತೇದಾರ್ ಈ ಮತಗಳ್ಳತನ ಮಾಡಲು ಹಣ ಪಾವತಿ ಮಾಡಿಸಿದ್ದರು ಎಂದು ದೋಷಾರೋಪಣಾ ಪಟ್ಟಿಯಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.

ಪ್ರಕರಣ:

2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಆಳಂದ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್. ಪಾಟೀಲ್ ಆರೋಪಿಸಿದ್ದರು. ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದನ್ನು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದರು. ರಾಜ್ಯ ಸರಕಾರವು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆದೇಶದಂತೆ ಸಿಐಡಿಯ ಎಡಿಜಿಪಿ ಬಿ.ಕೆ. ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ(ಎಸ್‍ಐಟಿ) ರಚಿಸಲಾಗಿತ್ತು. ಇದೀಗ ತನಿಖೆಯನ್ನು ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News