×
Ad

ಕೈದಿಗಳಿಗೆ ಮನೆಯ ಆಹಾರ, ಹಾಸಿಗೆ-ಹೊದಿಕೆಗಳ ಸಂಪೂರ್ಣ ನಿಷೇಧ

ರಾಜ್ಯದ ಎಲ್ಲ ಕಾರಾಗೃಹಗಳಿಗೆ ಇಲಾಖೆಯಿಂದ ಮಹತ್ವದ ಸುತ್ತೋಲೆ

Update: 2026-01-24 20:45 IST

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ರಾಜ್ಯದ ಎಲ್ಲ ಕಾರಾಗೃಹಗಳಲ್ಲಿ ಶಿಕ್ಷೆಗೆ ಒಳಪಟ್ಟ ಕೈದಿಗಳ ಹಿತದೃಷ್ಟಿ ಹಾಗೂ ಜೈಲುಗಳ ಭದ್ರತೆಯ ದೃಷ್ಟಿಯಿಂದ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯು ಮಹತ್ವದ ಸುತ್ತೋಲೆಯೊಂದನ್ನು ಶುಕ್ರವಾರ(ಜ.23) ಹೊರಡಿಸಿದೆ.

ಇನ್ನು ಮುಂದೆ ಶಿಕ್ಷೆಗೊಳಪಟ್ಟ ಕೈದಿಗಳು ಖಾಸಗಿ ಮೂಲಗಳಿಂದ ಅಥವಾ ಮನೆಯಿಂದ ತರುವ ಸಿದ್ಧ ಆಹಾರ ಹಾಗೂ ಹಾಸಿಗೆ-ಹೊದಿಕೆಗಳನ್ನು ಪಡೆಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ನಿಯಮವು ರಾಜ್ಯದ ಎಲ್ಲಾ ಕೇಂದ್ರ, ಜಿಲ್ಲಾ ಹಾಗೂ ತಾಲೂಕು ಕಾರಾಗೃಹಗಳಿಗೆ ಅನ್ವಯವಾಗಲಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ವಾರಕ್ಕೆ ಕೇವಲ 1 ಕೆ.ಜಿ.ಯಷ್ಟು ಹಣ್ಣುಗಳಿಗೆ ಮಾತ್ರ ಅನುಮತಿ:

ಮನೆಯವರಿಂದ ಅಥವಾ ಸಂದರ್ಶಕರಿಂದ ಶಿಕ್ಷಿತ ಕೈದಿಗಳು ಯಾವುದೇ ರೀತಿಯ ತಯಾರಿಸಿದ ಆಹಾರವನ್ನು ಸ್ವೀಕರಿಸುವಂತಿಲ್ಲ. ಕೇವಲ ಬಾಳೆಹಣ್ಣು, ಸೇಬು, ಮಾವು, ಪೇರಲ ಮತ್ತು ಸಪೋಟ ಹಣ್ಣುಗಳನ್ನು ಮಾತ್ರ ತರಲು ಅವಕಾಶ ನೀಡಲಾಗಿದೆ. ಅದು ಕೂಡ ವಾರಕ್ಕೆ ಒಮ್ಮೆ, ಸಂದರ್ಶನದ ಸಮಯದಲ್ಲಿ ಗರಿಷ್ಠ 1 ಕೆ.ಜಿ.ಯಷ್ಟು ಮಾತ್ರ ನೀಡಲು ಅನುಮತಿ ನೀಡಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಜೈಲಿನ ಸಮವಸ್ತ್ರ ಧರಿಸುವುದು ಕಡ್ಡಾಯ:

ಜೈಲಿನಲ್ಲಿರುವ ಕೈದಿಗಳಿಗೆ ಇಲಾಖೆಯ ನಿಯಮಾವಳಿಗಳ ಪ್ರಕಾರವೇ ಹಾಸಿಗೆ, ದಿಂಬು ಹಾಗೂ ಹೊದಿಕೆಗಳನ್ನು ನೀಡಲಾಗುತ್ತದೆ. ಇನ್ನು ಮುಂದೆ ಖಾಸಗಿಯಾಗಿ ಮನೆಯಿಂದ ಹಾಸಿಗೆ ಅಥವಾ ಬೆಡ್‍ಶೀಟ್‍ಗಳನ್ನು ತರುವಂತಿಲ್ಲ. ಇನ್ನು ಬಟ್ಟೆಗಳ ವಿಚಾರಕ್ಕೆ ಬಂದರೆ, ಜೈಲಿನ ಸಮವಸ್ತ್ರವನ್ನೇ ಧರಿಸುವುದು ಕಡ್ಡಾಯ. ಆದರೆ, ಪ್ರವೇಶದ ಸಮಯದಲ್ಲಿ ಒಂದು ಜೊತೆ ಹೊರ ಉಡುಪು ಹಾಗೂ ಮೂರು ಜೊತೆ ಒಳ ಉಡುಪುಗಳನ್ನು ಇಟ್ಟುಕೊಳ್ಳಲು ಅವಕಾಶವಿದೆ. ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ಅಥವಾ ಸ್ಥಳಾಂತರದ ವೇಳೆ ಮಾತ್ರ ಅಧಿಕಾರಿಗಳ ಅನುಮತಿ ಮೇರೆಗೆ ಖಾಸಗಿ ಬಟ್ಟೆ ಬಳಸಬಹುದಾಗಿದೆ ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ.

ವೈದ್ಯಕೀಯ ವರದಿಗಳ ಮೇಲೆ ಮಾತ್ರ ವಿನಾಯಿತಿ: ಜೈಲುಗಳಲ್ಲಿ ಮಾದಕ ವಸ್ತುಗಳ ಸಾಗಾಟ ತಡೆಗಟ್ಟಲು, ಶಿಸ್ತು ಕಾಪಾಡಲು ಮತ್ತು ನೈರ್ಮಲ್ಯದ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಬಟ್ಟೆ ಅಥವಾ ವಸ್ತುಗಳು ಕಂಡುಬಂದಲ್ಲಿ ಅವುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. ಅನಾರೋಗ್ಯದ ಕಾರಣದಿಂದ ಯಾರಿಗಾದರೂ ವಿನಾಯಿತಿ ಬೇಕಿದ್ದರೆ, ಜೈಲು ಅಧೀಕ್ಷಕರು ವೈದ್ಯಕೀಯ ವರದಿಗಳ ಆಧಾರದ ಮೇಲೆ ಲಿಖಿತ ಕಾರಣ ನೀಡಿ ಮಾತ್ರ ಅನುಮತಿ ನೀಡಲು ಅವಕಾಶವಿದೆ. ಈ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರಲಿದ್ದು, ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಮಹಾನಿರ್ದೇಶಕ ಅಲೋಕ್ ಕುಮಾರ್ ಸುತ್ತೋಲೆಯಲ್ಲಿ ನಿರ್ದೇಶನ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News