Photo credit: PTI

ಬೆಂಗಳೂರು: ಅನುಕಂಪದ ಆಧಾರದಲ್ಲಿ ನೀಡಲಾಗುವ ಸರ್ಕಾರಿ ನೌಕರಿಗಳು ಕುಟುಂಬಕ್ಕೆ ಎದುರಾಗುವ ತಕ್ಷಣದ ಆರ್ಥಿಕ ಸಂಕಷ್ಟ ನಿವಾರಣೆಗಾಗಿ ನೀಡಲಾಗುವ ಒಂದು ಬಾರಿಯ ಸಹಾನುಭೂತಿ ಪರಿಹಾರವೇ ಹೊರತು ನಿರಂತರ ಸೌಲಭ್ಯ ಪಡೆಯುವ ಹಕ್ಕು ಎನಿಸುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಅನುಕಂಪದ ಆಧಾರದಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ನೇಮಕಗೊಂಡಿದ್ದ ಇಬ್ಬರು ನೌಕರರಿಗೆ ಉನ್ನತ ಶೈಕ್ಷಣಿಕ ಅರ್ಹತೆ ಇದೆ ಎಂಬ ಕಾರಣಕ್ಕೆ ಅವರನ್ನು ಪ್ರಥಮ ದರ್ಜೆ ಸಹಾಯಕ ಹುದ್ದೆಗೆ ಪರಿಗಣಿಸುವಂತೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ–ಬೆಳಗಾವಿ) ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.

ಕೆಎಟಿ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ನೇತೃತ್ವದ ವಿಭಾಗೀಯ ನ್ಯಾಯಪೀಠ (ಧಾರವಾಡ) ಈ ಆದೇಶ ಮಾಡಿದ್ದು, ವಿದ್ಯಾರ್ಹತೆ, ಹುದ್ದೆಗೆ ಅರ್ಹತೆ ನೀಡುತ್ತದೆಯೇ ಹೊರತು ಅನುಕಂಪದ ಯೋಜನೆಯಡಿ ಆ ಹುದ್ದೆಯನ್ನೇ ಪಡೆಯುವ ಹಕ್ಕನ್ನು ಸೃಷ್ಟಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಅನುಕಂಪದ ಯೋಜನೆಯ ಉದ್ದೇಶವು ಅದರ ಅಡಿಯಲ್ಲಿ ಪರಿಗಣಿಸಲಾದ ಹುದ್ದೆಗೆ ನೇಮಕಾತಿ ಮಾಡಿದ ಮೇಲೆ ಈಡೇರಿದಂತಾಗುತ್ತದೆ. ನಂತರ, ಮತ್ತೊಂದು ಉನ್ನತ ಹುದ್ದೆಯನ್ನು ಪಡೆಯಲು ಪುನಃ ಅನುಕಂಪದ ಆಧಾರವನ್ನೇ ಮಾನದಂಡವನ್ನಾಗಿ ಪರಿಗಣಿಸಲಾಗದು. ಈ ಹಿಂದೆ ಬೇರೆಯವರಿಗೆ ಶೈಕ್ಷಣಿಕ ಅರ್ಹತೆಯ ಆಧಾರದಲ್ಲಿ ಹುದ್ದೆ ಬದಲಾಯಿಸಿಕೊಡಲಾಗಿದೆ ಎಂಬ ಕಾರಣಕ್ಕೆ ಈ ಅರ್ಜಿಯಲ್ಲೂ ಅದನ್ನು ಅನ್ವಯಿಸಲು ಸಾಧ್ಯವಿಲ್ಲ. ನಿಯಮಬಾಹಿರವಾಗಿ ನೀಡಿದ ಪ್ರಯೋಜನಗಳು ಮತ್ತೊಂದು ಕಾನೂನುಬಾಹಿರ ಕ್ರಮಕ್ಕೆ ಹಕ್ಕುಗಳನ್ನು ಸೃಷ್ಟಿಸುವುದಿಲ್ಲ ಎಂದು ನ್ಯಾಯಾಲಯ ಆದೇಶದಲ್ಲಿ ವಿವರಿಸಿದೆ.

ಅನುಕಂಪದ ಆಧಾರದಲ್ಲಿ ನಡೆಯುವ ನೇಮಕಾತಿಗಳಲ್ಲಿ ಸರ್ಕಾರ ಯೋಜನೆಯನ್ನು ಏಕರೂಪವಾಗಿ ಪಾಲಿಸಬೇಕು. ಕೆಲವರಿಗೆ ನಿಯಮ ಮೀರಿ ಸೌಲಭ್ಯ ಒದಗಿಸುವುದರಿಂದ ಅಸಮಾನತೆ ಹಾಗೂ ಅನಗತ್ಯ ವ್ಯಾಜ್ಯಗಳು ಸೃಷ್ಟಿಯಾಗುತ್ತವೆ. ಇದು ಸಂವಿಧಾನದ ಪರಿಚ್ಛೇದ 14ರ (ಸಮಾನತೆಯ ಹಕ್ಕು) ಉಲ್ಲಂಘನೆ ಎಂದು ನ್ಯಾಯಪೀಠ ಎಚ್ಚರಿಸಿದೆ.


ಪ್ರಕರಣವೇನು?

ಬೆಳಗಾವಿಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ‘ಡಿ’ ದರ್ಜೆ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದ ವೀರೇಶ್ ಗುಳ್ಳ ಮತ್ತು ವಿನಯರಾವ್‌ ಕುಲಕರ್ಣಿ ನಿಧನದ ಹಿನ್ನೆಲೆಯಲ್ಲಿ, ಅವರ ಕುಟುಂಬದ ಸದಸ್ಯರಿಗೆ ಅನುಕಂಪದ ಆಧಾರದಲ್ಲಿ ದ್ವಿತೀಯ ದರ್ಜೆ ಸಹಾಯಕರನ್ನಾಗಿ (ಎಸ್‌ಡಿಎ) ನೇಮಕ ಮಾಡಲಾಗಿತ್ತು.

ಉದ್ಯೋಗಕ್ಕೆ ಸೇರಿದ ಏಳು ತಿಂಗಳ ಬಳಿಕ ಇವರು ತಾವು ಹೊಂದಿರುವ ಉನ್ನತ ಶೈಕ್ಷಣಿಕ ಅರ್ಹತೆಯನ್ನು ಪರಿಗಣಿಸಿ ತಮ್ಮನ್ನು ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಹುದ್ದೆಗೆ ಪರಿಗಣಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಸರ್ಕಾರ ಮನವಿ ತಿರಸ್ಕರಿಸಿದ್ದರಿಂದ ಕೆಎಟಿ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ಬೆಳಗಾವಿಯ ಕೆಎಟಿ ಪೀಠವು ನೌಕರರ ಪರವಾಗಿ 2026ರ ಮಾರ್ಚ್‌ 24ರಂದು ಆದೇಶ ನೀಡಿತ್ತು. ಈ ಆದೇಶವನ್ನು ಹೈಕೋರ್ಟ್‌‌ನಲ್ಲಿ ಪ್ರಶ್ನಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor