SIR ಅನ್ನು ರಾಜಕೀಯ ಉದ್ದೇಶಕ್ಕೆ ಬಳಸುತ್ತಿರುವುದು ಸರಿಯಲ್ಲ: ಸಿಎಂ ಡಿ.ಕೆ.ಶಿವಕುಮಾರ್
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (File Photo)
ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್) ನಡೆಸುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ಇದನ್ನು ರಾಜಕೀಯ ಉದ್ದೇಶಕ್ಕೆ ಬಳಸುತ್ತಿರುವುದು ಸರಿಯಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ನಗರದ ಅರಮನೆ ಮೈದಾನದಲ್ಲಿ ನಗರಾಭಿವೃದ್ಧಿ ಇಲಾಖೆ ಹಾಗೂ ಪೌರಾಡಳಿತ ನಿರ್ದೇಶನಾಲಯದ ವತಿಯಿಂದ ಸ್ವಚ್ಚತಾ ಯೋಧರಿಗೆ ನಲ್ಮೆಯ ನಮನ ಶೀರ್ಷಿಕೆಯಡಿ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ-2026 ಸಮಾರಂಭ ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಆಯೋಗದ ವಿಚಾರವಾಗಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಎಸ್‍ಐಆರ್ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಹೊಣೆಗಾರರು ಎಂದು ನಾವೂ ಹೇಳಿದ್ದೇವೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿರುವುದು ಸಹಜ ಎಂದು ಹೇಳಿದರು.
ಅರ್ಹರೆಲ್ಲರಿಗೂ ಮತದಾನದ ಹಕ್ಕು ಸಿಗಬೇಕು. ಇದು ಪ್ರಜಾಪ್ರಭುತ್ವದ ರಾಷ್ಟ್ರ, ಸರ್ವಾಧಿಕಾರವಲ್ಲ. ಚುನಾವಣಾ ಆಯೋಗದ ಮೂವರು ಸದಸ್ಯರ ಸಮಿತಿಯಲ್ಲೇ ಬಹುಮತದ ನಿರ್ಧಾರವಾಗುತ್ತಿಲ್ಲ ಎಂಬುದು ಬಹಿರಂಗವಾಗಿದೆ. ಈ ವಿಚಾರದಲ್ಲಿ ಯಾರಿಗೂ ತೃಪ್ತಿ ಇಲ್ಲ ಎಂದೂ ಅವರು ತಿಳಿಸಿದರು.
ಕೇಂದ್ರದಿಂದ ಮುಂಗಡ ಹಣ ಬಿಡುಗಡೆ ಮಾಡುವಂತೆ ಪತ್ರ ಬರೆದಿರುವ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಡಿದ್ದ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಬೇರೆ ರಾಜ್ಯಗಳಿಗೆ ಮುಂಗಡ ಹಣ ಕೊಟ್ಟಿಲ್ಲವೇ? ತಂಡ ಕಳುಹಿಸಿ ಮನವಿ ಮಾಡಲಿ. ಪ್ರಧಾನಮಂತ್ರಿಯವರ ಭೇಟಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ನಾವು ಸಮಯ ಕೇಳಿದ್ದೇವೆ. ಸಮಯ ಸಿಕ್ಕಾಗ ಜೋಶಿ ಸೇರಿದಂತೆ ಎಲ್ಲರೂ ಬರಲಿ ಎಂದು ಹೇಳಿದರು.