ʼಅಧಿಕಾರದ ದುರಾಸೆಗೆ ಸಿದ್ಧಾಂತವನ್ನೇ ಮರೆತಿರುವವರು ನೀವುʼ : ನಿಖಿಲ್ ಕುಮಾರಸ್ವಾಮಿ ವಿರುದ್ಧ ಕಾಂಗ್ರೆಸ್ ಆಕ್ರೋಶ
ಬೆಂಗಳೂರು : ʼಆರೆಸ್ಸೆಸ್ 100 ವರ್ಷಗಳಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಿದೆʼ ಎಂಬ ನಿಖಿಲ್ ಕುಮಾರಸ್ವಾಮಿ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಕಾಂಗ್ರೆಸ್, ʼಎರಡು ನಾಲಿಗೆಯ ಸಂಸ್ಕೃತಿ ನಿಮ್ಮ ರಕ್ತದಲ್ಲೇ ಹರಿಯುತ್ತಿದೆ ಎಂದು ಇಡೀ ಕರ್ನಾಟಕ ರಾಜ್ಯಕ್ಕೆ ಗೊತ್ತಿದೆʼ ಎಂದು ವಾಗ್ದಾಳಿ ನಡೆಸಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಫೇಸ್‌ಬುಕ್ ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಕಾಂಗ್ರೆಸ್, ʼಅಧಿಕಾರದ ದುರಾಸೆಗೆ ಸಿದ್ಧಾಂತವನ್ನೇ ಮರೆತಿರುವ ನಿಮಗೆ, ಈ ಹಿಂದೆ ಆರೆಸ್ಸೆಸ್ ವಿರುದ್ಧ ನಿಮ್ಮ ವಂಶಸ್ಥರು ಏನೆಲ್ಲಾ ಹೇಳಿದ್ದರು ಎಂಬುದು ಎಲ್ಲಿ ನೆನಪಿರುತ್ತದೆ. ಪರವಾಗಿಲ್ಲ, ನಾವು ನಿಮಗೆ ನೆನಪು ಮಾಡಿಸುತ್ತೇವೆʼ ಎಂದು ಆರೆಸ್ಸೆಸ್ ಕುರಿತ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿಯವರ ಹೇಳಿಕೆಯನ್ನು ಕಾಂಗ್ರೆಸ್ ಉಲ್ಲೇಖಿಸಿದೆ.
ಎಚ್.ಡಿ.ಕುಮಾರಸ್ವಾಮಿ ಅವರು "ಆರೆಸ್ಸೆಸ್ ಈಗ ಪರಿಶುದ್ಧ ಸೇವಾಸಂಸ್ಥೆಯಾಗಿ ಉಳಿದಿದೆಯೇ? ಉಳಿದಿದ್ದರೆ ಪವರ್ ಸೆಂಟರ್ ಆಗುವ ತವಕ ಏಕೆ? ಮೋದಿ ನೇತೃತ್ವದ ಸರಕಾರದ ಜುಟ್ಟು ನಾಗಪುರದ ಸಂಘದ ಕಚೇರಿಯಲ್ಲಿದೆ ಎನ್ನುವುದು ಸುಳ್ಳೇ? ಕನಿಷ್ಠ ಸರಕಾರ, ಗರಿಷ್ಠ ಆಡಳಿತ ಅಂದರೆ ಇದೇನಾ? ಇದು ಬಹುಶಃ ಕನಿಷ್ಠ ಪ್ರಜಾಪ್ರಭುತ್ವ, ಗರಿಷ್ಠ ಸರ್ವಾಧಿಕಾರದ ಪರಿಕಲ್ಪನೆ" ಎಂದು ಹೇಳಿದ್ದರು.
"ಆರೆಸ್ಸೆಸ್, ವಿಎಚ್‌ಪಿ, ಬಜರಂಗದಳ ಮತ್ತು ಶಿವಸೇನೆಯಂಥ ಕೋಮು ಸಂಘಟನೆಗಳನ್ನು ನಿಷೇಧಿಸಬೇಕು" ಎಂದು ಎಚ್.ಡಿ ದೇವೇಗೌಡ ಅವರು ಹೇಳಿದ್ದರು ಎಂದು ಕಾಂಗ್ರೆಸ್ ಉಲ್ಲೇಖಿಸಿದೆ.
ನಿಖಿಲ್ ಕುಮಾರಸ್ವಾಮಿಯವರೇ ನಿಮ್ಮ ಪಿತಾಶ್ರೀ ಹಾಗೂ ತಾತಾಶ್ರೀ ಅವರು ತಮ್ಮ ಯಾವ ಲೋಪ ಮುಚ್ಚಿಕೊಳ್ಳಲು ಆರೆಸ್ಸೆಸ್ ವಿರುದ್ಧ ಮಾತನಾಡಿದ್ದರು ಹೇಳುವಿರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.