ಪಿಎಸ್ಸೈ ನೇಮಕಾತಿ ಹಗರಣ: ಮಾಜಿ ಎಡಿಜಿಪಿ ಅಮೃತ್ ಪಾಲ್ ಸಹಿತ ಇಬ್ಬರಿಗೆ ಸೇರಿದ 1.53 ಕೋಟಿ ರೂ. ಆಸ್ತಿ ಜಪ್ತಿ
ಸಾಂದರ್ಭಿಕ ಚಿತ್ರ (PTI)
ಬೆಂಗಳೂರು: ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಸಂಚಲನ ಸೃಷ್ಠಿಸಿದ್ದ ಪಿಎಸ್‍ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು(ಈಡಿ) ಶುಕ್ರವಾರ(ಜ.24) ಮಹತ್ವದ ಕ್ರಮ ಕೈಗೊಂಡಿದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ಪಿಎಸ್‍ಐ ಹಗರಣದ ಪ್ರಮುಖ ಆರೋಪಿ, ಮಾಜಿ ಎಡಿಜಿಪಿ ಅಮೃತ್ ಪಾಲ್ ಮತ್ತು ಹೆಡ್ ಕಾನ್‍ಸ್ಟೇಬಲ್ ಶ್ರೀಧರ್ ಎಚ್. ಅವರಿಗೆ ಸೇರಿದ 1.53 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಗಳನ್ನು ಈಡಿ ಬೆಂಗಳೂರು ವಲಯ ಕಚೇರಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
2021-22ನೇ ಸಾಲಿನಲ್ಲಿ ನಡೆದ 545 ಪಿಎಸ್‍ಐ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದ ವ್ಯಾಪಕ ಅಕ್ರಮಗಳ ಕುರಿತು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆ ಮತ್ತು ಸಿಐಡಿ ದಾಖಲಿಸಿದ್ದ ಎಫ್‍ಐಆರ್ ಆಧರಿಸಿ ಈಡಿ ತನಿಖೆ ಆರಂಭಿಸಿತ್ತು. ಪರೀಕ್ಷೆಯ ತಾತ್ಕಾಲಿಕ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಒಎಂಆರ್ ಶೀಟ್ ತಿದ್ದುಪಡಿ, ಭ್ರಷ್ಟಾಚಾರ ಮತ್ತು ಪರೀಕ್ಷಾರ್ಥಿಗಳೊಂದಿಗೆ ಶಾಮೀಲಾಗಿರುವ ಗಂಭೀರ ಆರೋಪಗಳು ಕೇಳಿಬಂದಿದ್ದವು.
ನೇಮಕಾತಿ ವಿಭಾಗದ ಅಂದಿನ ಎಡಿಜಿಪಿ ಅಮೃತ್ ಪಾಲ್ ಅವರು ಈ ಸಂಚಿನ ಕೇಂದ್ರಬಿಂದುವಾಗಿದ್ದರು ಎಂದು ಈಡಿ ತನಿಖೆ ದೃಢಪಡಿಸಿದೆ. ಒಎಂಆರ್ ಶೀಟ್‍ಗಳನ್ನು ಇರಿಸಲಾಗಿದ್ದ ಭದ್ರತಾ ಕೊಠಡಿಯ ಕೀಲಿ ಕೈಗಳನ್ನು ಅಮೃತ್ ಪಾಲ್ ಅವರು ಡಿವೈಎಸ್ಪಿ ಶಾಂತಕುಮಾರ್ ಗೆ ನೀಡಿದ್ದರು. ಇದರ ಮೂಲಕ ಶ್ರೀಧರ್ ಎಚ್. ಸೇರಿದಂತೆ ಇತರ ಆರೋಪಿಗಳು ಅರ್ಹತೆಯಿಲ್ಲದ ಅಭ್ಯರ್ಥಿಗಳ ಉತ್ತರ ಪತ್ರಿಕೆಗಳನ್ನು ತಿದ್ದಿ ಅವರು ಆಯ್ಕೆಯಾಗುವಂತೆ ಮಾಡಿದ್ದರು ಎಂಬುದು ಪತ್ತೆಯಾಗಿದೆ.
ಈ ಅಕ್ರಮಕ್ಕಾಗಿ ಪ್ರತಿ ಅಭ್ಯರ್ಥಿಯಿಂದ 30 ಲಕ್ಷದಿಂದ 70 ಲಕ್ಷದವರೆಗೆ ಲಂಚ ಪಡೆಯಲಾಗಿತ್ತು. ಹೀಗೆ ಸಂಗ್ರಹವಾದ ಕಪ್ಪು ಹಣವನ್ನು ಕೈಗಡ ರೂಪದಲ್ಲಿ ತೋರಿಸಿ ಮರೆಮಾಚಲಾಗಿತ್ತು. ಬಳಿಕ ಈ ಅಕ್ರಮ ಹಣವನ್ನು ವಸತಿ ಕಟ್ಟಡಗಳ ನಿರ್ಮಾಣಕ್ಕಾಗಿ ಬಳಸಲಾಗಿತ್ತು. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಡಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದು, ನ್ಯಾಯಾಲಯವು ವಿಚಾರಣೆಯನ್ನು ಕೈಗೆತ್ತಿಕೊಂಡಿದೆ. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.