×
Ad

ಗ್ರಾ.ಪಂ. ಕಚೇರಿಗಳಿಗೆ ‘ಮಹಾತ್ಮ ಗಾಂಧಿ ಗ್ರಾಮ ಪಂಚಾಯಿತಿ ಕಚೇರಿ’ ಎಂದು ನಾಮಕರಣ ಮಾಡಿ’: ಸಿಎಂಗೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪತ್ರ

Update: 2026-01-24 19:30 IST

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹೆಸರು ಚಿರಸ್ಥಾಯಿಯಾಗಿ ಉಳಿಯಲು ರಾಜ್ಯದಲ್ಲಿರುವ 6 ಸಾವಿರಕ್ಕೂ ಹೆಚ್ಚು ಗ್ರಾಮ ಪಂಚಾಯಿತಿ ಮತ್ತು ಇತರೆ ಸ್ಥಳೀಯ ಸಂಸ್ಥೆಗಳ ಕಚೇರಿಗಳಿಗೆ ‘ರಾಷ್ಟ್ರಪಿತ ಮಹಾತ್ಮ ಗಾಂಧಿ ಗ್ರಾಮ ಪಂಚಾಯಿತಿ ಕಚೇರಿ’ ಎಂದು ನಾಮಕರಣ ಮಾಡಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಂಸದ ವಿ.ಎಸ್.‌ ಉಗ್ರಪ್ಪ ಮನವಿ ಮಾಡಿದ್ದಾರೆ.

ಶನಿವಾರ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿರುವ ಅವರು, ‘ಮಹಾತ್ಮ ಗಾಂಧಿಯವರು ವಿಶ್ವಕಂಡು ಅರಿಯದ ವಿಶಿಷ್ಟ ಅಸ್ತ್ರಗಳಾದ ‘ಸತ್ಯಾಗ್ರಹ, ಅಹಿಂಸಾ ಚಳುವಳಿ’ ಮೂಲಕ ಸೂರ್ಯ ಮುಳುಗದ ಸಾಮ್ರಾಜ್ಯದ ಬ್ರಿಟಿಷರನ್ನು ಭಾರತದಿಂದ ತೊಲಗಿಸಿ ಭಾರತಾಂಬೆಯನ್ನು ಸ್ವತಂತ್ರಗೊಳಿಸಿದ ಸ್ವಾತಂತ್ರ್ಯ ಚಳುವಳಿಯ ಮಹಾನ್ ಸೇನಾನಿ’ ಎಂದು ಬಣ್ಣಿಸಿದ್ದಾರೆ.

‘ಗಾಂಧೀಜಿಯ ಹೋರಾಟ, ತ್ಯಾಗ, ಬಲಿದಾನ, ವೈಚಾರಿಕತೆಗಳನ್ನು ಗೌರವಯುತವಾಗಿ ಪರಿಗಣಿಸಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರಕಾರ ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಸೃಷ್ಟಿಸುವ ಕಾರಣದಿಂದ ‘ಮನರೇಗಾ’ ಕಾಯ್ದೆ ಮಾಡಿ ನಿರುದ್ಯೋಗ-ಬಡತನ ಸಮಸ್ಯೆಗಳಿಗೆ ಪರಿಹಾರ ರೂಪಿಸಲು ಕಾಯ್ದೆ ಮಾಡಿ ಉದ್ಯೋಗ ಸೃಷ್ಟಿ ಮಾಡಲಾಗುತ್ತಿದೆ. ಇದು ಗ್ರಾಮೀಣ ಭಾಗಗಳಲ್ಲಿ ಅಭಿವೃದ್ಧಿಗೆ ಪೂರಕವಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಆದರೆ, 2014ರಲ್ಲಿ ಅಧಿಕಾರಕ್ಕೆ ಬಂದ ಮೋದಿಯವರ ನೇತೃತ್ವದ ಸರಕಾರ ಈ ಯೋಜನೆಗೆ ಅನುದಾನ ನೀಡದೆ ಈ ಕಾರ್ಯಕ್ರಮ ನಿರೀಕ್ಷೆಯ ಮಟ್ಟ ಮುಟ್ಟುತ್ತಿಲ್ಲ. ಇತ್ತೀಚೆಗೆ ಸದರಿ ಕಾಯ್ದೆಗೆ ತಿದ್ದುಪಡಿಗಳನ್ನು ತಂದು, ಗಾಂಧಿಯವರ ಹೆಸರನ್ನು ಕಾಯ್ದೆಯಿಂದ ಕೈಬಿಟ್ಟು ‘ವಿಕಸಿತ ಭಾರತ ಜಿರಾಮ್‍ಜಿ’ ಎಂದು ಕಾಯ್ದೆ ಮಾಡಿ ಗಾಂಧಿಯವರಿಗೆ ಅಪಮಾನ ಮಾಡಿರುತ್ತಾರೆ ಎಂದು ಉಗ್ರಪ್ಪ ಆಕ್ಷೇಪಿಸಿದ್ದಾರೆ.

ಅಲ್ಲದೆ, ಇದು ಸಂವಿಧಾನ ಅನುಚ್ಛೇದ 51ಎ ಇತರ ಪ್ರಕ್ರಿಯೆಗಳಿಗೆ ವಿರುದ್ಧವಾಗಿರುತ್ತದೆ. ಇದನ್ನು ಭಾರತದ ಯಾವೊಬ್ಬ ಪ್ರಜೆಯೂ ಸಹಿಸುವುದಿಲ್ಲ. ಇದು ಮಹಾತ್ಮ ಗಾಂಧಿ ಸಿದ್ಧಾಂತವನ್ನು ಅಳಿಸಿ, ನಾಥೋರಾಮ್ ಗೋಡ್ಸೆ ಸಿದ್ಧಾಂತಕ್ಕೆ ಮಹತ್ವ ನೀಡುವ ಬಿಜೆಪಿ ಮತ್ತು ಆರೆಸ್ಸೆಸ್‍ನ ಗುಪ್ತ ಕಾರ್ಯಸೂಚಿಯಾಗಿರುತ್ತದೆ ಎಂದು ಅವರು ಉಲ್ಲೇಖಿಸಿದ್ದಾರೆ.

ಗಾಂಧಿಯವರ ವಿಚಾರಧಾರೆಯಲ್ಲಿ ಪೂರ್ಣ ನಂಬಿಕೆ ಇಟ್ಟಿರುವ ಕಾಂಗ್ರೆಸ್ ಪಕ್ಷದ ಸರಕಾರ ಸೂಕ್ತ ಉತ್ತರವನ್ನು ಮೋದಿ ಸರಕಾರ ಮತ್ತು ಗೋಡ್ಸೆವಾದಿಗಳಿಗೆ ನೀಡಬೇಕಾಗಿರುತ್ತದೆ. ಆದುದರಿಂದ ಜನಮಾನಸದಲ್ಲಿ ಸರ್ವಕಾಲಿಕವಾಗಿರುವ ಗಾಂಧಿ ವಿಚಾರಧಾರೆ ಉಳಿಸುವ ನಿಟ್ಟಿನಲ್ಲಿ ಗ್ರಾ.ಪಂ. ಮತ್ತು ಇತರೆ ಸ್ಥಳೀಯ ಸಂಸ್ಥೆಗಳು ಕಚೇರಿಗಳಿಗೆ ‘ಮಹಾತ್ಮ ಗಾಂಧಿ ಗ್ರಾಮ ಪಂಚಾಯಿತಿ ಕಚೇರಿ’ ಎಂದು ನಾಮಕರಣ ಮಾಡಬೇಕು ಎಂದು ಅವರು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News