×
Ad

‘ಗಣರಾಜ್ಯೋತ್ಸವ ಸಮಾರಂಭದಲ್ಲಿ ಕೇಂದ್ರವನ್ನು ಟೀಕಿಸುವ ಅಂಶಗಳಿದ್ದರೆ ಭಾಷಣ ಮಾಡುವುದಿಲ್ಲ’: ರಾಜ್ಯ ಸರಕಾರಕ್ಕೆ ರಾಜ್ಯಪಾಲರ ಸಂದೇಶ?

Update: 2026-01-24 22:29 IST

ರಾಜ್ಯಪಾಲ ಥಾವರಚಂದ್ ಗೆಹ್ಲೋಟ್

ಬೆಂಗಳೂರು: ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಜ್ಯವನ್ನುದ್ದೇಶಿಸಿ ತಾವು ಮಾಡುವ ಭಾಷಣದಲ್ಲಿ ‘ಕೇಂದ್ರ ಸರಕಾರವನ್ನು ಟೀಕಿಸುವ ಅಂಶಗಳಿದ್ದರೆ ಆ ಭಾಷಣವನ್ನು ನಾನು ಓದುವುದಿಲ್ಲ’ ಎಂಬ ಸಂದೇಶವು ಲೋಕಭವನದಿಂದ ರಾಜ್ಯ ಸರಕಾರಕ್ಕೆ ಬಂದಿದೆ ಎಂದು ಗೊತ್ತಾಗಿದೆ.

ಆ ಮೂಲಕ ರಾಜ್ಯದಲ್ಲಿನ ಕಾಂಗ್ರೆಸ್ ನೇತೃತ್ವದ ಸರಕಾರದ ವಿರುದ್ಧ ಮತ್ತೊಂದು ಸುತ್ತಿನ ಸಮರಕ್ಕೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರು ಸನ್ನದ್ಧರಾಗಿದ್ದಾರೆ. ವಿಧಾನ ಮಂಡಲ ಜಂಟಿ ಅಧಿವೇಶನದಲ್ಲಿ ಸರಕಾರ ಸಿದ್ಧಪಡಿಸಿದ್ದ ಭಾಷಣದಲ್ಲಿ ಕೇಂದ್ರವನ್ನು ಟೀಕಿಸುವ ಅಂಶಗಳಿವೆ ಎಂಬ ಕಾರಣಕ್ಕೆ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಸದನದಿಂದ ನಿರ್ಗಮಿಸಿದ್ದು ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಈ ಮಧ್ಯೆ ಇದೀಗ ಜ.26 ರಂದು ಇಲ್ಲಿನ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕೇಂದ್ರ ಸರಕಾರವನ್ನು ಟೀಕಿಸುವ ಅಂಶಗಳಿದ್ದರೆ ಆ ಭಾಷಣವನ್ನು ಓದುವುದಿಲ್ಲ ಎಂಬ ಸಂದೇಶವನ್ನು ರಾಜ್ಯಪಾಲರು, ರಾಜ್ಯ ಸರಕಾರಕ್ಕೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.

ಗಣರಾಜ್ಯೋತ್ಸವ ಸಂದರ್ಭದಲ್ಲಿ ರಾಜ್ಯಪಾಲರು ಓದುವ ಭಾಷಣವನ್ನು ಸಾಮಾನ್ಯವಾಗಿ ರಾಜ್ಯ ಸರಕಾರವೇ ಸಿದ್ಧಪಡಿಸುತ್ತದೆ. ಆ ಭಾಷಣದಲ್ಲಿ ರಾಜ್ಯ ಸರಕಾರವು, ಕೇಂದ್ರ ಅನ್ಯಾಯಗಳನ್ನು ಪ್ರಸ್ತಾಪಿಸಿ, ರಾಜ್ಯದ ಬಗ್ಗೆ ಮಲತಾಯಿ ಧೋರಣೆ ತಾಳಿದೆ ಎಂಬ ಅಂಶಗಳನ್ನು ಸೇರ್ಪಡೆ ಮಾಡಿದೆ ಎಂದು ಹೇಳಲಾಗಿದೆ.

ಆ ಹಿನ್ನೆಲೆಯಲ್ಲಿ ಕೇಂದ್ರವನ್ನು ಗುರಿಯಾಗಿಸಿ ಟೀಕೆ ಮಾಡುವ ಅಂಶಗಳಿದ್ದರೂ ಆ ಭಾಷಣವನ್ನು ನಾನು ಓದುವುದಿಲ್ಲ. ನನ್ನದೇ ಆದ ಭಾಷಣವನ್ನು ಸಿದ್ಧಪಡಿಸಿ ಓದಬೇಕಾಗುತ್ತದೆ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಇದು ರಾಜ್ಯ ಸರಕಾರ ಮತ್ತು ರಾಜ್ಯಪಾಲರ ನಡುವೆ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿತ್ತು.

ಗಣರಾಜ್ಯೋತ್ಸವದಂದು ರಾಜ್ಯಪಾಲರು ಮಾಡುವ ಭಾಷಣದಲ್ಲಿ ‘ವಿಬಿ-ಜಿ ರಾಮ್ ಜಿ’ ಕಾಯ್ದೆಯನ್ನು ಟೀಕಿಸುವ ಅಂಶವಿಲ್ಲವಾದರೂ ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಅನುದಾನ ಹಂಚಿಕೆಯಲ್ಲಿ ಆಗಿರುವ ಅನ್ಯಾಯ, ತಾರತಮ್ಯದ ಅಂಶಗಳಿದ್ದು, ಕೇಂದ್ರ ಮಲತಾಯಿ ಧೋರಣೆಯ ಅಂಶಗಳನ್ನು ಭಾಷಣದಲ್ಲಿ ರಾಜ್ಯ ಸರಕಾರ ಸೇರ್ಪಡೆ ಮಾಡಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News