ಒಂದು ರಾಜಕೀಯ ಪಕ್ಷ, ಒಬ್ಬ ನಾಯಕನಿಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯೆ ಬುಡಮೇಲು: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಆಕ್ರೋಶ
"ಜ್ಞಾನೇಶ್ ಕುಮಾರ್ ಅವರಿಂದ ತಕ್ಷಣವೆ ರಾಜೀನಾಮೆ ಪಡೆದು ಬಂಧಿಸಬೇಕು"
ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್
ಬೆಂಗಳೂರು: ಪ್ರಜಾಪ್ರಭುತ್ವದ ಅಸ್ಥಿತ ಉಳಿಸುವುದು ಕೇಂದ್ರ ಚುನಾವಣಾ ಆಯೋಗದ ಕರ್ತವ್ಯ. ಆದರೆ ಒಂದು ರಾಜಕೀಯ ಪಕ್ಷಕ್ಕೆ ಹಾಗೂ ಒಬ್ಬ ನಾಯಕನಿಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ಕಳೆದ 10 ತಿಂಗಳಲ್ಲಿ 14 ಬಾರಿ ಇನ್ನುಳಿದ ಇಬ್ಬರು ಆಯುಕ್ತರ ಭಿನ್ನಮತವನ್ನು ತಳ್ಳಿಹಾಕಿ ಗೌಪ್ಯವಾಗಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆ ನಡೆಸಿರುವುದು ದೇಶದ ನಾಗರಿಕರಿಗೆ ಆಘಾತ ತಂದಿದೆ ಎಂದು ಹೇಳಿದರು.
ಜ್ಞಾನೇಶ್ ಕುಮಾರ್ ಮಾಡಿರುವ ಕೆಲಸದಿಂದಾಗಿ ಬಿಹಾರದಲ್ಲಿ 63 ಲಕ್ಷ, ಪಶ್ಚಿಮ ಬಂಗಾಳದಲ್ಲಿ 91 ಲಕ್ಷ, ಈಗ ಕರ್ನಾಟಕದಲ್ಲಿ 1.07 ಕೋಟಿ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕಿತ್ತುಹಾಕಲಾಗಿದೆ. ರಾಹುಲ್ ಗಾಂಧಿ ಅವರು ಚುನಾವಣಾ ಆಯೋಗಕ್ಕೆ 2025ರ ಫೆಬ್ರವರಿಯಲ್ಲಿ ಬರೆದ ಪತ್ರದಲ್ಲಿ ಮತಗಳ್ಳತನ ಕುರಿತು ಸ್ಪಷ್ಟವಾಗಿ ತಿಳಿಸಿದ್ದರೂ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಗೌರವವಿಲ್ಲದೇ ಚುನಾವಣಾ ಆಯೋಗವು ತೆಗೆದುಕೊಂಡಿರುವ ಏಕಪಕ್ಷೀಯ ನಿರ್ಧಾರಗಳನ್ನು ನಾವು ಖಂಡಿಸುತ್ತೇವೆ ಎಂದು ಅವರು ಹೇಳಿದರು.
ಮಾಧ್ಯಮಗಳಲ್ಲಿ ಎರಡು ದಿನಗಳಿಂದ ಬಂದಿರುವ ವರದಿಗಳ ಪ್ರಕಾರ, ಪ್ರಜಾಪ್ರಭುತ್ವ ಹಾಗೂ ಸಂವಿಧಾನ ವಿರುದ್ಧ ನಡೆ ಸ್ಪಷ್ಟವಾಗಿ ಕಾಣುತ್ತದೆ. ಇದು ದೇಶದ್ರೋಹ ಕೆಲಸವಾಗಿದ್ದು, ಇದಕ್ಕೆ ಕುಮ್ಮಕ್ಕು ನೀಡಿರುವ ಪ್ರಧಾನಮಂತ್ರಿ, ಗೃಹಸಚಿವ, ಚುನಾವಣಾ ಆಯೋಗದ ಕಾರ್ಯ ದೇಶದ್ರೋಹವೆಂದೇ ಪರಿಗಣಿಸಬೇಕಾಗುತ್ತದೆ ಎಂದು ಹರಿಪ್ರಸಾದ್ ಹೇಳಿದರು.
ಜ್ಞಾನೇಶ್ ಕುಮಾರ್ ಅವರಿಗೆ ಈಗಾಗಲೇ 2023ರಲ್ಲಿ ಸಂಸತ್ತಿನಲ್ಲಿ ತೆಗೆದುಕೊಂಡಿರುವ ತೀರ್ಮಾನ ಪ್ರಕಾರ, ಚುನಾವಣಾ ಆಯುಕ್ತರ ಮೇಲೆ ಯಾವುದೆ ಪ್ರಕರಣದಲ್ಲಿ ನಾವು ಪ್ರಕರಣ ದಾಖಲಿಸಿ, ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಜ್ಞಾನೇಶ್ ಕುಮಾರ್ ಅವರಿಂದ ತಕ್ಷಣವೆ ರಾಜೀನಾಮೆ ಪಡೆದು ಬಂಧಿಸಬೇಕು ಎಂದು ಅವರು ಒತ್ತಾಯಿಸಿದರು.
ಜ್ಞಾನೇಶ್ ಕುಮಾರ್ ಬಹಿರಂಗವಾಗಿ ಮಾಡಿರುವ ಈ ಸಂವಿಧಾನ ವಿರೋಧಿ ಕೆಲಸವನ್ನು ಖಂಡಿಸಿ ನಾವು ನಾಳೆ(ಶನಿವಾರ) ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಬೇರೆ ಪಕ್ಷದವರಿಗೂ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಆಹ್ವಾನ ನೀಡಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ನಂಬಿಕೆ ಇಟ್ಟಿರುವ ಯಾವುದೇ ಪಕ್ಷವಾದರೂ ಈ ಪ್ರತಿಭಟನೆಯಲ್ಲಿ ಭಾಗವಹಿಸಬಹುದು ಎಂದು ಹರಿಪ್ರಸಾದ್ ಕರೆ ನೀಡಿದರು.
ಎರಡನೇ ಹಂತದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಜ್ಞಾನೇಶ್ ಕುಮಾರ್ ರಾಜೀನಾಮೆ ಹಾಗೂ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನಾ ಧರಣಿಗಳನ್ನು ನಡೆಸಲಾಗುವುದು. ಸೆ.23ರಂದು ಪತ್ರಿಕೆಯಲ್ಲಿ ಬಂದ ವರದಿಯಲ್ಲಿ ರಾಹುಲ್ ಗಾಂಧಿ ಈ ಹಿಂದೆ ಹೇಳಿದ್ದ ಅಂಶ ಸ್ಪಷ್ಟವಾಗಿ ಕಾಣುತ್ತಿದೆ. ರಾಹುಲ್ ಗಾಂಧಿ ಮತಗಳ್ಳತನ ವಿರುದ್ಧ ಧ್ವನಿ ಎತ್ತಿದಾಗ ಜ್ಞಾನೇಶ್ ಕುಮಾರ್ ಅವರು ರಾಹುಲ್ ಗಾಂಧಿ ದೇಶದ ಜನರ ಮುಂದೆ ಕ್ಷಮೆ ಕೋರಬೇಕು ಎಂದು ತಿಳಿಸಿದ್ದರು. ಈಗ ನಡೆದಿರುವ ಅಸಂವಿಧಾನಿಕ ತೀರ್ಮಾನಕ್ಕಾಗಿ ಜ್ಞಾನೇಶ್ ಕುಮಾರ್ ಕ್ಷಮೆಗೆ ಅರ್ಹರಲ್ಲ ಎಂದು ಅವರು ತಿರುಗೇಟು ನೀಡಿದರು.
ಚುನಾವಣಾ ಆಯುಕ್ತರಾದ ಸುಖ್ಬೀರ್ ಸಿಂಗ್ ಸಂಧು ಹಾಗೂ ಡಾ.ವಿವೇಕ್ ಜೋಷಿ ಅವರು 10 ತಿಂಗಳಲ್ಲಿ 14 ಬಾರಿ ಭಿನ್ನಮತ ವ್ಯಕ್ತಪಡಿಸಿದ್ದರೂ ಜ್ಞಾನೇಶ್ ಕುಮಾರ್ ಇವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಏಕಪಕ್ಷೀಯವಾಗಿ ತೀರ್ಮಾನಗಳನ್ನು ತೆಗೆದುಕೊಂಡಿದ್ದಾರೆ. ಇಬ್ಬರು ಆಯುಕ್ತರ ವಿರೋಧದ ನಡುವೆಯೂ ಫಾರಂ 6 ಅನ್ನು ಮಾರ್ಪಾಡು ಮಾಡಲಾಗಿದೆ ಎಂದು ಹರಿಪ್ರಸಾದ್ ದೂರಿದರು.
ಈ ಹಿನ್ನೆಲೆಯಲ್ಲಿ ಜ್ಞಾನೇಶ್ ಕುಮಾರ್ ಮುಖ್ಯ ಚುನಾವಣಾ ಆಯುಕ್ತರ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ನೈತಿಕತೆಯನ್ನು ಉಳಿಸಿಕೊಂಡಿಲ್ಲ. ಸಮಗ್ರ ಸ್ವಾಯತ್ತ ಪರಿಶೀಲನೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು.
ಗುರುವಾರ ನಾನು ಬೆಳಗಾವಿಯಲ್ಲಿ ಬಿಜೆಪಿ ಶಾಸಕ ಅಭಯ್ ಪಾಟೀಲ್ ಅವರು 2500 ಮತದಾರರ ಮತವನ್ನು ತೆಗೆದುಹಾಕಬೇಕು ಎಂದು ಬರೆದಿದ್ದ ಪತ್ರವನ್ನು ಬಿಡುಗಡೆ ಮಾಡಿ ಮಾಧ್ಯಮಗೋಷ್ಠಿ ಮಾಡಿದ್ದೆ. ಇಂದು ನನ್ನ ಬಳಿ 65 ಸಾವಿರ ಡಿಲೀಟ್ ಆಗಿರುವ ಮತಗಳ ಅರ್ಜಿಗಳು ನನ್ನ ಬಳಿ ಇವೆ. ಈ ಅರ್ಜಿಗಳಲ್ಲಿ ಯಾರ ಸಹಿ ಕೂಡ ಇಲ್ಲವಾಗಿದೆ ಎಂದು ಹರಿಪ್ರಸಾದ್ ಹೇಳಿದರು.
ನಾವು ಈ ಬಗ್ಗೆ ಪರಿಶೀಲನೆ ಮಾಡಿದಾಗ ಡಿಲೀಟ್ ಆಗಿರುವ ಮತಗಳಲ್ಲಿ ಹೆಚ್ಚು ಪ್ರಮಾಣದಲ್ಲಿರುವುದು ಅಲ್ಲ ಸಂಖ್ಯಾತರು ಹಾಗೂ ದಲಿತರ ಮತಗಳು. ಬಡವರ ಮತದಾನದ ಹಕ್ಕನ್ನು ಕಸಿಯಲು ಮುಂದಾಗಿದ್ದಾರೆ. ಬಬಲೇಶ್ವರ, ಹಬ್ಬಳ್ಳಿ ಧಾರವಾಡಗಳಲ್ಲಿ ಈ ಪ್ರಯತ್ನಗಳು ನಡೆದಿವೆ. ತಪ್ಪುಗಳಾಗಿರುವುದು ಮತಪಟ್ಟಿಯಲ್ಲಿ ಅಲ್ಲ. ಚುನಾವಣಾ ಆಯೋಗದ ಎಸ್‍ಐಆರ್ ಪ್ರಕ್ರಿಯೆಯಲ್ಲಿ ಎಂದು ಅವರು ಹೇಳಿದರು.
ನಾವು ಚುನಾವಣಾ ಆಯೋಗದ ಬಗ್ಗೆ ಮಾತನಾಡಿದರೆ, ಅವರ ಪರವಾಗಿ ಸಮರ್ಥನೆಗೆ ನಿಲ್ಲುವುದು ಕೇಂದ್ರ ಬಿಜೆಪಿ ನಾಯಕರು. ನಾವು ಚುನಾವಣಾ ಆಯೋಗಕ್ಕೆ ಪ್ರಶ್ನೆ ಮಾಡಿದರೆ ಆಯೋಗದವರೆ ಉತ್ತರ ನೀಡಬೇಕು. ಆದರೆ ಬಿಜೆಪಿಯವರು ಉತ್ತರ ನೀಡುತ್ತಿದ್ದಾರೆ ಎಂದು ಹರಿಪ್ರಸಾದ್ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯಸಭಾ ಸದಸ್ಯ ಮನ್ಸೂರ್ ಅಲಿ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.