×
Ad

ರಾಷ್ಟ್ರೀಯ ಹಬ್ಬಗಳಲ್ಲಿ ಸಾರ್ವಜನಿಕರ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚನೆ

Update: 2026-01-23 23:49 IST

ಬೆಂಗಳೂರು: ಸರಕಾರಿ ಕಾರ್ಯಕ್ರಮಗಳು ಸೇರಿದಂತೆ ರಾಷ್ಟ್ರೀಯ ಹಬ್ಬಗಳು ಹಾಗೂ ಶಾಲಾ/ ಕಾಲೇಜುಗಳ ಇತರೆ ಸಾಂಸ್ಕೃತಿಕ ಮತ್ತು ಆಡಳಿತಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭಗಳಲ್ಲಿ ಅಪಘಾತಗಳು ಸಂಭವಿಸದಂತೆ ಮಕ್ಕಳ ಮತ್ತು ಸಾರ್ವಜನಿಕರ ರಕ್ಷಣೆಗೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಶಾಲಾ ಮತ್ತು ಸಾಕ್ಷರತಾ ಇಲಾಖೆಯು ಸುತ್ತೋಲೆಯನ್ನು ಹೊರಡಿಸಿದೆ.

ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಧ್ವಜಾರೋಹಣ ಕಂಬದ ಬಳಿ ವಿದ್ಯುತ್ ತಂತಿಗಳು ಹಾದುಹೋಗದಂತೆ ಮತ್ತು ಕಂಬವು ವಿದ್ಯುತ್ ತಂತಿಗಳನ್ನು ಸಂಪರ್ಕಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು. ಧ್ವಜಾರೋಹಣ ಕಂಬಕ್ಕೆ ಧ್ವಜವನ್ನು ಏರಿಸುವ ಅಥವಾ ಇಳಿಸುವ ಕಾರ್ಯಗಳಿಗೆ ಮಕ್ಕಳನ್ನು ಬಳಸಿಕೊಳ್ಳಬಾರದು. ಧ್ವಜಾರೋಹಣಾ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ಧ್ವಜ ಸಿಕ್ಕಿಕೊಂಡಲ್ಲಿ ಯಾವುದೇ ಕಾರಣಕ್ಕೂ ಮಕ್ಕಳನ್ನು ಧ್ವಜಕಂಬಕ್ಕೆ ಹತ್ತಿಸಬಾರದು.

ಮಕ್ಕಳ ಕವಾಯತು, ಪಥ ಸಂಚಲನ, ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆ, ಮಕ್ಕಳು ಕುಳಿತುಕೊಳ್ಳುವ ಸ್ಥಳಗಳು ಸುರಕ್ಷಿತವಾಗಿರುವ ಬಗ್ಗೆ ಕಾರ್ಯಕ್ರಮದ ಮೊದಲು ಹಾಗೂ ಆಗಿಂದಾಗ್ಗೆ ಪರಿಶೀಲಿಸಬೇಕು. ಮಕ್ಕಳಿಗೆ ನೀಡುವ ನೀರು, ಪಾನೀಯ, ಆಹಾರ ಪದಾರ್ಥಗಳ ಶುಚಿತ್ವದ ಬಗ್ಗೆ ಪರಿಶೀಲಿಸಬೇಕು. ಆಹಾರವನ್ನು ಮಕ್ಕಳಿಗೆ ವಿತರಿಸುವ ಪೂರ್ವದಲ್ಲಿ ಕಾರ್ಯಕ್ರಮ ಸಂಯೋಜಕರು ಪರಿಶೀಲಿಸಿ ಗುಣಮಟ್ಟವನ್ನು ಖಾತರಿಪಡಿಸಿಕೊಂಡ ನಂತರದಲ್ಲಿ ಮಕ್ಕಳಿಗೆ ವಿತರಿಸಬೇಕು ಎಂದು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News