×
Ad

SIR ಕುರಿತು ಜೂ.23ರಿಂದ ‘ಕಾಂಗ್ರೆಸ್ ನಡಿಗೆ ಮತದಾರರ ಕಡೆಗೆ’ ಜಾಗೃತಿ ಅಭಿಯಾನ

ಮಂಗಳೂರು, ಹುಬ್ಬಳ್ಳಿ, ಮೈಸೂರು, ಕಲಬುರಗಿ, ಬೆಂಗಳೂರಿನಲ್ಲಿ ಸಮಾವೇಶ

Update: 2026-06-15 19:20 IST

ಸಾಂದರ್ಭಿಕ ಚಿತ್ರ (PTI)

ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‍ಐಆರ್) ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು, ಮತದಾರರನ್ನು ಮತದಾರರ ಪಟ್ಟಿಯಿಂದ ಹೊರಹೋಗದಂತೆ ರಕ್ಷಿಸಲು ಹಾಗೂ ಪಕ್ಷ ಬಲವರ್ಧನೆ ಉದ್ದೇಶದಿಂದ ಜೂ.23ರಿಂದ ‘ಕಾಂಗ್ರೆಸ್ ನಡಿಗೆ ಮತದಾರರ ಕಡೆಗೆ’ ಎಂಬ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದೆ.

ಸೋಮವಾರ ಈ ಸಂಬಂಧ ಪ್ರಕಟಣೆ ನೀಡಿರುವ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ಎಸ್‍ಐಆರ್ ಕುರಿತು ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಜೂ.23ರಂದು ಮಂಗಳೂರು, ಜೂ.25ರಂದು ಹುಬ್ಬಳ್ಳಿ, ಜೂ.27ರಂದು ಮೈಸೂರು, ಜೂ.29ರಂದು ಕಲಬುರಗಿ ಹಾಗೂ ಜೂ.30ರಂದು ಬೆಂಗಳೂರಿನಲ್ಲಿ ವಿಭಾಗೀಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಈ ಸಮಾವೇಶಗಳಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ)ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ಉಸ್ತುವಾರಿ ರಣದೀಪ್‍ಸಿಂಗ್ ಸುರ್ಜೇವಾಲ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಕಾರ್ಯಾಧ್ಯಕ್ಷ ಜಿ.ಸಿ.ಚಂದ್ರಶೇಖರ್, ಸಚಿವರು ಹಾಗೂ ಪಕ್ಷದ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗವು ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯವನ್ನು ಆರಂಭಿಸಿದೆ. ಜೂ.30ರಿಂದ ಈ ಪ್ರಕ್ರಿಯೆಯಲ್ಲಿ ಬಿಎಲ್‍ಒಗಳು ಮನೆ-ಮನೆಗೆ ಭೇಟಿ ನೀಡಿ ಎನ್ಯುಮರೇಶನ್ ಅರ್ಜಿಯನ್ನು ಮತದಾರರಿಗೆ ನೀಡಿ ಮಾಹಿತಿ ಪಡೆದುಕೊಂಡು ಚು.ಆಯೋಗಕ್ಕೆ ಸಲ್ಲಿಸಲಿದ್ದಾರೆ. ಕೇಂದ್ರದ ಬಿಜೆಪಿ ನೇತೃತ್ವದ ಸರಕಾರವು ಚು.ಆಯೋಗದ ಮೇಲೆ ಪ್ರಭಾವ ಬೀರಿ ತಮ್ಮ ಅನುಕೂಲಕ್ಕೆ ತಕ್ಕಂತೆ ಬಿಜೆಪಿ ಗೆಲುವಿಗೆ ಈ ಸಂಸ್ಥೆಯನ್ನು ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ಅವರು ಸಂಶಯ ವ್ಯಕ್ತಪಡಿಸಿದ್ದಾರೆ.

ಆ ಹಿನ್ನೆಲೆಯಲ್ಲಿ ನೈಜ ಮತದಾರರ ಹೆಸರುಗಳು ಮತದಾರರ ಪಟ್ಟಿಯಿಂದ ಹೊರ ಹೋಗದಂತೆ ರಕ್ಷಿಸಲು ಹಾಗೂ ನಮ್ಮ ಪಕ್ಷದ ಬೆಂಬಲಿಗರು ಮತ್ತು ಹಿತೈಷಿಗಳು ಮತದಾರರ ಪಟ್ಟಿಯಿಂದ ಹೊರ ಹೋಗದಂತೆ ತಡೆಯಬೇಕಿದೆ. ಅಲ್ಲದೆ, ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆಶಯಗಳನ್ನು ಗಟ್ಟಿಗೊಳಿಸುವ ಸಲುವಾಗಿ ಕೆಪಿಸಿಸಿ ಹಂತದಲ್ಲಿ ಚುನಾವಣಾ ಆಯೋಗವು ತನ್ನ ಕರ್ತವ್ಯಗಳಲ್ಲಿ ಎಚ್ಚರ ತಪ್ಪದಂತೆ ನೋಡಿಕೊಳ್ಳುವುದು ರಾಜಕೀಯ ಪಕ್ಷವಾಗಿ ನಮ್ಮ ಹಕ್ಕು ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿಭಾಗೀಯ ಮಟ್ಟದ ಸಮಾವೇಶಗಳನ್ನು ಯಶಸ್ವಿಯಾಗಿ ಸಂಘಟಿಸಲು ಪಕ್ಷದ ಎಲ್ಲ್ಲ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಪಾಲ್ಗೊಳ್ಳಬೇಕು. ನೈಜ ಮತದಾರರ ಹಿತಾಸಕ್ತಿ ಹಾಗೂ ಪಕ್ಷದ ಸಂಘಟನೆ ದೃಷ್ಟಿಯಿಂದ ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News